ಕೆ.ಆರ್.ಪೇಟೆ ಎಪಿಎಂಸಿ ಆವರಣದಲ್ಲಿ ಸ್ಥಾಪಿಸಿರುವ ಉಂಡೆ ಕೊಬ್ಬರಿ ಖರೀದಿ ಕೇಂದ್ರದ ಫ್ರೂಟ್ ಐಡಿಯಲ್ಲಿ ಹೆಸರು ನೋಂದಾಯಿಸಲು ರೈತರ ನೂಕು ನುಗ್ಗಲು ಉಂಟಾಗಿ ರೈತರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಸರ್ಕಾರವು ಕೊಬ್ಬರಿ ಖರೀದಿಗೆ ಬೆಂಬಲ ಬೆಲೆ ಘೋಷಿಸಿರುವ ಹಿನ್ನೆಲೆಯಲ್ಲಿ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕೊಬ್ಬರಿ ಖರೀದಿ ಕೇಂದ್ರ ಆರಂಭವಾಗಿದ್ದು, ರೈತ ಬಾಂಧವರು ತಮ್ಮ ಹೆಸರನ್ನು ಫ್ರೂಟ್ಸ್ ಐಡಿಯಲ್ಲಿ ನೋಂದಾಯಿಸಲು ಒಮ್ಮೆಲೆ ಮುಗಿ ಬಿದ್ದಿರುವುದರಿಂದ ನೋಂದಣಿ ಕೇಂದ್ರದ ಆಭರಣದಲ್ಲಿ ನೂಕು ನುಗ್ಗಲು ಉಂಟಾಗಿದೆ.
ಕೊಬ್ಬರಿ ಮಾರಾಟ ಮಾಡುವ ವರ್ತಕರು ರೈತರ ಹೆಸರಿನಲ್ಲಿ ಕೊಬ್ಬರಿ ಖರೀದಿ ಕೇಂದ್ರದಲ್ಲಿ ಹೆಸರನ್ನು ನೋಂದಾಯಿಸುತ್ತಿರುವುದರಿಂದ ಕೊಬ್ಬರಿ ಮಾರಾಟ ಮಾಡುವ ರೈತರ ಸಂಖ್ಯೆಯು ದಿಢೀರ್ ಹೆಚ್ಚಾಗಿದೆ. ಕೆ ಆರ್ ಪೇಟೆ ಎಪಿಎಂಸಿ ಆಭರಣದಲ್ಲಿ ಸ್ಥಾಪಿಸಿರುವ ಕೊಬ್ಬರಿ ಖರೀದಿ ಕೇಂದ್ರದ ನೊಂದಣಿ ಶಾಖೆಯಲ್ಲಿ ರೈತರು ತಮ್ಮ ಹೆಸರು ನೋಂದಾಯಿಸಲು 45 ದಿನಗಳ ಅವಕಾಶವಿದೆ. ಆದ್ದರಿಂದ ಯಾರೂ ಆತಂಕಕ್ಕೆ ಒಳಗಾಗುವುದು ಬೇಡ ಎಂದು ರಾಜ್ಯ ಸಹಕಾರ ಮಾರಾಟ ಮಂಡಳಿ ನಿರ್ದೇಶಕ ಎಸ್. ಎಲ್.ಮೋಹನ್ ಮನವಿ ಮಾಡಿದ್ದಾರೆ.
ಕೃಷ್ಣರಾಜಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ತೆಂಗು ಬೆಳೆದಿರುವ ರೈತರ ಹೆಸರನ್ನು ಕಡ್ಡಾಯವಾಗಿ ಫ್ರೂಟ್ಸ್ ಐಡಿ ಲಾಗಿನ್ ನಲ್ಲಿ ನೊಂದಾವಣಿ ಮಾಡಲಾಗುವುದು. ರೈತ ಬಾಂಧವರು ತಮ್ಮ ಹೆಸರನ್ನು ನೋಂದಾಯಿಸಲು ಅಥವಾ ಕೊಬ್ಬರಿ ಮಾರಾಟ ಮಾಡಲು ದಳ್ಳಾಳಿಗಳು ಸೇರಿದಂತೆ ಯಾವುದೇ ಮಧ್ಯವರ್ತಿಗಳನ್ನು ಆಶ್ರಯಿಸಬಾರದು ಎಂದು ಎಸ್.ಎಲ್.ಮೋಹನ್ ಮನವಿ ಮಾಡಿದ್ದಾರೆ.
ಪ್ರಸ್ತುತ ಕೆ.ಆರ್.ಪೇಟೆ ತಾಲೂಕಿನ ಕೆ.ಆರ್.ಪೇಟೆ ಮತ್ತು ಕಿಕ್ಕೇರಿಯಲ್ಲಿ ಕೊಬ್ಬರಿ ಮಾರಾಟಕ್ಕೆ ರೈತರ ಹೆಸರುಗಳನ್ನು ನೊಂದಣಿ ಮಾಡಲಾಗುತ್ತಿದೆ. ಕೊಬ್ಬರಿ ಮಾರಾಟ ಖರೀದಿ ಫ್ರೂಟ್ ಐಡಿಯಲ್ಲಿ ರೈತರ ಹೆಸರು ನೋಂದಾಯಿಸಲು ನೆಟ್ ವರ್ಕ್ ನಲ್ಲಿ ಒತ್ತಡ ಇರುವುದರಿಂದ ರೈತರ ಹೆಸರನ್ನು ನೋಂದಾಯಿಸಲು ಸ್ವಲ್ಪ ತಡವಾಗುತ್ತಿದೆ ಆದ್ದರಿಂದ ರೈತ ಬಾಂಧವರು ಸಹಕರಿಸಬೇಕು ಎಂದು ರಾಜ್ಯ ಸಹಕಾರ ಮಾರಾಟ ಮಂಡಲದ ಅಧಿಕಾರಿ ಶೀಲಾ ಮನವಿ ಮಾಡಿದ್ದಾರೆ.




