Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಾಜಿ ಶಾಸಕ ರಾಜಣ್ಣ ಪ್ರತಿಕೃತಿ ದಹಿಸಿ ಆಕ್ರೋಶ

ಮಾಜಿ ಪ್ರಧಾನಿ ಹಾಗೂ ಹಿರಿಯ ರಾಜಕೀಯ ಮುತ್ಸದ್ಧಿ ಹೆಚ್.ಡಿ ದೇವೇಗೌಡರ ಬಗ್ಗೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಲಘುವಾಗಿ ಮಾತ‌ನಾಡಿರುವುದನ್ನು ಖಂಡಿಸಿ ಶಾಸಕ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಪಾಂಡವಪುರ ಪಟ್ಟಣದಲ್ಲಿ ರಸ್ತೆ ತಡೆ ನಡೆಸಿ, ಮಾಜಿ ಶಾಸಕ ರಾಜಣ್ಣ ಪ್ರತಿಕೃತಿಗೆ ಬೆಂಕಿ ಹಚ್ಚಿ ಉಗ್ರ ವಿರೋಧ ವ್ಯಕ್ತಪಡಿಸಿದರು.

ಪಾಂಡವಪುರ ಪಟ್ಟಣದ ಐದು ದೀಪ ವೃತ್ತದಲ್ಲಿ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ರಸ್ತೆ ತಡೆ ನಡೆಸಿ, ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಸಿ.ಎಸ್‌.ಪುಟ್ಟರಾಜು ಮಾತನಾಡಿ, ಕೆ.ಎನ್. ರಾಜಣ್ಣನವರು ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಹಗುರವಾಗಿ ಮಾತನಾಡಿರುವುದು ಖಂಡನೀಯ.

ದೇವೇಗೌಡರ ಬಗ್ಗೆ ಇಂತಹ ಕೀಳು ಮಟ್ಟದ ಹೇಳಿಕೆ ನೀಡಿರುವ ರಾಜಣ್ಣನಿಗೆ ಜನರೇ ಬುದ್ಧಿ ಕಲಿಸಲಿದ್ದಾರೆ ಎಂದರು. ದೇವೇಗೌಡರ ಬಗ್ಗೆ ರಾಜಣ್ಣ ಮಾತನಾಡಿರುವುದು ಅವರನ್ನು ದೀರ್ಘಾಯುಷಿಯಾಗಿ ಮಾಡುತ್ತದೆ.

ದೇವೇಗೌಡರು ಇನ್ನೂ ನೂರಾರು ವರ್ಷಗಳ ಕಾಲ ನಮಗೆ, ನಮ್ಮ ಪಕ್ಷಕ್ಕೆ ಮಾರ್ಗದರ್ಶನ ಮಾಡಲಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಮತ್ತು ದೇವೇಗೌಡರ ಅಭಿಮಾನಿಗಳು ಮನಸ್ಸಿಗೆ ನೋವು ಮಾಡಿಕೊಳ್ಳುವುದು ಬೇಡ. ಮುಂದಿನ ಕೆಲ ದಿನಗಳಲ್ಲಿ ನಮ್ಮ ಕಾರ್ಯಕರ್ತರು ಅವರಿಗೆ ತಕ್ಕ ಶಾಸ್ತಿ ಮಾಡುತ್ತಾರೆ ಎಂದರು.

ರಾಜಣ್ಣನವರು ಆಡಿರೋ ಮಾತನ್ನು ದೇವರೇ ನೋಡಿಕೊಳ್ಳುತ್ತಾನೆ. ಆತನೇ ಅವರಿಗೆ ಶಿಕ್ಷೆ ನೀಡುತ್ತಾನೆ .‌ಕಾಂಗ್ರೆಸ್ ಹೈಕಮಾಂಡ್ ರಾಜಣ್ಣನವರಿಗೆ ದೇವೇಗೌಡರ ಮನೆಗೆ ಹೋಗಿ ಕ್ಷಮೆ ಕೇಳುವಂತೆ ಸೂಚಿಸಿದ್ದಾರೆ.ಅವರು ಹೋಗಿ ಕ್ಷಮೆ ಕೇಳದಿದ್ದರೆ ಅವರು ಎಲ್ಲಿ ಇರುತ್ತಾರೋ ಅಲ್ಲಿಗೆ ಹೋಗಿ ಬುದ್ಧಿ ಕಲಿಸುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಜೆಡಿಎಸ್ ಕಾರ್ಯಕರ್ತರು ರಸ್ತೆ ತಡೆ ನಡೆಸಿದ ಪರಿಣಾಮ ಮೈಸೂರು, ಮಂಡ್ಯ ಮಾರ್ಗದ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡಿತ್ತು.

ಪ್ರತಿಭಟನೆಯಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಸಿ.ಅಶೋಕ್, ಪುರಸಭೆ ಅಧ್ಯಕ್ಷೆ ಅರ್ಚನಾ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಶ್ಯಾದನಹಳ್ಳಿ ಚಲುವರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ಕಸಬಾ ಸೊಸೈಟಿ ಅಧ್ಯಕ್ಷ ಮಹೇಶ್ ಸೇರಿದಂತೆ ಜೆಡಿಎಸ್ ಪಕ್ಷದ ಜನಪ್ರತಿನಿಧಿಗಳು, ಮುಖಂಡರು ಪಾಲ್ಗೊಂಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!