Thursday, September 19, 2024

ಪ್ರಾಯೋಗಿಕ ಆವೃತ್ತಿ

ಡಿ.19ರಂದು ಮಂಡ್ಯ ನಗರ ಬಂದ್ : ಸಹಕರಿಸಲು ಜನತೆಗೆ ರೈತಸಂಘ ಮನವಿ

ಕಬ್ಬಿಗೆ 4,500 ಬೆಲೆ ನಿಗದಿ, ಹಾಲಿನ ದರ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ನಡೆಸುತ್ತಿರುವ ಧರಣಿಗೆ ಸರ್ಕಾರ ಮನ್ನಣೆ ನೀಡದ ಹಿನ್ನೆಲೆಯಲ್ಲಿ ಡಿಸೆಂಬರ್ 19ರಂದು ಮಂಡ್ಯ ನಗರ ಬಂದ್ ಮಾಡಲಾಗುವುದು ಎಂದು ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತ ಸಂಘದಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ 34ನೇ ದಿನ ಕಾಲಿಟ್ಟಿದ್ದು, ಸರ್ಕಾರ ಇನ್ನು ಕೂಡ ಕಬ್ಬಿನ ದರ ನಿಗದಿ ಮಾಡದ ಕಾರಣ, ಮಂಡ್ಯದ ಎಲ್ಲಾ ಪ್ರಗತಿಪರ ಸಂಘಟನೆಗಳು, ಆಟೋ ಚಾಲಕರು, ಲಾರಿ ಮಾಲೀಕರು, ವರ್ತಕರು, ಹೋಟೆಲ್ ಮಾಲೀಕರು, ದಸಂಸ, ಕನ್ನಡ ಪರ ಸಂಘಟನೆಗಳು ಸೇರಿದಂತೆ ಎಲ್ಲರ ಬೆಂಬಲದಿಂದ ಡಿ. 19ರಂದು ಮಂಡ್ಯ ನಗರವನ್ನು ಸಂಪೂರ್ಣವಾಗಿ ಬಂದು ಮಾಡಲು ತೀರ್ಮಾನಿಸಲಾಗಿದೆ. ಇದಕ್ಕೆ ಮಂಡ್ಯದ ನಾಗರಿಕರು ಸಹಕಾರ ನೀಡಿ ಬಂದ್ ಗೆ ಸಹಕರಿಸುವಂತೆ ಕೋರಿದರು.

ರೈತ ಸಂಘದಿಂದ ಅಹೋರಾತ್ರಿ ಧರಣಿ ನಡೆಯುತ್ತಿರುವ ಕಾರಣದಿಂದ ಹಾಲು ಒಕ್ಕೂಟ ಹಾಲಿನ ಬೆಲೆಯನ್ನು ಎರಡು ರೂಪಾಯಿ ಹೆಚ್ಚಳ ಮಾಡಲಾಗಿದೆ. ಐದು ರೂಪಾಯಿ ಪ್ರೋತ್ಸಾಹ ಧನ ಸೇರಿ ಲೀ.37 ರೂಪಾಯಿ ಸಿಗುತ್ತಿದೆ. ನಾವು ಕೇಳಿರುವುದು 40 ರೂಪಾಯಿ. ಸರ್ಕಾರ ಹಾಲಿಗೆ ನಲವತ್ತು ರೂಪಾಯಿ ಹಣವನ್ನು ಹಾಗೂ ಟನ್ ಕಬ್ಬಿಗೆ 4,500 ನೀಡಬೇಕು ಎಂದರು.

