Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಲಿಂಗ ಪದ್ದತಿ- ಸ್ವಾತಂತ್ರ್ಯ- ಮೂಲಭೂತ ಹಕ್ಕುಗಳು- ಮಾನವೀಯ ಸ್ಪಂದನೆ

✍️ ವಿವೇಕಾನಂದ ಎಚ್.ಕೆ

ಸಲಿಂಗ ಪದ್ಧತಿ….ಹಲವು ಮುಖಗಳ ಸಂಕೀರ್ಣದಲ್ಲೊಂದು ಸರಳ ಮಾನವೀಯ ಸ್ಪಂದನೆ……

ಗಂಡು ಹೆಣ್ಣು ಹೊರತುಪಡಿಸಿದ ಮತ್ತೊಂದು ದೈಹಿಕ ಮತ್ತು ಮಾನಸಿಕ ಪಂಗಡವೊಂದು ಮನುಷ್ಯ ವರ್ಗದಲ್ಲಿ ಅಸ್ತಿತ್ವದಲ್ಲಿದೆ. ಇದು ಇಡೀ ವಿಶ್ವದ ಒಂದು ಪ್ರಾಕೃತಿಕ ಸೃಷ್ಟಿ ಮತ್ತು ವರ್ಗೀಕರಣ. ಇದರ ಆಗುಹೋಗುಗಳ ಬಗ್ಗೆ ಮಾನವ ಶಾಸ್ತ್ರಜ್ಞರು, ಮನೋವೈದ್ಯಕೀಯ ತಜ್ಞರು, ವೈದ್ಯರು ಮತ್ತು ವಿಜ್ಞಾನಿಗಳು ಅಧಿಕೃತವಾಗಿ ಮಾತನಾಡುವ ಅರ್ಹತೆ ಹೊಂದಿರುತ್ತಾರೆ. ಅದನ್ನು ಹೊರತುಪಡಿಸಿ ವೈಯಕ್ತಿಕ, ಸಾಮಾಜಿಕ ಮತ್ತು ಕಾನೂನಾತ್ಮಕ ಜೊತೆಗೆ ಮಾನವೀಯ ಮೌಲ್ಯಗಳ ಹಿನ್ನೆಲೆಯಲ್ಲಿ ಒಂದು ಅಭಿಪ್ರಾಯ…..

ಸಲಿಂಗಿಗಳು, ದ್ವಿಲಿಂಗಿಗಳು, ಲಿಂಗತ್ವ ಅಲ್ಪಸಂಖ್ಯಾತರು ಅಥವಾ ಸರಳವಾಗಿ ಹೇಳುವುದಾದರೆ ಗಂಡು ಹೆಣ್ಣು ಎರಡರ ಗುಣಲಕ್ಷಣಗಳನ್ನು ಹೊಂದಿರುವವರ ಬಗ್ಗೆ…..

ಬಹುಶಃ ಬಹುತೇಕ ಪ್ರಕರಣಗಳಲ್ಲಿ ಇದು ಅವರ ಆಯ್ಕೆಯಾಗಿರದೆ ಅದೊಂದು ಸಹಜ ಬೆಳವಣಿಗೆ. ಅದರಲ್ಲಿ ಅವರ ಪೋಷಕರ ಅಥವಾ ವ್ಯಕ್ತಿಯ ಯಾವುದೇ ಪಾತ್ರವಿರುವುದಿಲ್ಲ. ಆ ಕಾರಣ ಅವರನ್ನು ಸಹ ಎಲ್ಲರಂತೆ ಮಾನವ ಜನಾಂಗದ ಒಂದು ತಳಿ ಎಂದು ಒಪ್ಪಿಕೊಳ್ಳಬೇಕು ಮತ್ತು ಸ್ವೀಕರಿಸಬೇಕು…….

