Friday, September 20, 2024

ಪ್ರಾಯೋಗಿಕ ಆವೃತ್ತಿ

ಉಚಿತ ಬಸ್ ಸೌಲಭ್ಯದಿಂದ ಮಹಿಳೆಯರಿಗೆ ಯಶಸ್ಸು ಸಿಗಲಿ: ಎನ್. ಚಲುವರಾಯಸ್ವಾಮಿ

ಕಾಂಗ್ರೆಸ್ ಸರ್ಕಾರ ಚುನಾವಣೆಗೆ ಮುನ್ನ ನೀಡಿದ ಐದು ಗ್ಯಾರಂಟಿಗಳಲ್ಲಿ, ಮೊದಲ ಕೊಡುಗೆಯಾಗಿ ಶಕ್ತಿ ಯೋಜನೆಗೆ ಇಂದು ಚಾಲನೆ ನೀಡಿದ್ದು, ಮಹಿಳೆಯರು ಈ ಯೋಜನೆಯ ಸದುಪಯೋಗ ಪಡೆದು ಕೊಂಡು ಯಶಸ್ಸು ಕಾಣಲಿ ಎಂದು ಜಿಲ್ಲಾ ಉಸ್ತುವಾರಿ ಮತ್ತು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.

ಮಂಡ್ಯ ನಗರದ ಬಸ್ ನಿಲ್ದಾಣದಲ್ಲಿ ಭಾನುವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವತಿಯಿಂದ ರಾಜ್ಯದ ಮಹಿಳಾ ಪ್ರಯಾಣಿಕರಿಗೆ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಒದಗಿಸುವ ಕರ್ನಾಟಕ ಸರ್ಕಾರದ ಶಕ್ತಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

nudikarnataka.com

ಇಂದು ರಾಜ್ಯದ ಎಲ್ಲೆಡೆ ಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ರಾಜ್ಯದ ಮಹಿಳೆಯರು ಕರ್ನಾಟಕ ರಾಜ್ಯದ 4 ಸಾರಿಗೆ ನಿಗಮಗಳ ಸಾಮಾನ್ಯ, ನಗರ ಸಾರಿಗೆ ಮತ್ತು ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ನಮ್ಮ ರಾಜ್ಯದಲ್ಲಿ ಎಲ್ಲಿ ಬೇಕಾದರ ಪ್ರಯಾಣ ಮಾಡಬಹುದು ಎಂದರು.

ಶಕ್ತಿ ಯೋಜನೆ ಉತ್ತಮ ಜನಪರವಾದ ಕಾರ್ಯಕ್ರಮವಾಗಿದ್ದು ಸರ್ಕಾರ ರಚನೆಯಾದ 10- 15 ದಿನಗಳಲ್ಲಿಯೇ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿರುವುದು ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷವೇ ಮೊದಲು. ಇಂದಿನಿಂದ ನಮ್ಮ ನಾಡಿನ ತಾಯಂದಿರು, ಸಹೋದರಿಯರು ಎಲ್ಲರ ಮುಖದಲ್ಲೂ ನಗುವಿರಲಿ. ಈ ಸೌಲಭ್ಯವನ್ನು ಬಳಸಿಕೊಂಡು ಅವರು ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.

ಚುನಾವಣೆ ಪ್ರಚಾರದ ಸಂದರ್ಭದಲ್ಲಿ ನಮ್ಮ ಪಕ್ಷದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ತಿಳಿಸುವಾಗ ಜನರು ಇವೆಲ್ಲ ಅನುಷ್ಠಾನ ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದರು. ಆದರೆ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷವಾಗಿದ್ದು,ಇಂದು ಶಕ್ತಿ ಯೋಜನೆಗೆ ಅನುಷ್ಠಾನ ನೀಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಈ ಯೋಜನೆ ನನಗೆ ಸಂತೋಷ ತಂದಿದ್ದು ಮಹಿಳೆಯರಿಗೂ ಈ ಯೋಜನೆಯಿಂದ ಬಹಳ ಖುಷಿಯಾಗಿದೆ. ಶಕ್ತಿ ಯೋಜನೆ ಮೂಲಕ ಪುರುಷರಿಗೂ ಅನುಕೂಲವಾಗಿದೆ. ಇನ್ನು ಮುಂದೆ ಬಸ್ ಪ್ರಯಾಣಕ್ಕೆ ಬಹುತೇಕ ಮಹಿಳೆಯರು ಪುರುಷರಿಂದ ಹಣ ಪಡೆಯುತ್ತಿದ್ದರು. ಆದರೆ ಇಂದಿನಿಂದ ರಾಜ್ಯದಲ್ಲಿ ಪ್ರಯಾಣ ಮಾಡಲು ಉಚಿತ ಸೌಲಭ್ಯ ಕಲ್ಪಿಸಿರುವುದರಿಂದ ಹಣವು ಉಳಿತಾಯವಾಗಲಿದೆ ಎಂದರು.ನಮ್ಮ ಸರ್ಕಾರ ಪುರುಷರನ್ನು ಎಂದಿಗೂ ಉದಾಸೀನ ಮಾಡುವುದಿಲ್ಲ. ಅವರಿಗೂ ಹಲವು ಸೌಲಭ್ಯಗಳನ್ನು ನೀಡಿದೆ ಎಂದರು.

