Thursday, September 19, 2024

ಪ್ರಾಯೋಗಿಕ ಆವೃತ್ತಿ

ಪರೀಕ್ಷೆ ಎಂದರೆ ಹಬ್ಬ ಎನ್ನುವ ಪರಿಕಲ್ಪನೆ ಮೂಡಲಿ : ವೇದಮೂರ್ತಿ

ಪರೀಕ್ಷೆ ಎಂದರೇ ಹಬ್ಬ ಎನ್ನುವ ಪರಿಕಲ್ಪನೆಯನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮೂಡಿಸುವ ಉದ್ದೇಶವೇ ಕಲಿಕಾ ಹಬ್ಬದ ಉದ್ದೇಶವಾಗಿದ್ದು, ಮಕ್ಕಳಲ್ಲಿ ನವಚೈತನ್ಯ ಮೂಡಿಸಲು ಸಹಕಾರಿಯಾಗಿದೆ ಎಂದು ಡಯಟ್ ಪ್ರಾಂಶುಪಾಲ ವೇದಮೂರ್ತಿ ಹೇಳಿದರು.

ಮಳವಳ್ಳಿ ತಾಲ್ಲೂಕಿನ ತಳಗವಾದಿ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾಪಂಚಾಯತ್ ಮಂಡ್ಯ, ಉಪನಿರ್ದೆಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ, ಸಮಗ್ರ ಶಿಕ್ಷಣ ಕರ್ನಾಟಕ, ಉಪ ನಿರ್ದೆಶಕರು( ಅಭಿವೃದ್ದಿ) ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಇವರ ಸಂಯುಕ್ತಾಶ್ರದಲ್ಲಿ ಮಂಡ್ಯ ಜಿಲ್ಲಾಮಟ್ಟದ ಕಲಿಕಾ ಹಬ್ಬವನ್ನು ವೈಜ್ಞಾನಿಕವಾಗಿ ಉದ್ಘಾಟಿಸಿ ಮಾತನಾಡಿದರು.

ಕೋವಿಡ್-19 ಸಾಂಕ್ರಾಮಿಕ ರೋಗ ಕಾಣಸಿಕೊಂಡಿದ್ದ ಸಂದರ್ಭದಲ್ಲಿ ಶಾಲೆಗಳು ಮುಚ್ಚಿದ್ದ ಹಿನ್ನೆಲೆಯಲ್ಲಿ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದರು, ಹೀಗಾಗಿ ಕಲಿಕಾ ಚೇತರಿಕೆಗೆ ಅನುಕೂಲವಾಗುವಂತೆ ಕಲಿಕಾ ಹಬ್ಬವನ್ನು ಕ್ಲಸ್ಟರ್ ಮಟ್ಟದಿಂದ ಜಿಲ್ಲಾ ಮಟ್ಟದ ಕಲಿಕಾ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದರು.

ಇಡೀ ಗ್ರಾಮಸ್ಥರ ಹಬ್ಬವಾಗಿತ್ತು

ತಳಗವಾದಿಯಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಕಲಿಕ ಹಬ್ಬ ಕೇವಲ ವಿದ್ಯಾರ್ಥಿಗಳಿಗೆ ಮಾತ್ರ ಹಬ್ಬವಾಗಿರಲ್ಲಿಲ್ಲ, ಇಡೀ ಗ್ರಾಮಸ್ಥರ ಹಬ್ಬವಾಗಿತ್ತು, ಜಾನಪದ ಭವ್ಯ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಬಾಗಿಯಾಗಿರುವುದು ಹಬ್ಬಕ್ಕೆ ಮತ್ತಷ್ಟು ಕಳೆ ಬರುವಂತೆ ಮಾಡಿತು ಎಂದರು.