ಸೃಷ್ಟಿಯ ವಿಶಾಲತೆಯ ದೃಷ್ಟಿಯಲ್ಲಿ ಅದಕ್ಕೆ ವಿಶೇಷ ಮಾನ್ಯತೆಯ ಅವಶ್ಯಕತೆ ಇಲ್ಲ. ಆದರೆ ಸಮಾಜದಲ್ಲಿ ಸಂಖ್ಯಾ ದೃಷ್ಟಿಯಿಂದ ಅತ್ಯಂತ ಕಡಿಮೆ ಇರುವ ಮತ್ತು ಲಿಂಗತ್ವದ ಆಧಾರದ ಮೇಲೆ ಸಮಾಜ ವಿಭಜನೆ ಆಗಿರುವುದರಿಂದ ಸಾಂಪ್ರದಾಯಿಕ ಮನಸ್ಸುಗಳು ಸಲಿಂಗ ಪದ್ದತಿಯನ್ನು ವಿಚಿತ್ರವಾಗಿ ನೋಡುತ್ತಾರೆ. ಅವರ ವರ್ತನೆ ಅಪಹಾಸ್ಯ ಅಥವಾ ಮುಜುಗರ ಎಂದೇ ಭಾವಿಸುತ್ತಾರೆ. ಅವರೊಂದಿಗಿನ ಒಡನಾಟದಿಂದ ದೂರ ಇರುತ್ತಾರೆ. ಅವರನ್ನು ಪ್ರತ್ಯೇಕ ಎಂದೇ ನೋಡುತ್ತಾರೆ. ಪರಿಣಾಮ ಅವರು ಬಹುತೇಕ ಸಾಮಾಜಿಕ ಮತ್ತು ವೈಯಕ್ತಿಕ ಅಸ್ಪೃಶ್ಯರೇ ಆಗಿದ್ದಾರೆ. ಪ್ರತ್ಯೇಕ ಪಂಗಡವಾಗಿ ಗುಂಪಿನಲ್ಲಿ ವಾಸಿಸುತ್ತಾರೆ. ಅನೇಕ ಮೂಲಭೂತ ಹಕ್ಕುಗಳಿಂದ ಪರೋಕ್ಷವಾಗಿ ವಂಚಿತರಾಗಿದ್ದಾರೆ….

ತಾವು ಮಾಡದ ತಪ್ಪಿಗೆ ಸಮಾಜದಿಂದ ತಿರಸ್ಕರಿಸಿ ನಿರ್ಲಕ್ಷ್ಯಕ್ಕೆ ಒಳಾಗದವರ ಕ್ಷಮೆ ಕೇಳಿ ಅವರನ್ನು ಎಲ್ಲರಂತೆ ಸಹಜ ವ್ಯಕ್ತಿಗಳಾಗಿ ಸಮಾಜ ಸ್ವೀಕರಿಸಬೇಕು. ಆ ಐತಿಹಾಸಿಕ ಸಂದರ್ಭ ಈಗ ಬಂದಿದೆ…..

ಎಂತಹ ಕೊಲೆಗಡುಕರು, ಅತ್ಯಾಚಾರಿಗಳು, ದರೋಡೆಕೋರರು, ಭ್ರಷ್ಟಾಚಾರಿಗಳು, ಮತಾಂಧರೇ ಸಮಾಜದ ಮುಖ್ಯವಾಹಿನಿಯಲ್ಲಿ ಮೆರೆಯುತ್ತಿರುವಾಗ ಸಲಿಂಗಿಗಳಿಗೆ ಸಹಜ ಮಾನ್ಯತೆ ನೀಡದಿದ್ದರೆ ಅದು ದೊಡ್ಡ ತಪ್ಪಾಗುತ್ತದೆ….

