Friday, May 17, 2024

ಪ್ರಾಯೋಗಿಕ ಆವೃತ್ತಿ

ಉದ್ಯೋಗ ಸೃಷ್ಟಿಗೆ ಒತ್ತು ನೀಡದ ರೈತ ದ್ರೋಹಿ ಕೇಂದ್ರ ಬಜೆಟ್ : ಎನ್.ಎಲ್.ಭರತ್ ರಾಜ್ 

ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಗ್ರಾಮೀಣ ಅಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಒತ್ತು ನೀಡದೆ ಶ್ರಮ ಜೀವಿಗಳ ಕೃಷಿರಂಗದ ವಿರೋಧಿ, ರೈತ ದ್ರೋಹಿ ಬಜೆಟ್ ಆಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಎನ್. ಎಲ್. ಭರತ್ ರಾಜ್ ಆರೋಪಿಸಿದ್ದಾರೆ.

ಮಳವಳ್ಳಿಯಲ್ಲಿ ಪ್ರಾಂತ ರೈತ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯೋಗ ಖಾತ್ರಿ ಯೋಜನೆಗೆ 30,000 ಕೋಟಿ ರೂ., ಆಹಾರ ಸಬ್ಸಿಡಿಗೆ 90 ಸಾವಿರ ಕೋಟಿ, ರಸಗೊಬ್ಬರಕ್ಕೆ 50,000 ಕೋಟಿ ಕಡಿತ ಮಾಡಿರುವುದಲ್ಲದೆ ಡಾ. ಸ್ವಾಮಿನಾಥನ್ ವರದಿಯಂತೆ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಪಡಿಸದೆ, ಗ್ರಾಮೀಣ ಭಾರತವನ್ನು ಕಡೆಗಣಿಸಿದೆ ಎಂದು ದೂರಿದರು.

ಪಿಎಂ ಕಿಸಾನ್ ಯೋಜನೆಯಲ್ಲಿ 12 ಕೋಟಿ ಫಲಾನುಭವಿಗಳಿಗೆ ಮತ್ತು ಹೊಸ ಸೇರ್ಪಡೆಯಾಗಿರುವ ರೈತರನ್ನ ಸೇರಿಸಿದರೆ 72,000 ಕೋಟಿಗೂ ಹೆಚ್ಚು ಹಣ ಬೇಕಾಗುತ್ತದೆ. ಆದರೆ ಕೇವಲ 60 ಸಾವಿರ ಕೋಟಿ ಮಾತ್ರ ಮೀಸಲಿಟ್ಟಿದ್ದಾರೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಿರುದ್ಯೋಗದ ಪ್ರಮಾಣ ಶೇ.42ರಷ್ಟು ಇದೆ, ಮುಂದೆಯು ಹೆಚ್ಚಾಗಲಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವ ಭರವಸೆ ಹುಸಿಯಾಗಿದೆ.

ಇರುವ ಉದ್ಯೋಗಗಳನ್ನೇ ನಾಶಪಡಿಸುತ್ತಿದ್ದಾರೆ ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸಿ ದಿನಕ್ಕೆ 600 ರೂ ಕೂಲಿ ಮತ್ತು ವರ್ಷಕ್ಕೆ 200 ದಿನ ಉದ್ಯೋಗ ಕೊಡುವುದರ ಬದಲು ಕಳೆದ ವರ್ಷದಲ್ಲಿ ಮೀಸಲಿಟ್ಟಿದ ಹಣದಲ್ಲೇ ಕಡಿತ ಮಾಡಿದ್ದಾರೆ. ಒಂದು ಜಾಬ್ ಕಾರ್ಡ್ ಹೊಂದಿರುವವರಿಗೆ ವರ್ಷಕ್ಕೆ 100 ದಿನ ಕೆಲಸ ಕೊಟ್ಟರೆ, ಎರಡು ಲಕ್ಷದ ಎಪ್ಪತ್ತೆರಡು ಸಾವಿರ ಕೋಟಿ ಹಣ ಬೇಕಾಗುತ್ತದೆ. ಗ್ರಾಮೀಣ ಉದ್ಯೋಗಕ್ಕೆ 153525 ಲಕ್ಷ ಕೋಟಿ ಯಿಂದ ಈಗ 101474 ಲಕ್ಷ ಕೋಟಿಗೆ ಇಳಿದಿದೆ. ಫಸಲ್ ಭೀಮಾ ಯೋಜನೆಗೆ 2000 ಕೋಟಿ ರೋಜ್ಗಾರ್ ಯೋಜನೆಗೆ 3000 ಕೋಟಿ ಹಣ ಕಡಿತ ಮಾಡಿದ್ದಾರೆ. ಆರೋಗ್ಯ ಕ್ಷೇತ್ರಕ್ಕೆ ಕೇವಲ ಶೇಕಡಾ 1.97 ರಷ್ಟು, ಶಿಕ್ಷಣಕ್ಕೆ ಶೇಕಡಾ.2.5 ರಷ್ಟು ಮೀಸಲಿಟ್ಟಿದ್ದಾರೆ. ಆದರೆ ಈ ಬಜೆಟ್ ಬಡ್ಡಿಗಾಗಿಯೇ ಒಟ್ಟಾರೆ ಬಜೆಟ್ ನ ಶೇಕಡಾ 23ರಷ್ಟು ಹಣವನ್ನ ಮೀಸಲಿಟ್ಟಿದ್ದಾರೆ ಅಲ್ಲದೆ 45 ಲಕ್ಷ ಕೋಟಿ ಬಜೆಟ್ ನಲ್ಲಿ ಈ ವರ್ಷ 17 ಲಕ್ಷ ಕೋಟಿ ಸಾಲ ಮಾಡಬೇಕು. ಈಗಾಗಲೇ ಭಾರತ ದೇಶದ ಸಾಲ ಒಂದು ಲಕ್ಷದ 73,000 ಕೋಟಿ ಆಗಿದೆ.

