Thursday, September 19, 2024

ಪ್ರಾಯೋಗಿಕ ಆವೃತ್ತಿ

ಶಿರಹಟ್ಟಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ: ಹಾಲಶ್ರೀ ಸ್ವಾಮೀಜಿ ವಿರುದ್ಧ ಮತ್ತೊಂದು ಪ್ರಕರಣ ದಾಖಲು

ಬೈಂದೂರಿನ ಉದ್ಯಮಿಗೆಗೆ ಬಿಜೆಪಿಯಿಂದ ಎಂಎಲ್​ಎ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂ. ಪಡೆದು ವಂಚನೆ ಎಸಗಿದ ಆರೋಪದಲ್ಲಿ ಬಂಧಿಯಾಗಿರುವ ಪ್ರಮುಖ ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿ ವಿರುದ್ಧ ಮತ್ತೊಂದು ವಂಚನೆ ಆರೋಪ ಕೇಳಿ ಬಂದಿದೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ರಣತೂರು ಪಿಡಿಒ ಆಗಿದ್ದ ಸಂಜಯ್ ಚವಡಾಳ ಅವರು ಅಭಿನವ ಸ್ವಾಮೀಜಿ ವಿರುದ್ಧ ಈ ವಂಚನೆ ಆರೋಪ ಮಾಡಿ, ಸೆಪ್ಟಂಬರ್ 19 ರಂದು ಮುಂಡರಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಂಜಯ್‌ ಚವಡಾಳ ಅವರು ರಾಜ್ಯ ವಿಧಾನಸಭಾ ಚುನಾವಣೆ ಸಮಯದಲ್ಲಿ ಶಿರಹಟ್ಟಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಕೊಡಿಸುವುದಾಗಿ ನಂಬಿಸಿ ಚುನಾವಣೆಗೆ ಮುಂಚಿತವಾಗಿ 1 ಕೋಟಿ ರೂ. ಹಣವನ್ನು ಸ್ವಾಮೀಜಿ ಪಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತಾಲೂಕಿನ ಹೆಬ್ಬಾಳ ಗ್ರಾಮದವರಾದ ಸಂಜಯ್‌ ಚವಡಾಳ ಅವರು ’ಅರುಂಧತಿ ಫೌಂಡೇಷನ್‌’ ಹೆಸರಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದರು. ಅಭಿನವ ಹಾಲವೀರಪ್ಪ ಸ್ವಾಮೀಜಿ ತಾನು ಬಿಜೆಪಿ ವರಿಷ್ಠರೊಂದಿಗೆ ನಿಕಟ ಸಂಪರ್ಕದಲ್ಲಿರುವುದಾಗಿ ಬಿಂಬಿಸಿಕೊಂಡಿದ್ದರು. ಹಾಗಾಗಿ ಸಂಜಯ್ ಅವರು ಸ್ವಾಮೀಜಿಯನ್ನು ಪರಿಚಯ ಮಾಡಿಕೊಂಡಿದ್ದರು. ಶಿರಹಟ್ಟಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್‌ ಕೊಡಿಸುವಂತೆ ಅವರಿಗೆ ಕೋರಿದ್ದರು. ಅದಕ್ಕಾಗಿ 50 ಲಕ್ಷ, 40 ಲಕ್ಷ ಮತ್ತು 10 ಲಕ್ಷದಂತೆ ವಿವಿಧ ಹಂತದಲ್ಲಿ 1 ಕೋಟಿ ಹಣವನ್ನು ಸ್ವಾಮೀಜಿಗೆ ನೀಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಗದಗ ಎಸ್​ಪಿ ನೇಮಗೌಡ ಅವರು, ”ಅಮಾನತುಗೊಂಡಿರುವ ಪಿಡಿಒ ಸಂಜಯ ಚವಡಾಳ ನೀಡಿದ ದೂರಿನ ಅನ್ವಯ ವಿಚಾರಣೆ ಆರಂಭಿಸಿದ್ದೇವೆ. ಶಿರಹಟ್ಟಿ ಮೀಸಲು ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಕೇಳಿದ್ದ ಸಂಜಯ್‌, ವಿವಿಧ ಹಂತದಲ್ಲಿ ಹಾಲಶ್ರೀಗೆ ನಗದು ರೂಪದಲ್ಲಿ ಹಣವನ್ನ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಈಗಾಗಲೇ ಸಂಜಯ್ ಚವಡಾಳಗೆ ನೋಟಿಸ್ ಸಹ ಕೊಟ್ಟಿದೇವೆ. ಸಮಂಜಸ ದಾಖಲೆಗಳನ್ನ ಪೊಲೀಸರಿಗೆ ಸಲ್ಲಿಸುವಂತೆ ನೋಟಿಸ್ ಕೊಟ್ಟಿದೇವೆ. ಇದುವರೆವಿಗೂ ಯಾವುದೇ ದಾಖಲೆಯನ್ನು ದೂರುದಾರರು ನಮಗೆ ಕೊಟ್ಟಿಲ್ಲ. ದಾಖಲೆಗಳನ್ನ ಕೊಟ್ಟ ಮೇಲೆ ಮುಂದಿನ ತನಿಖೆ ಆರಂಭಿಸುತ್ತೇವೆ” ಎಂದು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!