Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಣ್ಣಾಮುಚ್ಚಾಲೆ ಆಡುತ್ತಿರುವ ಪ್ರಜ್ವಲ್ ರೇವಣ್ಣ ಬ್ಯಾಂಕ್ ಖಾತೆಗಳ ಫ್ರೀಝ್ ಮಾಡಲು ಮುಂದಾದ ಎಸ್‌ಐಟಿ !

ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಭಾಗಿಯಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಆರ್ಥಿಕವಾಗಿ ಕಟ್ಟಿಹಾಕಲು ವಿಶೇಷ ತನಿಖಾ ತಂಡ (ಎಸ್‍ಐಟಿ) ಮುಂದಾಗಿದೆ.

ಪ್ರಜ್ವಲ್ ರೇವಣ್ಣಗೆ ಸೇರಿದ ಎಲ್ಲ ಬ್ಯಾಂಕ್ ಖಾತೆಗಳ ಮಾಹಿತಿ ಪಡೆಯಲಾಗಿದ್ದು, ಅವರಿಗೆ ಸೇರಿದ ಬ್ಯಾಂಕ್ ಅಕೌಂಟ್‍ಗಳನ್ನು ಫ್ರೀಝ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.

ಈಗಾಗಲೇ ಪ್ರಜ್ವಲ್ ಖಾತೆಗೆ ಹಣ ಸಂದಾಯ ಆಗಿರುವ ಎಲ್ಲ ಮಾಹಿತಿಯನ್ನು ಎಸ್‍ಐಟಿ ಕಲೆಹಾಕಿದೆ. ಎಸ್‍ಐಟಿ ಮೂಲಗಳ ಮಾಹಿತಿಯ ಪ್ರಕಾರ ಪ್ರಜ್ವಲ್ ಏಳು ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಆ ಬ್ಯಾಂಕ್‍ಗಳ ಸಂಪೂರ್ಣ ಮಾಹಿತಿ ಅಧಿಕಾರಿಗಳು ಪಡೆದಿದ್ದಾರೆ.

ಪ್ರಜ್ವಲ್ ತಲೆಮರೆಸಿಕೊಂಡು ತಿಂಗಳಾಗುತ್ತ ಬಂದಿದ್ದು,ಇನ್ನೂ ಪತ್ತೆಯಾಗದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ಕಳೆದ ಏ.21ರಂದು ಸ್ಫೋಟಗೊಂಡ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ವಿಡಿಯೋಗಳಲ್ಲಿ ಹಲವಾರು ಮಹಿಳೆಯರ ಅಶ್ಲೀಲ ವೀಡಿಯೋ ಎಲ್ಲೆಡೆ ಹರಿದಾಡುತ್ತಿವೆ.

ಈಗಾಗಲೇ ಸಂತ್ರಸ್ತೆಯರು ಈ ಬಗ್ಗೆ ದೂರು ದಾಖಲಿಸಿದ್ದು, ಅವರ ಹೇಳಿಕೆಯನ್ನು ಪಡೆದುಕೊಂಡು ತನಿಖೆ ನಡೆಸಲಾಗುತ್ತಿದೆ. ಸಂತ್ರೆಸ್ತೆ ಹೇಳಿಕೆ ಪ್ರಕಾರ ಅವರ ನಿವಾಸದಲ್ಲೇ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಪ್ರಕರಣ ಸದ್ದು ಮಾಡುತ್ತಿದ್ದಂತೆ ವಿದೇಶಕ್ಕೆ ತೆರಳಿದ್ದ ಪ್ರಜ್ವಲ್‍ಗೆ ಈಗಾಗಲೇ ಅಧಿಕಾರಿಗಳು ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಿದ್ದಾರೆ. ಇನ್ನೂ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿ ರೆಡ್ ಕಾರ್ನರ್ ನೋಟಿಸ್ ನೀಡಲು ಎಸ್‌ಐಟಿ ತಯಾರಿ ನಡೆಸಿದೆ.

ಪ್ರಜ್ವಲ್ ಸಿಗುತ್ತಿಲ್ಲ, ಎಸ್ಐಟಿ ಬಿಡುತ್ತಿಲ್ಲ

ಪ್ರಜ್ವಲ್ ರೇವಣ್ಣ ಅವರನ್ನು ವಶಕ್ಕೆ ಪಡೆಯಲು ತನಿಖಾ ತಂಡ ನಾನಾ ಮಾರ್ಗಗಳ ಮೊರೆ ಹೋಗುತ್ತಿದೆ. ಬೆಂಗಳೂರಿಗೆ ವಾಪಸ್ ಆಗಲು ಸುಮಾರು ಐದು ಬಾರಿ ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿರುವ ಅವರು ಇದೀಗ ಜರ್ಮನಿಯಿಂದ ಲಂಡನ್ ನತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಂಗ್ಲೆಂಡ್‌ನಲ್ಲಿರುವ ಭಾರತದ ಉದ್ಯಮಿಯೊಬ್ಬರ ಸಹಾಯದಿಂದ ಪ್ರಜ್ವಲ್‌ ತನ್ನ ಇಬ್ಬರು ಗೆಳೆಯರೊಂದಿಗೆ ರೈಲು ಮೂಲಕ ಜರ್ಮನಿಯ ಮ್ಯೂನಿಚ್‌ನಿಂದ ಲಂಡನ್‌ಗೆ ಹೋಗಿದ್ದಾರೆ ಎಂಬುವುದು ಗೊತ್ತಾಗಿದೆ.

ವಿದೇಶದಲ್ಲಿರುವ ಪ್ರಜ್ವಲ್‌ಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಎಸ್‌‍ಐಟಿ ನೋಟಿಸ್‌ಗಳನ್ನು ಕೊಟ್ಟಿತ್ತು. ಇದಕ್ಕೆ ಪ್ರಜ್ವಲ್ ಪರ ವಕೀಲರು ವಿಚಾರಣೆಗಾಗಿ ಕಾಲಾವಕಾಶ ಕೇಳಿದ್ದರು. ಕಾಲಾವಕಾಶ ಅವಧಿ ಮುಗಿದರೂ ಸಹ ಪ್ರಜ್ವಲ್‌ ವಿಚಾರಣೆಗೆ ಹಾಜರಾಗದ ಕಾರಣ ಲುಕ್‌ಔಟ್‌ ನೋಟಿಸ್‌ ಸಹ ಜಾರಿ ಮಾಡಲಾಗಿತ್ತು.

ನಂತರ ಬ್ಲೂಕಾರ್ನರ್‌ ನೋಟಿಸ್‍ ನೀಡಿದ್ದರೂ ಸಹ ಪ್ರಜ್ವಲ್‌ ವಿಚಾರಣೆಗೆ ಬಂದಿಲ್ಲ. ಹಾಗಾಗಿ ಇದೀಗ ರೆಡ್‌ ಕಾರ್ನರ್‌ ನೋಟಿಸ್ ನೀಡಲು ಎಸ್‌‍ಐಟಿ ಸಿದ್ಧತೆ ಮಾಡಿಕೊಳ್ಳುತ್ತಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!