Friday, November 20, 2026

ಪ್ರಾಯೋಗಿಕ ಆವೃತ್ತಿ

ಹೆಚ್ಚು ಸಮಯ ಕೆಮ್ಮು ಇದ್ದಲ್ಲಿ ಕಫ ಪರೀಕ್ಷೆ ಮಾಡಿಸಿ ; ಬೆನ್ನೂರ್

ವಾರಕ್ಕಿಂತಲೂ ಹೆಚ್ಚಿನ ಸಮಯ ಕೆಮ್ಮು ಇದ್ದಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಕಫ ಪರೀಕ್ಷೆ ಮಾಡಿಸಿ ಕ್ಷಯ ಇದ್ದಲ್ಲಿ ಸೂಕ್ತ ಚಿಕಿತ್ಸೆ ಪಡೆಯಿರಿ ಕ್ಷಯಕ್ಕೆ ಭಯ ಬೇಡ ಎಚ್ಚರಿಕೆ ಇರಲಿ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಬೆಳಗೋಳ ಆಯುಷ್ಮಾನ್ ಆರೋಗ್ಯ ಮಂದಿರ ವತಿಯಿಂದ ಹಮ್ಮಿಕೊಂಡಿದ್ದ 100 ದಿನಗಳ ಕ್ಷಯಮುಕ್ತ ಅಭಿಯಾನದ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ವಾರಕ್ಕಿಂತಲೂ ಹೆಚ್ಚಿನ ಸಮಯವರೆಗೂ ಕೆಮ್ಮು,ಕೆಮ್ಮಿದಾಗ ಕಫದಲ್ಲಿ ರಕ್ತ ಕಂಡು ಬರುವುದು,ಹಸಿವು ಆಗದೆ ಇರುವುದು,ರಾತ್ರಿ ವೇಳೆ ಅತಿಯಾದ ಬೆವರು,ಜ್ವರ ಕಾಣಿಸುವುದು, ತೂಕ ಕಡಿಮೆ ಆಗುವುದು ಕ್ಷಯದ ಮುಖ್ಯ ಲಕ್ಷಣಗಳಾಗಿವೆ.ಹಿರಿಯ ನಾಗರಿಕರಿಗೆ, ದೀರ್ಘಕಾಲಿನ ಕಾಯಿಲೆಯಿಂದ ಬಳಲುತ್ತಿರುವವರು,ಮಧುಮೇಹ ಕಾಯಿಲೆ ಇರುವವರು, ಧೂಮಪಾನಗಳಲ್ಲಿ,ಮಧ್ಯಪಾನಗಳಲ್ಲಿ ಹಾಗೂ ರಕ್ತ ಹೀನತೆಯಿಂದ ಬಳಲುತ್ತಿರುವವರಲ್ಲಿ ಕ್ಷಯ ರೋಗ ಕಾಣಿಸಿಕೊಳ್ಳುವ ಸಂಭವ ಇರುವುದರಿಂದ ನಿಯಮಿತವಾಗಿ ಸಮೀಪದ ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ಕಡ್ಡಾಯವಾಗಿ ಕ್ಷಯ ರೋಗದ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಸೂಕ್ತವಾದ ಚಿಕಿತ್ಸೆಯನ್ನು ಪಡೆದುಕೊಂಡು ಗುಣಮುಖರಾಗಬಹುದು ಎಂದು ಹೇಳಿದರು.

ಆಡಳಿತ ವೈದ್ಯಾಧಿಕಾರಿ ಡಾ. ಗಣೇಶ್ ಪ್ರಸಾದ ಮಾತನಾಡಿ, ಕ್ಷಯ ಒಂದು ಸಾಂಕ್ರಾಮಿಕ ರೋಗವಾಗಿದ್ದು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ತಡೆಯುವುದಕ್ಕೆ ರೋಗ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಕ್ಷಯ ಪರೀಕ್ಷೆ ಮಾಡಿಸಿಕೊಂಡು ಸೂಕ್ತವಾದ ಚಿಕಿತ್ಸೆ ಪಡೆದಲ್ಲಿ ತಾಲೂಕನ್ನು ಕ್ಷಯ ಮುಕ್ತವನ್ನಾಗಿ ಮಾಡಬಹುದು. ಹಾಗಾಗೀ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡ ವಿಶೇಷ 100 ದಿನಗಳ ಕ್ಷಯಮುಕ್ತ ಅಭಿಯಾನಕ್ಕೆ ಪ್ರತಿಯೊಬ್ಬರು ಸಹಕಾರ ನೀಡುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಿ 2025 ಕ್ಕೆ ದೇಶವನ್ನು ಕ್ಷಯ ಮುಕ್ತಗೊಳಿಸಲು ಎಲ್ಲರೂ ಸನ್ನದ್ಧರಾಗಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಜ್ಯೋತಿ ಟಿ ಟಿ ಮಕ್ಕಳಿಗೆ 100 ದಿನಗಳ ಕ್ಷಯಮುಕ್ತ ಅಭಿಯಾನದ ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ವೇಳೆ ಉಪನ್ಯಾಸಕರಾದ ಹರೀಶ್ ಎ ಆರ್, ಮೋಹನ್ ಆರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ ಬಿ ಹೇಮಣ್ಣ, ಶುಶ್ರೂಷಕ ಅಧಿಕಾರಿ ರವಿಪ್ರಕಾಶ್ ಎಸ್. ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಜ್ಯೋತಿ, ಆಶಾ ಕಾರ್ಯಕರ್ತೆ ಜಯಂತಿ,ಸಾವಿತ್ರಿ ಹಾಗೂ ವಸತಿ ಶಾಲೆಯ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