Sunday, May 19, 2024

ಪ್ರಾಯೋಗಿಕ ಆವೃತ್ತಿ

ಶವಸಂಸ್ಕಾರ ಮಾಡದಿರಲು ಗ್ರಾಮಸ್ಥರ ಪಟ್ಟು

ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವವರೆಗೂ ಶವಸಂಸ್ಕಾರ ಮಾಡುವುದಿಲ್ಲವೆಂದು ಬೆಂಡರವಾಡಿ ಗ್ರಾಮಸ್ಥರು ಪಟ್ಟುಹಿಡಿದ ಘಟನೆ ಇಂದು ನಡೆದಿದೆ.

ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಹೋಬಳಿಯ ಬೆಂಡರವಾಡಿ ಗ್ರಾಮದ ಶಿವಕುಮಾರ್ ಎಂಬಾತನ ಮೇಲೆ ಕಳೆದ ಆರು ದಿನಗಳ ಹಿಂದೆ ರಸ್ತೆಯಲ್ಲಿ ಟಿಪ್ಪರ್ ಲಾರಿ ಓಡಾಡುವ ವಿಚಾರಕ್ಕೆ ಕೆಲವರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ರಸ್ತೆ ವಿಚಾರಕ್ಕೆ ಶಿವಕುಮಾರ್ ಅವರ ಮೇಲೆ ಗ್ರಾಮ ಪಂಚಾಯತಿ ಸದಸ್ಯರಾದ ಅಶೋಕ್, ಅರುಣ್ ಕುಮಾರ್ ಹಾಗೂ ಆತನ ಬೆಂಬಲಿಗರು ಕಲ್ಲಿನಿಂದ ತಲೆ, ಎದೆಗೆ ಹಲ್ಲೆ ನಡೆಸಿದ್ದರು.

ಈ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಶಿವಕುಮಾರ್ ಅವರನ್ನು ಮೈಸೂರಿನ ಸುಯೋಗ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಆದರೆ ಶಿವಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಂಜೆ ಮೃತಪಟ್ಟರು. ಶಿವಕುಮಾರ್ ಅವರ ಮೃತದೇಹವನ್ನು ಬೆಂಡರವಾಡಿ ಗ್ರಾಮಕ್ಕೆ ತಂದ ಗ್ರಾಮಸ್ಥರು ಶಿವಕುಮಾರ್ ಕೊಲೆಗೆ ಕಾರಣರಾದ ಆರೋಪಿ ಗ್ರಾಮ ಪಂಚಾಯಿತಿ ಸದಸ್ಯ ಅಶೋಕ ಎಂಬಾತನನ್ನು ಕಿರುಗಾವಲು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಆದರೆ ಈ ಪ್ರಕರಣದ ಮತ್ತೊಬ್ಬ ಆರೋಪಿ ಗ್ರಾಮ ಪಂಚಾಯತಿ ಸದಸ್ಯ ಅರುಣ್ ಕುಮಾರ್ ಅವನನ್ನು ಕೂಡ ಬಂಧಿಸುವವರೆಗೆ ಮೃತದೇಹದ ಅಂತಿಮ ಸಂಸ್ಕಾರ ಮಾಡುವುದಿಲ್ಲ ಎಂದು ಬೆಂಡರವಾಡಿ ಗ್ರಾಮಸ್ಥರು ಪಟ್ಟುಹಿಡಿದು ಕುಳಿತಿದ್ದರು.

ಶವಸಂಸ್ಕಾರ ಮಾಡದ ವಿಚಾರ ತಿಳಿದ ಕಿರುಗಾವಲು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಶೇಷಾದ್ರಿ ಕುಮಾರ್ ಅವರು ಬೆಂಡರವಾಡಿ ಗ್ರಾಮಕ್ಕೆ ತೆರಳಿ, ಶಿವಕುಮಾರನ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಆರೋಪಿಯನ್ನು ಶೀಘ್ರ ಬಂಧಿಸುತ್ತೇವೆ ಎಂದು ಭರವಸೆ ನೀಡಿದರು. ನಂತರ ಗ್ರಾಮಸ್ಥರು ಶವಸಂಸ್ಕಾರ ನಡೆಸಲು ಮುಂದಾದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!