ಮಾನವೀಯ ಮೌಲ್ಯವೆಂದರೆ ನಾವು ಕೇವಲ ನಮ್ಮ ಅನುಕೂಲವನ್ನು ಮಾತ್ರ ನೋಡುವುದಲ್ಲ. ನಮಗೆ ಸಂಬಂಧಿಸಿಲ್ಲದಿದ್ದರು ಇತರರ ಅನುಕೂಲಕ್ಕೆ ತಕ್ಕಂತೆ ನಾವು ಸ್ವಲ್ಪ ಸ್ಪಂದಿಸಬೇಕಾಗುತ್ತದೆ. ಸಲಿಂಗಿಗಳು ಭಯೋತ್ಪಾದಕರಲ್ಲ. ಅವರಿಂದ ಸಾರ್ವಜನಿಕ ಬದುಕಿಗೆ ಯಾವುದೇ ಹಾನಿಯಿಲ್ಲ. ಅವರು ತಪ್ಪು ಮಾಡಿದರೆ ಎಲ್ಲರಂತೆ ಅವರಿಗೂ ಕಾನೂನಿನ ಶಿಕ್ಷೆ ಇದೆ……….

ಎಲ್ಲೋ ತೀರಾ ಅಪರೂಪದಲ್ಲಿ ಅಪರೂಪಕ್ಕೆ ಗಂಡು – ಗಂಡು ಅಥವಾ ಹೆಣ್ಣು – ಹೆಣ್ಣು ಒಟ್ಟಿಗೆ ವಾಸ ಮಾಡಿದರೆ ಸಮಸ್ಯೆ ಏನು. ಏಕೆಂದರೆ ಇದು ಮುಂದೆ ಆಕರ್ಷಣೆಗೆ ಒಳಗಾಗಿ ಸಾಂಕ್ರಾಮಿಕ ಆಗುವ ಸಾಧ್ಯತೆಯೇ ಇಲ್ಲ. ಏಕೆಂದರೆ ಸಹಜ ಆರೋಗ್ಯವಂತ ವ್ಯಕ್ತಿ ಇದನ್ನು ಇಷ್ಟ ಪಡುವುದೇ ಇಲ್ಲ. ಕೇವಲ ಆ ರೀತಿಯ ದೇಹ ಮತ್ತು ಮನಸ್ಸು ಬದಲಾವಣೆ ಆಗುವವರು ಮಾತ್ರ ಒಟ್ಟಾಗುತ್ತಾರೆ…..

ವ್ಯಕ್ತಿ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ಪ್ರಾಕೃತಿಕ ಸಹಜ ಪ್ರಕ್ರಿಯೆಗೆ ಸಾಂಪ್ರದಾಯಿಕ ಸಮಾಜದ ಕಾರಣದಿಂದ ತಡೆಯೊಡ್ಡುವುದು ಸೃಷ್ಟಿಗೆ ಮತ್ತು ಆ ರೀತಿಯ ವ್ಯಕ್ತಿಗಳಿಗೆ ಮಾಡುವ ಅನ್ಯಾವಲ್ಲವೇ….

ಹಾಗೆಯೇ ಈ ಸಂಬಂಧಗಳಿಂದ ಸಮಾಜದ ಮೇಲೆ ಯಾವುದಾದರೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದ್ದರೆ ತಜ್ಞರಿಂದ ಮಾಹಿತಿ ಪಡೆದು ಅದನ್ನು ನಿಯಂತ್ರಿಸಲು ಹೊಸ ಕಾನೂನು ಸಹ ರಚಿಸಬಹುದು. ಆದರೆ ನಮ್ಮ ಸಾಮಾಜಿಕ ನಿಬಂಧನೆಗಳಿಗಾಗಿ ಅವರನ್ನು, ಅವರ ಭಾವನೆಗಳನ್ನು ಶಿಕ್ಷಿಸುವುದು ಮಾನವೀಯ ಮೌಲ್ಯಗಳ ಹಿನ್ನಲೆಯಲ್ಲಿ ಅಷ್ಟು ಒಳ್ಳೆಯದಲ್ಲ. ಒಮ್ಮೆ ಅವರ ಜಾಗದಲ್ಲಿ ಮಾನಸಿಕವಾಗಿ ನಿಂತು ಯೋಚಿಸಿ. ಎಷ್ಟೊಂದು ದುಷ್ಟ ಮಾದಕ ವ್ಯಸನಿಗಳೇ ಈ ಸಮಾಜದಲ್ಲಿ ಮಾನ್ಯತೆ ಪಡೆದಿರುವಾಗ ಸೃಷ್ಟಿಯ ಸಹಜ ಜೀವಿಗಳ ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಎಷ್ಟು ಸರಿ….