ಶೀಘ್ರ ಸ್ಮಾರ್ಟ್ ಕಾರ್ಡ್
ಇಂದಿನಿಂದ ರಾಜ್ಯಾದ್ಯಂತ ಯಾವ ಸ್ಥಳಕ್ಕೆ ಬೇಕಾದರೂ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ನೀವು ಇಂದಿನಿಂದ ವೋಟರ್ ಐಡಿ ಅಥವಾ ಆಧಾರ್ ಕಾರ್ಡ್ ತೋರಿಸಿದರೆ ಸಾಕು.

ನಿಮ್ಮನ್ನು ಗೌರವಯುತವಾಗಿ ಕರೆದುಕೊಂಡು ಹೋಗುವ ಕೆಲಸವನ್ನು ಸಾರಿಗೆ ಸಿಬ್ಬಂದಿಗಳು ಮಾಡುತ್ತಾರೆ.
ಸಾರಿಗೆ ಸಿಬ್ಬಂದಿಗಳು ನಿಮಗೆ ಟಿಕೆಟ್ ಕೊಡುತ್ತಾರೆ. ಈ ಟಿಕೆಟ್ ದರವನ್ನು ಸರ್ಕಾರ ಭರಿಸಲಿದೆ. ಇನ್ನು ಮೂರು ತಿಂಗಳೊಳಗೆ ಎಲ್ಲರಿಗೂ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು. ಎಲ್ಲಾ ಮಹಿಳೆಯರು ಇದನ್ನು ಕಡ್ಡಾಯವಾಗಿ ಪಡೆದುಕೊಂಡು ಪ್ರಯಾಣಿಸಬೇಕು. ಸ್ಮಾರ್ಟ್ ಕಾರ್ಡ್ ಪಡೆಯುವ ಬಗ್ಗೆ ಅಧಿಕಾರಿಗಳು ನಿಮಗೆ ಶೀಘ್ರದಲ್ಲಿ ಮಾಹಿತಿ ನೀಡುತ್ತಾರೆ ಎಂದರು.

ನಮ್ಮ ಪಕ್ಷದ ರಾಷ್ಟ್ರೀಯ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ಪ್ರಯತ್ನದ ಫಲವಾಗಿ ಜಾರಿಗೆ ಬಂದಿರುವ ಶಕ್ತಿ ಯೋಜನೆ ರಾಜ್ಯವನ್ನು ಅಭಿವೃದ್ಧಿ ಮಾಡಲಿದೆ.

ಮಹಿಳೆಯರಿಗೆ ಉಚಿತವಾಗಿ ಬಸ್ ಪ್ರಯಾಣ ಕಲ್ಪಿಸಿರುವುದರಿಂದ ಅವರ ಹಣ ಉಳಿತಾಯವಾಗಲಿದೆ.ಈ ಉಳಿತಾಯದ ಹಣವನ್ನು ಮಹಿಳೆಯರು ದಿನಸಿ,ಮಕ್ಕಳ ಶಾಲಾ ಶುಲ್ಕ, ಗ್ಯಾಸ್ ಮೊದಲಾದವುಗಳಿಗೆ ಖರ್ಚು ಮಾಡಿಕೊಳ್ಳ ಬಹುದು ಎಂದರು.

ಬಸ್ಸಿನಲ್ಲಿ ನಿರ್ವಾಹಕರು ಮಹಿಳೆಯರೊಂದಿಗೆ ಸೌಜನ್ಯನಿಂದ ವರ್ತಿಸಬೇಕು.ಉಚಿತ ಪ್ರಯಾಣ ಎಂದು ಮೂದಲಿಸಬಾರದು.ಅವರ ತೆರಿಗೆ ಹಣದಿಂದ ಈ ಯೋಜನೆ ರೂಪಿಸಿದ್ದು, ಮಹಿಳೆಯರು ಹೆಚ್ಚು ಇರುವ ಸ್ಥಳದಲ್ಲಿ ಬಸ್ ನಿಲುಗಡೆ ಮಾಡದಿರುವುದು, ಅನುಚಿತವಾಗಿ ವರ್ತಿಸುವ ಬಗ್ಗೆ ದೂರುಗಳು ಬಂದರೆ ಕ್ರಮ ವಹಿಸಲಾಗುವುದು ಎಂದರು.

ಮಂಡ್ಯದಿಂದ ರಾಮನಗರ ಹಾಗೂ ಮಂಡ್ಯದಿಂದ ಮೈಸೂರಿಗೆ ಬಸ್ ಗಳು ಇಲ್ಲದಿದ್ದರೆ ವ್ಯವಸ್ಥೆ ಮಾಡುವಂತೆ ತಿಳಿಸಿದರು.