ಕಹಿಯನ್ನಾದರೂ ನೀಡಿ

ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕಬ್ಬಿನ ಬೆಲೆ ನಿಗದಿ ಸಂಬಂಧ ರೈತರರೊಂದಿಗೆ ನಡೆಸಿದ ಸಭೆಯಲ್ಲಿ ನನಗೆ ಎಂಟು ದಿನ ಕಾಲಾವಕಾಶ ನೀಡಿ ಎಂದು ಕೇಳಿದ್ದರು. ಆದರೆ ಅವರು ಕೇಳಿ ಆರೇಳು ತಿಂಗಳು ಕಳೆದರೂ ಅವರು ಬೆಲೆ ಹೆಚ್ಚಳ ಮಾಡಿಲ್ಲ. ನಾಡಹಬ್ಬ ದಸರಾಗೆ, ದೀಪಾವಳಿಗೆ ಸಿಹಿ ಸುದ್ದಿ ಕೊಡುತ್ತೇವೆ ಎಂದ ಸರ್ಕಾರ ಸಿಹಿಯನ್ನು ನೀಡಲಿಲ್ಲ. ಹೋಗಲಿ ಆಗಲ್ಲ ಎನ್ನುವುದಾದರೆ ಸಿಎಂ ಬಸವರಾಜ ಬೊಮ್ಮಾಯಿ ಯವರು ಬೆಳಗಾವಿ ಅಧಿವೇಶನದಲ್ಲಿ ನಮಗೆ ಕಬ್ಬಿನ ಬೆಲೆ ಹೆಚ್ಚಳ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಕಹಿಯನ್ನಾದರೂ ನೀಡಲಿ ಎಂದರು.

ಕೆ‌ಜಿ.ಗೆ 5 ಪೈಸೆ ಸಾಕಾ

ರೈತಸಂಘದ ಸಂಘಟನಾ ಕಾರ್ಯದರ್ಶಿ ಮಧುಚಂದನ್ ಮಾತನಾಡಿ, ಸರ್ಕಾರ ಪ್ರತಿ ಟನ್ ಕಬ್ಬಿಗೆ ಕೇವಲ 50 ರೂ. ಹಣವನ್ನು ಹೆಚ್ಚಳ ಮಾಡಿದೆ.ಎಥೆನಾಲ್ ನಿಂದ ಬರುವ ಆದಾಯದಲ್ಲಿ 50 ರೂ.ಹೆಚ್ವಳ ಮಾಡಿದ್ದಾರೆ. ರೈತರನ್ನು ಸರ್ಕಾರ ಭಿಕ್ಷುಕರೆಂದು ಪರಿಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆ.ಜಿ.ಗೆ 5 ಪೈಸೆ ಹೆಚ್ಚಳ ಮಾಡಿರುವುದು ಯಾವ ರೀತಿ ಎಂಬುದು ಗೊತ್ತಿಲ್ಲ. 5 ಪೈಸೆಗೆ ಏನು ಬರುತ್ತದೆ, ಸಾಕಾ ಎಂದು ಪ್ರಶ್ನಿಸಿದ ಅವರು, ಡಿ. 19ರಂದು ನಡೆಯುವ ಮಂಡ್ಯ ನಗರ ಬಂದ್ ಗೆ ಮಂಡ್ಯದ ಜನತೆ ಸ್ಪಂದಿಸಿ ರೈತರ ಪರವಾಗಿ ನಿಲ್ಲಬೇಕೆಂದು ಕೋರಿದರು.

ಸಂಪೂರ್ಣ ಬೆಂಬಲ

ನಾಲ್ವಡಿ ಕೃಷರಾಜ ಒಡೆಯರ್ ಟ್ರಸ್ಟ್ ಅಧ್ಯಕ್ಷ, ಜೆಡಿಎಸ್ ಮುಖಂಡ ತಗ್ಗಹಳ್ಳಿ ವೆಂಕಟೇಶ್ ಮಾತನಾಡಿ, ಡಿ. 19ರಂದು ನಡೆಯುವ ಮಂಡ್ಯ ನಗರ ಬಂದ್ ಗೆ ನಮ್ಮ ಟ್ರಸ್ಟ್ ಕೂಡ ಬೆಂಬಲ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಈಗಾಗಲೇ ವಿವಿಧ ಸಂಘಟನೆಗಳು ಬೆಂಬಲ ನೀಡಿದ್ದು, ರೈತರ ಎಲ್ಲಾ ಬೇಡಿಕೆಗಳು ನ್ಯಾಯಯುತವಾಗಿದ್ದು, ಅವರ ಪರ ನಾವೆಲ್ಲರೂ ನಿಲ್ಲಬೇಕಿದೆ ಎಂದು ಕೋರಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗಪ್ಪಾಜಿ,ಎಂ. ಕೆ.ನಾಯ್ಡು, ಶಂಕರೇಗೌಡ, ಶಿವಳ್ಳಿ ಚಂದ್ರು, ಟಿ.ಕೆ ರಾಮಕೃಷ್ಣ, ಎಚ್.ಎಲ್.ಪ್ರಕಾಶ ಸುದ್ದಿಗೋಷ್ಠಿಯಲ್ಲಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!