ಹಾಡು-ಪಾಡು, ವೈಜ್ಞಾನಿಕ ಮಾಹಿತಿ ನೀಡುವ ಮಾಡು-ಆಡು, ಸೃಜನಶೀಲತೆ ಬೆಳೆಸುವ ಕಾಗದ-ಕತ್ತರಿ, ಜ್ಞಾನಾಭಿವೃದ್ಧಿಗೆ ಊರು ಸುತ್ತೋಣ ಎಂಬ ನಾಲ್ಕು ಹಂತಗಳಲ್ಲಿ ಕಲಿಕಾ ಹಬ್ಬವನ್ನು ಹಮ್ಮಿಕೊಳ್ಳಲಾಗಿದ್ದು, ಆಟ ಹಾಡಿಕೊಂಡೇ ಅಕ್ಷರವನ್ನು ಕಲಿಸುವ ಯೋಜನೆಯಾಗಿದ್ದು, ಕಲಿಕಾ ಹಬ್ಬದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡುವುದರ ಜೊತೆಗೆ ಕಲಿಕೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಲಾಗುತ್ತಿದೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌ಪಿ ನಾಗರಾಜು ಮಾತನಾಡಿ, ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಹಾಗೂ ವಿಮರ್ಶನಾತ್ಮಕವಾಗಿ ಚಿಂತನೆ ಮಾಡುವ ಕ್ರಮವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವಂತೆ ಕಲಿಕಾ ಹಬ್ಬದಲ್ಲಿ ತರಬೇತಿ ನೀಡಲಾಗುತ್ತದೆ, ಜಿಲ್ಲಾ ಮಟ್ಟದ ಕಲಿಕಾ ಹಬ್ಬ ಯಶಸ್ವಿಗೆ ಕಳೆದ ಹತ್ತು ದಿನಗಳಿಂದ ಬಿಆರ್‌ಸಿ, ಮುಖ್ಯಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಲಾವಿದರು ನಿರಂತರವಾಗಿ ಶ್ರಮಿಸಿ ಹಾಡುತ್ತಾ ಕಲಿಯುವ ವಾತರವಣವನ್ನು ಸೃಷ್ಠಿಸಿದ್ದಾರೆ. ತಳಗವಾದಿ ಶಾಲೆ ಸುಂದರ ತೋಟ ಹಾಗೂ ಶಾಲೆಯಾಗಿ ಮಾರ್ಪಟ್ಟಿದೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಟಿಎಂಪ್ರಕಾಶ್ ಮಾತನಾಡಿ, ತಳಗವಾದಿಯಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಕಲಿಕಾ ಹಬ್ಬದಲ್ಲಿ 8 ತಾಲ್ಲೂಕಿನಿಂದ 150 ವಿದ್ಯಾರ್ಥಿಗಳು ಪಾಲ್ಗೊಳ್ಳಲಾಗುತ್ತಿದ್ದು, ಕಲಿಕಾ ಹಬ್ಬದ ಯಶಸ್ವಿಗೆ ಎಲ್ಲಾ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ, ಸ್ಥಳೀಯ 150 ವಿದ್ಯಾರ್ಥಿಗಳ ಮನೆಯಲ್ಲಿ 150 ಅತಿಥಿ ವಿದ್ಯಾರ್ಥಿಗಳು ಉಳಿದುಕೊಳ್ಳುವಂತೆ ಮಾಡಿ, ಹಾಡುತ್ತಾ ಕೇಳುತ್ತಾ ಅಕ್ಷರಗಳನ್ನು ಕಲಿಸುವ ಕಲಿಕಾ ಹಬ್ಬವನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಕಾರ್ಯಕ್ರಮಕ್ಕೂ ಮುನ್ನಾ ಕಲಿಕಾ ಹಬ್ಬದ ಅಂಗವಾಗಿ ನಡೆದ ಭವ್ಯ ಜಾನಪದ ಮೆರವಣಿಗೆಗೆ ಡಿಡಿಪಿಐ ಜವರೇಗೌಡ ಚಾಲನೆ ನೀಡಿದರು. ತಳಗವಾದಿ ಗ್ರಾಮದ ಉಮಾಮಹೇಶ್ವರಿ ದೇವಸ್ಥಾನದಿಂದ ಸರ್ಕಾರಿ ಶಾಲೆಯ ವರೆಗೆ ಡೊಳ್ಳುಕುಣಿತ, ಪೂಜೆ ಕುಣಿತ, ದೊಣ್ಣೆವರಸೆ,ಕೋಲಾಟ, ಗೊಂಬೆ ವೇಷ, ಪಟ್ಟದ ಕುಣಿತ, ಸೇರಿದಂತೆ ಹಲವಾರು ಜಾಪದ ಕಲಾಮೇದ ಮೆರವಣಿಗೆ ಗಮನ ಸೆಳೆಯಿತು.

ಎನ್.ಸಿ.ಸಿ. ವಿದ್ಯಾರ್ಥಿಗಳ ತಂಡ ಕಾರ್ಯಕ್ರಮಕ್ಕೆ ಬಂದ ಅತಿಥಿಗಳನ್ನು ಗೌರವ ಪೂರ್ವಕವಾಗಿ ವೇದಿಕೆಗೆ ಕರೆ ತಂದರು. ಸರ್ಕಾರಿ ಪ್ರೌಢಶಾಲೆ ಆವರಣದವನ್ನು ಮದುವಣಗಿತ್ತಿಯಂತೆ ಸಿಂಗಾರಗೊಳಿಸಲಾಗಿತ್ತು. ಎಸ್‌ಡಿಎಂಸಿ ಅಧ್ಯಕ್ಷರು, ವಿದ್ಯಾರ್ಥಿಗಳು, ಶಿಕ್ಷಕರು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಮಟೆ ತಾಳಕ್ಕೆ ಕುಣಿದು ಕುಪ್ಪಳಿಸಿದರು.

ವೇದಿಕೆಯಲ್ಲಿ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಟಿ.ಲಕ್ಷ್ಮಿ, ಉಪ ಯೋಜನಾ ಸಮನ್ವಯಾಧಿಕಾರಿ ರೇಣುಕಮ್ಮ, ತೆಹರಾ, ಗೋಪಾಲಗೌಡ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಕೆ.ಶ್ರೀನಿವಾಸ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎ.ಸಿ.ಜಯಪ್ರಕಾಶ್, ಅಂತರಾಷ್ಟ್ರೀಯ ಪೂಜಾ ಕುಣಿಕ ಕಲಾವಿದೆ ಸವಿತಾ ಚೀರಕುನ್ನಯ್ಯ, ಚಂದ್ರಕಾಂತ, ನಾಗೇಂದ್ರ ಮೂರ್ತಿ, ಲೋಕೇಶ್, ಎಚ್.ಮಲ್ಲಿಕಾರ್ಜುನಯ್ಯ ನಾಗರಾಜು, ಜಾಕೀರ್ ಪಾಷಾ, ಎಚ್.ನಾಗೇಶ್, ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!