Friday, September 20, 2024

ಪ್ರಾಯೋಗಿಕ ಆವೃತ್ತಿ

ಹೆಣ್ಣುಭ್ರೂಣ ಹತ್ಯೆ ಪ್ರಕರಣ| ಏಜೆಂಟ್​ಗಳ ದೊಡ್ಡ ತಂಡವೇ ಇದೆ ಎಂದ ಪುರಸಭಾ ಸದಸ್ಯ ನಂದೀಶ್

ಮಂಡ್ಯ ತಾಲೂಕಿನ ಹುಲ್ಲೇನಹಳ್ಳಿ ಹಾಡ್ಯದಲ್ಲಿ ಹೆಣ್ಣುಭ್ರೂಣ ಹತ್ಯೆ ಮಾಡಲಾಗುತ್ತಿತ್ತೆಂಬ ವಿಚಾರ ಸದ್ಯ ಬಯಲಾಗಿದೆ. ಈ ವಿಚಾರವಾಗಿ ಮಂಡ್ಯದ ಆರೋಗ್ಯಧಿಕಾರಿಗಳ ವಿರುದ್ದ ಶ್ರೀರಂಗಪಟ್ಟಣ ಪುರಸಭೆ ಸದಸ್ಯ ನಂದೀಶ್ ಗಂಭೀರ ಆರೋಪ ಮಾಡಿದ್ದಾರೆ.

“ಮಂಡ್ಯದ ನರ್ಸಿಂಗ್ ಹೋಂಗಳಲ್ಲಿ ಭ್ರೂಣ ಪತ್ತೆ ಮಾಡುತ್ತಿದ್ದರು. 2021ರಲ್ಲೇ ನನಗೆ ಈ ಬಗ್ಗೆ ಮಾಹಿತಿ ಇತ್ತು. ಅದರೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದರು. ಇದೀಗ 100 ಗಂಡು ಮಕ್ಕಳಿದ್ದರೆ, 60 ಮಂದಿ ಹೆಣ್ಣು ಮಕ್ಕಳಿದ್ದಾರೆ. ಗರ್ಭಪಾತ, ಹೆಣ್ಣುಭ್ರೂಣ ಹತ್ಯೆ ಪ್ರಕರಣದಲ್ಲಿ ಏಜೆಂಟ್​ಗಳ ದೊಡ್ಡ ತಂಡವೇ ಇದೆ” ಎಂದು ತಿಳಿಸಿದ್ದಾರೆ.

ಶ್ರೀರಂಗಪಟ್ಟಣ ಪುರಸಭೆ ಸದಸ್ಯ ನಂದೀಶ್ ಎಂ ಸುದ್ದಿಗಾರರೊಂದಿಗೆ ಮಾತನಾಡಿ, “ಮೊದಲಿಗೆ ಭ್ರೂಣ ಪತ್ತೆ ಮಾಡುತ್ತಾರೆ. ನಂತರ ಹೆಣ್ಣು ಭ್ರೂಣವಾದರೆ ಹಣ ನಿಗದಿ ಮಾಡುತ್ತಾರೆ. ಇದರಲ್ಲಿ ಆಸ್ಪತ್ರೆ ವೈದ್ಯರು ಮತ್ತು ಏಜೆಂಟರ್‌ಗಳ ದೊಡ್ಡ ಜಾಲವೇ ಇದೆ. ನಾನು ಮೆಡಿಕಲ್ ಸ್ಟೋರ್ ಇಟ್ಟಿದ್ದೇನೆ. ಗರ್ಭಪಾತದ ಮಾತ್ರೆ ಕೇಳಿಕೊಂಡು ಮೆಡಿಕಲ್ ಸ್ಟೋರ್​ಗೆ ಬರುತ್ತಿದ್ದರು. ನಾವು ಮಾತ್ರೆಯನ್ನ ಕೊಡುತ್ತಿರಲಿಲ್ಲ. ನಂತರ ಮಂಡ್ಯದಲ್ಲಿ ಏಜೆಂಟ್ ಮೂಲಕ‌ ಗರ್ಭಪಾತ ಮಾಡಿಸಿಕೊಳ್ಳುತ್ತಿರುವುದು ಗೊತ್ತಾಗಿದೆ” ಎಂದು ಹೇಳಿದರು.

