Thursday, September 19, 2024

ಪ್ರಾಯೋಗಿಕ ಆವೃತ್ತಿ

ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿಗೆ ಜಾಮೀನು| ಸುಪ್ರೀಂ ಕೋರ್ಟಿನಿಂದ ಆರೋಪಿಗೆ ನೋಟೀಸ್‌

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೋಹನ್‌ ನಾಯಕ್‌ಗೆ ಹೈಕೋರ್ಟ್ ನೀಡಿರುವ ಜಾಮೀನು ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರ ಮಾಡಿದ ಮನವಿ ಮೇರೆಗೆ ಆರೋಪಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ ಎಂದು ತಿಳಿದು ಬಂದಿದೆ.

ಗೌರಿ ಲಂಕೇಶ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ಪರವಾಗಿ ವಕೀಲ ವಿ ಎನ್‌ ರಘುಪತಿ ಸಲ್ಲಿಸಿದ ಮನವಿಯ ಮೇರೆಗೆ ಆರೋಪಿಗಳಿಂದ ಪ್ರತಿಕ್ರಿಯೆ ಪಡೆಯುವಂತೆ ನ್ಯಾಯಾಧೀಶರಾದ ವಿಕ್ರಮ್‌ ನಾಥ್ ಹಾಗೂ ಚಂದ್ರ ಶರ್ಮಾ ನೇತೃತ್ವದ ಪೀಠವು ನಿರ್ದೇಶನ ನೀಡಿದೆ.

ತಮ್ಮ ಸಹೋದರಿಯ ಹತ್ಯೆಗೆ ಸಂಬಂಧಿಸಿದಂತೆ ಸಹೋದರಿ ಕವಿತಾ ಲಂಕೇಶ್ ಅವರು ಸಲ್ಲಿಸಿದ ಅರ್ಜಿಗೆ ಜನವರಿಯಲ್ಲಿ ಆರೋಪಿಗೆ ಇದೇ ರೀತಿಯ ನೋಟಿಸ್ ಜಾರಿಗೊಳಿಸಿತ್ತು. ಪ್ರಕರಣದಲ್ಲಿ ದೂರುದಾರರಾದ ಕವಿತಾ ಪರ ವಕೀಲೆ ಅಪರ್ಣ ಭಟ್ ನ್ಯಾಯಾಲಕ್ಕೆ ಹಾಜರಾಗಿದ್ದರು. ಎರಡು ಅರ್ಜಿಗಳನ್ನು ಸೇರಿಸಿ ಆದೇಶಿಸಿರುವ ನ್ಯಾಯಾಲಯವು ಏಪ್ರಿಲ್ 9 ರಂದು ವಿಚಾರಣೆ ಕೈಗೊಳ್ಳಲು ನಿರ್ಧರಿಸಿದೆ.

ಆರೋಪಿ ಮೋಹನ್‌ ನಾಯಕ್‌ಗೆ ಕರ್ನಾಟಕ ಹೈಕೋರ್ಟ್ ಡಿಸೆಂಬರ್ 7 ರಂದು ಜಾಮೀನು ಮಂಜೂರು ಮಾಡಿತ್ತು.

ಮುಂಚೂಣಿ ಪತ್ರಕರ್ತೆ ಹಾಗೂ ಚಳುವಳಿಗಾರರಾಗಿದ್ದ ಗೌರಿ ಲಂಕೇಶ್ ಅವರನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದ ಅವರ ಮನೆಯ ಎದುರು ಸೆಪ್ಟೆಂಬರ್ 5, 2017ರಂದು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಆರೋಪಿಯು ಐದು ವರ್ಷಗಳಿಗೂ ಹೆಚ್ಚು ಕಾಲ ಸೆರೆಮನೆ ವಾಸದಲ್ಲಿದ್ದು, ವಿಚಾರಣೆಯಲ್ಲಿ ಅನಗತ್ಯ ವಿಳಂಬ ಉಂಟಾದಾಗ ಜಾಮೀನನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿತ್ತು.

ಗಂಭೀರ ಆರೋಪಗಳಿರುವ ಕೋಕಾ ಕಾಯ್ದೆಯಡಿ ಬಂಧಿತನಾಗಿರುವ ಆರೋಪಿ ಮೋಹನ್‌ ನಾಯಕ್ ಎನ್‌ ಎಂಬಾತನ ಆರೋಪಗಳನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಏಪ್ರಿಲ್ 22, 2021 ರಂದು ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಅಕ್ಟೋಬರ್ 21, 2021ರಂದು ತಳ್ಳಿಹಾಕಿತ್ತು.

ಗೌರಿ ಲಂಕೇಶ್ ಹತ್ಯೆಯ ಪ್ರಮುಖ ಆರೋಪಿ ಅಮೋಲ್ ಕಾಳೆಯೊಂದಿಗೆ ಆರೋಪಿ ಮೋಹನ್‌ ನಾಯಕ್ ಕೂಡ ಆತನ ಜೊತೆ ಹಲವು ಸಂಘಟಿತ ಅಪರಾಧಗಳಲ್ಲಿ ಭಾಗಿಯಾಗಿದ್ದ ಎಂದು ಆರೋಪಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!