ಅವರು ವೈಯಕ್ತಿಕವಾಗಿ ತುಂಬಾ ನೊಂದುಕೊಂಡಿರುತ್ತಾರೆ. ತಮ್ಮ ಸ್ಥಿತಿಗೆ ಪ್ರತಿ ಕ್ಷಣ ಅಪಾರ ನೋವು ಅನುಭವಿಸುತ್ತಾರೆ. ಸಮಾಜದ ಎಲ್ಲರಿಂದ ತಿರಸ್ಕಾರಕ್ಕೆ ಒಳಗಾಗುತ್ತಾರೆ. ಒಳ್ಳೆಯ ಮನಸ್ಸಿರುವ ಕೆಲವರು ಬಯಸಿದರೂ ಅವರಿಗೆ ಸಹಾಯ ಮಾಡುವುದು ಕಷ್ಟ. ಅವರಿಗೆ ಅವರದೇ ಮನಸ್ಥಿತಿಯ ಒಬ್ಬ ಸಂಗಾತಿ ದೊರೆತರೆ ಕನಿಷ್ಠ ಒಂದಷ್ಟು ನೆಮ್ಮದಿಯಾದರು ಸಿಗಬಹುದು. ಬದುಕಿಲ್ಲಿ ಭರವಸೆ ಮೂಡಿ ಜೀವನೋತ್ಸಾಸ ಬೆಳೆಯಬಹುದು. ಇದರಿಂದ ನಾವು ಕಳೆದುಕೊಳ್ಳುವುದಾದರು ಏನು. ಒಂದು ವೇಳೆ ಸಾಮಾಜಿಕವಾಗಿ ಏನಾದರೂ ಸಮಸ್ಯೆ ಇದ್ದರೆ ಅದನ್ನು ಬಗೆಹರಿಸಿಕೊಳ್ಳುವ ಪರ್ಯಾಯ ಮಾರ್ಗಗಳನ್ನು ಹುಡುಕಬೇಕೆ ಹೊರತು ಅವರನ್ನು ಒಂದಾಗುವಿಕೆಯನ್ನು ತಡೆದು ವಿರಹ ವೇದನೆಯಿಂದ ನರಳುವಂತೆ ಮಾಡಬಾರದು…..

ಸಲಿಂಗ ಪದ್ದತಿ ಸರಳ ಸಹಜ ಪ್ರಕ್ರಿಯೆ. ಆದರೆ ಸಮಾಜದ ಸ್ಥಾಪಿತ ಹಿತಾಸಕ್ತಿಯ ಕಾರಣದಿಂದಾಗಿ ಅದು ಸಂಕೀರ್ಣವಾಗಿದೆ. ಈಗ ಆಧುನಿಕ ಕಾಲದಲ್ಲಿ ಮತ್ತೆ ಅದನ್ನು ಸರಳೀಕರಣಗೊಳಿಸಿ ಅವರನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರದು.
ಅದು ನಾಗರಿಕ ಸಮಾಜದ ಮಾನವೀಯ ಕರ್ತವ್ಯ…….

ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಮಾನ್ಯ ಪ್ರಧಾನ ಮಂತ್ರಿಗಳು ಸಂಸತ್ತಿನಲ್ಲಿ ಇದಕ್ಕೆ ಪೂರಕವಾಗಿ ಸಲಿಂಗಿಗಳ ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಹೊಸ ಮಸೂದೆ ಮಂಡಿಸಬೇಕು ಮತ್ತು ಅದಕ್ಕೆ ಸರ್ವ ಪಕ್ಷಗಳು ಚರ್ಚಿಸಿ ಅಂಗೀಕಾರ ನೀಡಬೇಕು ಎಂದು ಮನವಿ ಮಾಡಿಕೊಳ್ಳುತ್ತಾ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!