Thursday, September 19, 2024

ಪ್ರಾಯೋಗಿಕ ಆವೃತ್ತಿ

ಶಾಸಕ ಕೆ.ಅನ್ನದಾನಿಯವರಿಂದ ಕೀಳು ರಾಜಕಾರಣ

ಸಂಸದೆ ಸುಮಲತಾ ಅಂಬರೀಶ್ ಅವರು ಅತ್ಯಾಚಾರಕ್ಕೀಡಾಗಿ ಕೊಲೆಯಾದ ಬಾಲಕಿ ಕುಟುಂಬಕ್ಕೆ ಸಾಂತ್ವನ ಹೇಳಿ, ಧೈರ್ಯ ತುಂಬಿ ಮುಖ್ಯಮಂತ್ರಿ ಅವರಿಂದ 10 ಲಕ್ಷ ರೂ. ಪರಿಹಾರ ಕೊಡಿಸಿರುವುದನ್ನು ಶಾಸಕ ಅನ್ನದಾನಿ ತಾನೇ ಪರಿಹಾರ ಕೊಡಿಸಿದ್ದು ಎಂದು ಹೇಳಿಕೊಳ್ಳುವ ಮೂಲಕ ಕೇಳು ರಾಜಕಾರಣ ಮಾಡಿದ್ದಾರೆ ಎಂದು ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ಟೀಕಿಸಿದರು.

ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶವೇ ಖಂಡಿಸುವ ಘಟನೆ ಮಳವಳ್ಳಿ ಪಟ್ಟಣದಲ್ಲಿ ನಡೆದಿದ್ದು,ಕ್ಷೇತ್ರದ ಶಾಸಕರಾದ ಅನ್ನದಾನಿಯವರು ತಾವೇ ಎಲ್ಲರಿಗಿಂತ ಮೊದಲು ಸಿಎಂ ಬಳಿ ಹೋಗಿ ಪರಿಹಾರ ಧನ ಕೊಡಿಸಬಹುದಿತ್ತು.ಆದರೆ ಸಂಸದೆ ಸುಮಲತಾ ಅಂಬರೀಶ್ ಅವರು ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಬಾಲಕಿಯ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿ, ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಲ್ಲದೆ, ಬಾಲಕಿಯ ಕುಟುಂಬಕ್ಕೆ ಪರಿಹಾರ ಹಾಗೂ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರೊಂದಿಗೆ ಮಾತನಾಡಿದ್ದರು.

ಕೀಳು ರಾಜಕಾರಣ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆ.ಆರ್. ಪೇಟೆಯ ಕುಂಭಮೇಳಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸಂಸದೆ ಸುಮಲತಾ ಅಂಬರೀಶ್ ರವರ ಒತ್ತಾಯದ ಮೇರೆಗೆ ಬಾಲಕಿ ಕುಟುಂಬಕ್ಕೆ 10 ಲಕ್ಷ ರೂ‌.ಗಳ ಪರಿಹಾರ ಘೋಷಣೆ ಮಾಡಿದ್ದರು.

ಸಿಎಂ ಆಪ್ತ ಜಂಟಿ ಕಾರ್ಯದರ್ಶಿ ಗೋಪಾಲ್ ಅವರು ಪರಿಹಾರ ನಿಧಿಯನ್ನು ಸುಮಲತಾ ಅವರ ಒತ್ತಾಯದ ಮೇರೆಗೆ ಮಂಜೂರು ಮಾಡಿದ್ದೇವೆ ಎಂದು ಹೇಳಿ ಜಿಲ್ಲಾಧಿಕಾರಿ ಅವರಿಗೆ ಪತ್ರವನ್ನು ಬರೆದಿದ್ದರು. ಆದರೆ ಶಾಸಕ ಅನ್ನದಾನಿಯವರು ತಮ್ಮ ಪಕ್ಷದ ನಾಯಕರನ್ನು ಮೆಚ್ಚಿಸುವುದಕ್ಕಾಗಿಯೋ ಅಥವಾ ಭಯದಿಂದಲೋ, ನನ್ನ ಕೋರಿಕೆಯ ಮೇರೆಗೆ ಸಿಎಂ 10 ಲಕ್ಷ ರೂ. ಘೋಷಣೆ ಮಾಡಿದ್ದಾರೆ. ಇಂದು 10 ಲಕ್ಷ ಹಣವನ್ನು ಬಾಲಕಿಯ ಕುಟುಂಬಕ್ಕೆ ನೀಡುತ್ತಿರುವುದಾಗಿ ಕಾರ್ಯಕರ್ತರು ಹೆಚ್ಚು ಆಗಮಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ನೀಡುವ ಮೂಲಕ ಕ್ಷುಲ್ಲಕ ರಾಜಕಾರಣ ಮಾಡಿದ್ದಾರೆ.ಇದು ನಾಚಿಕೆಗೇಡಿನ ಸಂಗತಿ ಎಂದರು.

