Wednesday, July 24, 2024

ಪ್ರಾಯೋಗಿಕ ಆವೃತ್ತಿ

ಚಿನ್ನಾಭರಣಕ್ಕಾಗಿ ವೃದ್ಧೆ ಕೊಲೆ ಮಾಡಿದ್ದ ಆರೋಪಿ ಬಂಧನ

ಚಿನ್ನಾಭರಣ ದೋಚುವ ಸಲುವಾಗಿ ವೃದ್ಧೆಯೊಬ್ಬರ ಮೇಲೆ ಮಾರಣಾಂತಿಕ‌ವಾಗಿ ಹಲ್ಲೆ ನಡೆಸಿ ಆಕೆಯ ಸಾವಿಗೆ ಕಾರಣನಾದ ಆರೋಪಿಯನ್ನು ಕಿರುಗಾವಲು ಠಾಣಾ ಪೋಲಿಸರು ಬಂಧಿಸಿದ್ದಾರೆ.

ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಪಟ್ಟಣದ ಬ್ರಾಹ್ಮಣರ ಬೀದಿಯ ಚಂದ್ರಶೇಖರ ಆರಾಧ್ಯ ಎಂಬಾತನೇ ಬಂಧಿತ ಆರೋಪಿ. ಬಂಧಿತನಿಂದ 2,60,000 ರೂ.ಮೌಲ್ಯದ 65 ಗ್ರಾಂ. ಚಿನ್ನಾಭರಣ ವಶ ಪಡೆಸಿಕೊಂಡಿದ್ದಾರೆ.

ಆರೋಪಿ ಚಂದ್ರಶೇಖರ ಆರಾಧ್ಯ ಕೊಲೆಯಾದ ಶಾಂತಮ್ಮನವರಿದ್ದ ಬ್ರಾಹ್ಮಣರ ಬೀದಿಯ ನಿವಾಸಿಯಾಗಿದ್ದು, ಶಾಂತಮ್ಮನವರಿಗೆ ಮೊದಲಿನಿಂದಲೂ ಈತ ಪರಿಚಿತನಾಗಿದ್ದ. ಈತನೇ ಅವರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ್ದಾನೆ.

ಘಟನೆ ವಿವರ: ಕಿರುಗಾವಲು ಗ್ರಾಮದ 85 ವರ್ಷದ ಶಾಂತಮ್ಮ ಬೇಸಿಗೆಯ ಹಿನ್ನಲೆಯಲ್ಲಿ ಮನೆಯ ಹೊರಗಡೆ ಇರುವ ಪಡಸಾಲೆಯ ಮುಂದೆ ಕುಳಿತಿದ್ದರು.ಆರೋಪಿ ಚಂದ್ರಶೇಖರ ವೃದ್ಧೆ ಶಾಂತಮ್ಮರ ಮೈ ಮೇಲಿದ್ದ ಚಿನ್ನಾಭರಣ ದೋಚಲು‌ ಮೊದಲೇ ನಿರ್ಧರಿಸಿದ್ದ.

ಅದರಂತೆ ಏಪ್ರಿಲ್ 24 ರಂದು ರಾತ್ರಿ 7.30 ರ ಸಮಯದಲ್ಲಿ ವೃದ್ಧೆ ಶಾಂತಮ್ಮನವರು ಪಡಸಾಲೆಯ ಮೇಲೆ ಕುಳಿತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಆರೋಪಿ ಚಂದ್ರಶೇಖರ ಆರಾಧ್ಯ ಅಜ್ಜಿಗೆ ನಿದ್ರೆ ಮಾತ್ರೆ ಬೆರೆಸಿದ ಹಾಲನ್ನು ನೀಡಿ ಪ್ರಜ್ಞೆ ತಪ್ಪಿಸಿ ಅವರ ಬಳಿಯಿದ್ದ ಚಿನ್ನದ ಸರ ಹಾಗೂ ಓಲೆಗಳನ್ನು ದೋಚಿ ಪರಾರಿಯಾಗಿದ್ದ.