“ಗರ್ಭಪಾತಕ್ಕೆ ಒಳಗಾದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಚಾರ ಮಾಡಿದಾಗ ಹಣ ಕೊಟ್ಟು ಗರ್ಭಪಾತ ಮಾಡಿಸಿರುವುದಾಗಿ ಹೇಳಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿರುವ ನರ್ಸ್​ಗಳು, ನಿವೃತ್ತಿ ನರ್ಸ್‌ಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಕೆ ಆರ್ ಪೇಟೆ ಭಾಗದಲ್ಲಿ ಹೆಚ್ಚು ಈ ಕೃತ್ಯ ನಡೆದಿದೆ. ನಗರ ಪ್ರದೇಶದಲ್ಲಿ ಕಡಿಮೆ ನಡೆದಿದೆ. ದುಡ್ಡಿನ ಆಸೆಗಾಗಿ ಹಣವಂತರು ಮನೆಯ ಮಹಿಳೆಯ ಗರ್ಭದಲ್ಲಿ ಹೆಣ್ಣು ಭ್ರೂಣ ಇದೆ ಎಂದು ಸುಳ್ಳು ಹೇಳಿ ಗಂಡುಭ್ರೂಣವನ್ನೂ ತೆಗೆದಿರುವ ಘಟನೆಗಳೂ ನಡೆದಿದೆ” ಎಂದು ತಿಳಿಸಿದರು.

“ಈ ಹಿಂದೆ ​ಗರ್ಭಪಾತದ ಮಾತ್ರೆಗಳನ್ನು ಕೊಡುತ್ತಿದ್ದರು. ಸದ್ಯ ಸರ್ಕಾರ ಈ ಮಾತ್ರೆಗಳನ್ನು ಬ್ಯಾನ್ ಮಾಡಿದೆ. ಈ ಪ್ರಕರಣವನ್ನು ಸಿಐಡಿಗೆ ವಹಿಸಬೇಕು. ಆರೋಗ್ಯ ಅಧಿಕಾರಿಗಳು ಸೇರಿದಂತೆ ಅನೇಕ ದೊಡ್ಡ ದೊಡ್ಡ ವ್ಯಕ್ತಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ” ಎಂದು ಆರೋಪಿಸಿದರು.

ಶ್ರೀರಂಗಪಟ್ಟಣ ಸದಸ್ಯ ನಂದೀಶ್‌ ಎಸ್‌ ಮಾತನಾಡಿ, “ಮಂಡ್ಯ ತಾಲೂಕಿನಲ್ಲಿ ಗರ್ಭಪಾತ, ಹೆಣ್ಣುಭ್ರೂಣ ಹತ್ಯೆ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿವೆ. ಆದಷ್ಟು ಬೇಗ ಈ ಪ್ರಕರಣ ತನಿಖೆಗೆ ಒಳಪಟ್ಟು ಇಂತಹ ಕೃತ್ಯಗಳಿಗೆ ಕಡಿವಾಣ ಬೀಳಬೇಕು” ಎಂದು ತಿಳಿಸಿದರು.

ಈ ಬಗ್ಗೆ ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿಯವರನ್ನು ಸಂಪರ್ಕಿಸಿದಾಗ  “ನಮ್ಮ ಜಿಲ್ಲೆಯಲ್ಲಿ ಯಾವುದೇ ಗರ್ಭಪಾತದ ಪ್ರಕರಣಗಳು ಕಂಡುಬಂದಿಲ್ಲ. ಅಂತಹ ಪ್ರಕರಣಗಳ ಕುರಿತು ನಮ್ಮ ಗಮನಕ್ಕೆ ಬಂದಿಲ್ಲ” ಎಂದು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!