ಮಳವಳ್ಳಿ ತಾಲ್ಲೂಕಿನ ಜನರು ಪ್ರಜ್ಞಾವಂತರಿದ್ದು,ಅವರಿಗೆ ಯಾರು ಪರಿಹಾರ ಹಣ ಕೊಡಿಸಿದ್ದು ಎಂಬ ಬಗ್ಗೆ ಗೊತ್ತಿದೆ. ಶಾಸಕ ಅನ್ನದಾನಿ ಅವರು ನಾಲ್ಕಾರು ಮಂದಿ ಇಟ್ಟುಕೊಂಡು ಪಾದಯಾತ್ರೆ ಮಾಡಿ, ಮೈಷುಗರ್ ಕಾರ್ಖಾನೆ ನನ್ನ ಪಾದಯಾತ್ರೆ ಹಿನ್ನೆಲೆಯಲ್ಲಿ ಪ್ರಾರಂಭವಾಯಿತು ಎಂದು ಬಿಟ್ಟಿ ಪ್ರಚಾರ ಪಡೆಯಲು ಹವಣಿಸಿದ್ದರು. ಹಲಗೂರಿನಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ. ಮಳವಳ್ಳಿ ಕ್ಷೇತ್ರದಲ್ಲಿ ಹೆಚ್ಚು ಕೊಲೆಯಂತಹ ಅಪರಾಧ ಕೃತ್ಯಗಳು ನಡೆಯುತ್ತಿವೆ. ಆ ಬಗ್ಗೆ ಶಾಸಕರು ಮೊದಲು‌ ಗಮನ ಹರಿಸಲಿ ಎಂದು ವಾಗ್ದಾಳಿ‌ ನಡೆಸಿದರು.

ಸಂಸತ್ತಿನಲ್ಲಿ ಮಾತನಾಡಿದ್ದಾರೆ

ಸಂಸದೆ ಸುಮಲತಾ ಅಂಬರೀಶ್ ರವರು ಸಂಸತ್ ಅಧಿವೇಶನದಲ್ಲಿ ಪೋಕ್ಸೊ ಕಾಯ್ದೆ ಇನ್ನೂ ಕಠಿಣ ಮಾಡಬೇಕೆಂಬ ಬಗ್ಗೆ, ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ. ಆದರೆ ಅನ್ನದಾನಿಯವರು ಸಂಸತ್ ಸದಸ್ಯರು ತಂದಂತಹ ಕೇಂದ್ರ ಸರ್ಕಾರದ ಕಾಮಗಾರಿಗಳಿಗೆ ತಾವೇ ಗುದ್ದಲಿ ಪೂಜೆ ಮಾಡುವ ಮೂಲಕ ಯಾರದೋ ಮಕ್ಕಳಿಗೆ ಹೆಸರಿಡಲು ಹೋಗುತ್ತಾರೆ ಎಂದು ವ್ಯಂಗ್ಯವಾಡಿದರು.

ಉದ್ಯಾನವನಕ್ಕೆ ಹೆಸರಿಡಲಿ

ಸಂತ್ರಸ್ತ ಬಾಲಕಿ ಹೆಸರನ್ನು ಚಿರಸ್ಥಾಯಿಯಾಗಿ ಮಾಡುವ ನಿಟ್ಟಿನಲ್ಲಿ ಮಂಡ್ಯ ಜಿಲ್ಲಾ ಕೇಂದ್ರದಲ್ಲಿರುವ ಉದ್ಯಾನವನಕ್ಕೆ ಬಾಲಕಿಯ ಹೆಸರಿಡಬೇಕು. ಸಮಾಜಘಾತಕ ಶಕ್ತಿಗಳಿಗೆ ಇದರಿಂದಾಗಿ ಭಯ ಮೂಡಬೇಕು ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!