ಚಿನ್ನಾಭರಣ ಕಿತ್ತುಕೊಳ್ಳುವ ಸಂದರ್ಭದಲ್ಲಿ ಶಾಂತಮ್ಮ ವಿರೋಧಿಸಿದಾಗ ಆಕೆಯ ಮೇಲೆ ಹಲ್ಲೆ ಮಾಡಿದ್ದಲ್ಲದೆ ಕಿವಿಯಲ್ಲಿರುವ ಓಲೆಗಳನ್ನು ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗಿದ್ದ.ಕಿವಿಯನ್ನು ಹರಿದುಹಾಕಿದ್ದರಿಂದ
ತೀವ್ರವಾಗಿ ಗಾಯಗೊಂಡಿದ್ದ ಶಾಂತಮ್ಮ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಾಂತಮ್ಮ ಏಪ್ರಿಲ್ 25ರಂದು ಮೃತಪಟ್ಟಿದ್ದರು.

ಈ ಬಗ್ಗೆ ಶಾಂತಮ್ಮ ಅವರ ಸೊಸೆ ಸುಕನ್ಯ ಕಿರುಗಾವಲು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕೊಲೆ ಮತ್ತು ಸುಲಿಗೆ ದೂರು ದಾಖಲಿಸಿಕೊಂಡ ಕಿರುಗಾವಲು ಸಿಪಿಐ ಎಸ್.ಸಂತೋಷ್, ಬಿ.ಎಸ್.ಶ್ರೀಧರ್ ಹಾಗೂ ಪಿಎಸ್ಐ ಶೇಷಾದ್ರಿ ಕುಮಾರ್ ತನಿಖೆ ನಡೆಸಿ ಏಪ್ರಿಲ್ 25 ರಂದು ಶಾಂತಮ್ಮ ನಿವಾಸ ಇರುವ ಬ್ರಾಹ್ಮಣ ಬೀದಿಯ ನಿವಾಸಿ ಚಂದ್ರಶೇಖರ್ ಆರಾಧ್ಯ ಎಂಬಾತನನ್ನು ಬಂಧಿಸಿ ವಿಚಾರಣೆ ಮಾಡಿದಾಗ ಆತನೇ ಚಿನ್ನಾಭರಣಕ್ಕಾಗಿ ಶಾಂತಮ್ಮರ ಮೇಲೆ‌ ಹಲ್ಲೆ ನಡೆಸಿ ಪರಾರಿಯಾಗಿದ್ದ ಸಂಗತಿ ಬೆಳಕಿಗೆ ಬಂತು.

ಆರೋಪಿ ಚಂದ್ರಶೇಖರ ಶಾಂತಮ್ಮನವರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ ನಂತರ ತನಿಖೆಯ ದಿಕ್ಕು ತಪ್ಪಿಸಲು ತಾನೇ ಮುಂದೆ ನಿಂತು ಯಾರೋ ಹೊರಗಿನ‌ ದುಷ್ಕರ್ಮಿಗಳು ಶಾಂತಮ್ಮನವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಚಿನ್ನದ ಒಡವೆಗಳನ್ನು ದೋಚಿಕೊಂಡು ಹೋದರೆಂದು ಜನರಿಗೆ ಸುಳ್ಳು ಹೇಳುತ್ತ ದಿಕ್ಕುತಪ್ಪಿಸಿದ್ದ.

ಆದರೆ ಪೋಲಿಸರಿಗೆ ಆತನ ಮಾತಿನಲ್ಲಿ ಸತ್ಯಾಂಶ ಇಲ್ಲದಿರುವುದು ಕಂಡು ಬಂತು.ನಂತರ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಆತನೇ ಆರೋಪಿ ಎಂದು ತಿಳಿದು ಬಂಧಿಸಿದ್ದಾರೆ.

ಕೃತ್ಯ ನಡೆದ ಒಂದೇ ದಿನದಲ್ಲಿ ಪ್ರಕರಣ ಪತ್ತೆ ಮಾಡಿ ಆರೋಪಿ ಬಂಧಿಸಿದ ಸಿಪಿಐ ಸಂತೋಷ್, ಶ್ರೀಧರ್,ಪಿಎಸ್ಐ ಶೇಷಾದ್ರಿ ಹಾಗೂ ಸಿಬ್ಬಂದಿಗಳನ್ನು ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಎನ.ಯತೀಶ್ ಅಭಿನಂದಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!