ಮಂಡ್ಯ ಬಸ್ ನಿಲ್ದಾಣ ನವೀಕರಣದ ಬಗ್ಗೆ ಶಾಸಕ ಗಣಿಗ ರವಿಕುಮಾರ್ ಮನವಿ ಮಾಡಿದ್ದು, ನವೀಕರಣ ಕುರಿತಂತೆ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಸೂಚಿಸಿದರು‌.

ಮಹಿಳೆಯರಿಗೆ ಕಾಂಗ್ರೆಸ್ ಗೌರವ
ಶಾಸಕ ರವಿಕುಮಾರ್ ಮಾತನಾಡಿ, ಮಂಡ್ಯ ಜಿಲ್ಲೆಯ ಮಹಿಳೆಯರು ಮಂಡ್ಯದಿಂದ ರಾಜ್ಯದ ಯಾವ ಜಿಲ್ಲೆಗೂ ಬೇಕಾದಾರೂ ಬಡವರು, ಶ್ರೀಮಂತರು ಎಂಬ ಬೇಧ- ಭಾವವಿಲ್ಲದೇ ಎಲ್ಲೆಡೆ ಮಹಿಳೆಯರು‌ ಉಚಿತವಾಗಿ ಸಂಚರಿಸಬಹುದು. ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಯಾವ ರೀತಿಯ ಗೌರವ ಕೊಡುತ್ತದೆ ಎನ್ನುವುದು ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡಿರುವುದರಿಂದ ತಿಳಿಯಬಹುದು.

ಮಹಿಳೆಯರು ತಾಯಿ, ಅಕ್ಕ, ತಂಗಿ, ಹೆಂಡತಿಯಾಗಿ ಜೀವನದಲ್ಲಿ ಹಲವು ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಅವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ‌. ಮಹಿಳೆಯರನ್ನು ಗೌರವಿಸಲು ಕಾಂಗ್ರೆಸ್ ಪಕ್ಷ ಶಕ್ತಿ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.

ಹಲವಾರು ಮಹಿಳೆಯರು ತಮ್ಮ ಮನೆಯ ಕೆಲಸದ ನಿರ್ವಹಣೆಯ ಜೊತೆಗೆ ಹೊರಗೂ ಸಹ ದುಡಿಯುತ್ತಾರೆ. ಗೆಜ್ಜಲಗೆರೆ ಗಾರ್ಮೆಂಟ್ ನಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರು ಅಟೋಗಳಲ್ಲಿ ಹಣ ಉಳಿತಾಯ ಮಾಡಲು ಕಡಿಮೆ ಆಸನದ ವ್ಯವಸ್ಥೆ ಇದ್ದರೂ ಹೆಚ್ಚಿನ ಜನರು ಸಂಚರಿಸುತ್ತಾರೆ. ಮಹಿಳೆಯರು ಈ ಯೋಜನೆಯ ಸದ್ಬಳಕೆ ಮಾಡಿಕೊಂಡು ಮುಂದುವರೆಯಬೇಕೆಂದು ತಿಳಿಸಿದರು.

ಸಚಿವರಾದ ಚಲುವರಾಯಸ್ವಾಮಿ ಯವರು ಈ ಹಿಂದೆ ಸಾರಿಗೆ ಸಚಿವರಾಗಿದ್ದಾಗ ಮಂಡ್ಯ ಬಸ್ ನಿಲ್ದಾಣ ಆಧುನೀಕರಣಗೊಂಡಿತು. ಈಗ ಜನಸಂಖ್ಯೆ ಹೆಚ್ಚಳವಾಗಿರುವುದರಿಂದ, ಸುಸಜ್ಜಿತವಾದ ಬಸ್ ನಿಲ್ದಾಣ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರೇ ಅನುದಾನ ಕೊಡಿಸಬೇಕೆಂದು ಅವರಿಗೆ ಮನವಿ ಸಲ್ಲಿಸಿದರು‌‌.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಹೆಚ್.ಎನ್ .ಗೋಪಾಲಕೃಷ್ಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ್, ಪ್ರಾದೇಶಿಕ ಸಾರಿಗೆ ಅಧಿಕಾರಿ ವಿವೇಕಾನಂದ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಯುವ ಘಟಕದ ಅಧ್ಯಕ್ಷ ವಿಜಯ್ ಕುಮಾರ್, ನಗರಸಭಾ ಸದಸ್ಯರಾದ ಪೂರ್ಣಿಮಾ,ಶ್ರೀಧರ್,,ಜ್ಯೋತಿ ಮುಖಂಡರಾದ ಮನ್ಮುಲ್ ನಿರ್ದೇಶಕ ಶಿವಕುಮಾರ್,  ಮುನಾವರ್ ಖಾನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!