Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಳೆ ಹಾನಿ : ಪರಿಹಾರ ವಿತರಣೆಗೆ ಕ್ರಮವಹಿಸಲು ಡಿಸಿ ಸೂಚನೆ

ಮಂಡ್ಯ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಬೆಳೆ, ಮನೆ ಕುಸಿತ,ಜಾನುವಾರುಗಳ ಸಾವು ಮೊದಲಾದ ಬಗ್ಗೆ ವರದಿ ಮಾಡಿ ಶೀಘ್ರ ಪರಿಹಾರ ಹಣವನ್ನು ಪಾವತಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಅಶ್ವತಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಭಾರೀ ಮಳೆ ಆಗಿದ್ದು, ಮುಂದಿನ ದಿನಗಳಲ್ಲೂ ಮಳೆಯಾಗುವ ಸಾಧ್ಯತೆ ಇದೆ. ಈಗ ಹಾನಿಗೊಳಗಾಗಿರುವ ನಷ್ಟದ ಬಗ್ಗೆ ಸಮಗ್ರ ಮಾಹಿತಿ ನೀಡಿ.ಹಾಗೆಯೇ ಪ್ರವಾಹ,ನೆರೆ ಹಾವಳಿಗೆ ಒಳಗಾಗುವ ಪ್ರದೇಶಗಳಲ್ಲಿ ನದಿಪಾತ್ರಕ್ಕೆ ಸಾರ್ವಜನಿಕರು, ಪ್ರವಾಸಿಗರು ತೆರಳದಂತೆ ಸೂಚನಾಫಲಕ ಹಾಗೂ ಡಂಗೂರ ಸಾರಿಸಿ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಿ ಎಂದರು.

ಮಳೆಹಾನಿ ಕುರಿತು ವರದಿ ನೀಡಲು ಇಲಾಖೆಗಳ ನಡುವೆ ಸಮನ್ವಯ ಅತಿ ಮುಖ್ಯವಾಗಿರುತ್ತದೆ. ತಾಲ್ಲೂಕು ಹಂತದ ಅಧಿಕಾರಿಗಳು ಒಟ್ಟಿಗೆ ಸ್ಥಳ ಪರಿಶೀಲನೆ ನಡೆಸಿ ಪರಿಹಾರ ಪಾವತಿಗಾಗಿ ವರದಿಯನ್ನು ಸಲ್ಲಿಸುವಂತೆ ಸೂಚಿಸಿದರು.

ಮಳೆಹಾನಿ ಪರಿಹಾರ ನೀಡಲು ಜಿಲ್ಲಾಡಳಿತದಲ್ಲಿ ಯಾವುದೇ ಅನುದಾನದ ಕೊರತೆ ಇಲ್ಲ. ತಹಶೀಲ್ದಾರ್ ಗಳು ತಮಗೆ ಬೇಕಾದ ಅನುದಾನದ ಪ್ರಸ್ತಾವನೆ ನೀಡಿ ಪಡೆದುಕೊಳ್ಳಬಹುದು. ಮಳೆಹಾನಿ ಪರಿಹಾರವನ್ನು ಎಲ್ಲಾ ತಹಶೀಲ್ದಾರ್ ಕಚೇರಿಯಿಂದ ತಕ್ಷಣ ಪಾವತಿಸುವಂತೆ ತಿಳಿಸಿದರು.

ಪ್ರಸ್ತುತದಲ್ಲಿ ತುಂಬಾ ಮಳೆಯಾಗಿರುವ ಹಿನ್ನೆಲೆ ಕೆರೆ ಕಟ್ಟೆಗಳು ತುಂಬಿದೆ. ಹಾಗಾಗಿ ಅಧಿಕಾರಿಗಳು ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಭೆ ಮಾಡಿ ವಿಪತ್ತು ನಿರ್ವಹಣೆ ಕುರಿತು ಜಾಗೃತಿ ಮೂಡಿಸಬೇಕು.ವಿಪತ್ತು ನಿರ್ವಹಣೆಯಲ್ಲಿ ಎಲ್ಲಾ ತಾಲ್ಲೂಕಗಳ ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳ ಪಾತ್ರ ಬಹಳ ಮುಖ್ಯ ಎಂದರು.

ಕಳೆದ ವರ್ಷಗಳಲ್ಲಿ ಸಂಭವಿಸಿರುವ ವಿಪತ್ತನ್ನು ಆಧರಿಸಿ ಪಾಂಡವಪುರ 4 ಗ್ರಾಮ ಪಂಚಾಯತಿಗಳಲ್ಲಿ 7 ಗ್ರಾಮಗಳು, ಶ್ರೀರಂಗಪಟ್ಟಣದ 8 ಗ್ರಾಮ ಪಂಚಾಯಿತಿಯಲ್ಲಿ 18 ಗ್ರಾಮಗಳು, ಮಳವಳ್ಳಿ 4 ಗ್ರಾಮ ಪಂಚಾಯತಿಗಳಲ್ಲಿ 9 ಗ್ರಾಮಗಳು, ಕೆ.ಆರ್. ಪೇಟೆ 2 ಗ್ರಾಮ ಪಂಚಾಯತಿಗಳಲ್ಲಿ 3 ಗ್ರಾಮಗಳು ಒಟ್ಟು 18 ಗ್ರಾಮ ಪಂಚಾಯತಿಗಳಲ್ಲಿ 37 ಗ್ರಾಮಗಳಲ್ಲಿ ಪ್ರವಾಹ/ ನೆರೆಹಾವಳಿ ಸಂಭವಿಸಬಹುದು ಎಂದು ಗುರುತಿಸಲಾಗಿದೆ. ಸದರಿ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿ.ಆರ್.ಶೈಲಜಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್ ಧನಂಜಯ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎಸ್. ಅಶೋಕ್,ತೋಟಗಾರಿಕೆ ಇಲಾಖೆಯ ಉಪ ನಿರ್ದೇಶರಾದ ಮಂಜುನಾಥ್, ವಾರ್ತಾಧಿಕಾರಿ ಎಸ್.ಹೆಚ್ ನಿರ್ಮಲ, ಜಿಲ್ಲಾ ಪಂಚಾಯತ್ ಅಭಿವೃದ್ದಿ ಅಧಿಕಾರಿ ಧನರಾಜ್, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪ್ಥತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!