ಮೋದಿ ಅಧಿಕಾರಕ್ಕೆ ಬಂದ ನಂತರ ಒಂದು ಲಕ್ಷದ ಇಪ್ಪತ್ತು ಸಾವಿರ ಕೋಟಿ ಸಾಲ ಮಾಡಿದ್ದಾರೆ ಈ ದೇಶವನ್ನು ಸಾಲದ ಸುಳಿಗೆ ಸಿಕ್ಕಿಸಿ ಸಾಲ ತೀರಿಸಲು ದೇಶವನ್ನು ಮಾರಾಟ ಮಾಡಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೊರಟಿದೆ. ಈಗಾಗಲೇ ದೇಶದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಾಗಿ, ಒಂದಷ್ಟು ಶ್ರೀಮಂತರ ಬಳಿ 40ರಷ್ಟು ದೇಶದ ಆಸ್ತಿ ಇದೆ. ಶೇಕಡ 40ರಷ್ಟು ಸಾಮಾನ್ಯ ಜನರು, 64 ರಷ್ಟು ಜಿಎಸ್ಟಿ ತೆರಿಗೆಯನ್ನು ಪಾವತಿಸುತ್ತಾರೆ.

ಇದೊಂದು ಕಾರ್ಪೊರೇಟ್ ಕುಳಗಳ ಪರವಾದ  ದೇಶವನ್ನು ಬಡತನದ ಕೂಪಕ್ಕೆ ನೂಕುವ ದೇಶ ವಿರೋಧಿ ರೈತ ದ್ರೋಹಿ ಬಜೆಟ್ ಆಗಿದೆ. ಹೆದ್ದಾರಿ ಹೆಸರಲ್ಲಿ ಕೃಷಿ ಭೂಮಿಯನ್ನು ವಶಪಡಿಸಿಕೊಂಡು ಕಾಮಗಾರಿ ಹೆಸರಲ್ಲಿ ಸಾವಿರಾರು ಕೋಟಿ ಲೂಟಿ ಹೊಡೆದಿರುವ ಸರ್ಕಾರ ವಿಮಾನ ನಿಲ್ದಾಣಗಳ ಹೆಸರಿನಲ್ಲೂ ಲೂಟಿ ಹೊಡೆಯಲು ಹೊರಟಿದೆ. ಕೈಗಾರಿಕೆಗಳ ಸ್ಥಾಪನೆಗೆ ಸಾರ್ವಜನಿಕ ವಲಯದ ಉದ್ಯಮಗಳ ಅಭಿವೃದ್ಧಿಗೆ ಯೋಜನೆಗಳಿಲ್ಲ. ರೈತರಿಗೆ ಪಿಂಚಣಿ ವ್ಯವಸ್ಥೆಯಾಗಲಿ, ಮಾರುಕಟ್ಟೆ ವ್ಯವಸ್ಥೆ ಆಗಲಿ ಕಲ್ಪಿಸದೆ ಇರುವ ಸರ್ಕಾರ ಗ್ರಾಮೀಣ ಭಾರತದಲ್ಲಿ ಆನ್ಲೈನ್ ಅಭಿವೃದ್ಧಿ ಎಂಬುದು ಟೊಳ್ಳಾಗಿದೆ. ಕೈಗಾರಿಕಾ ಅಭಿವೃದ್ಧಿಗೆ 5000 ಕೋಟಿ ಸಹ ಕಡಿತ ಮಾಡಲಾಗಿದೆ.

ಇಂತಹ ಜನ ವಿರೋಧಿ ನೀತಿಯನ್ನ ಅನುಸರಿಸಿರುವ ಮೋದಿ ದೆಹಲಿ ರೈತ ಚಳುವಳಿಯ ಸಂದರ್ಭದಲ್ಲಿ ನೀಡಿದ ವಾಗ್ದಾನವನ್ನು ಗಾಳಿಗೆ ತೂರಿದೆ. ಇಂತಹ ಜನ ಸಾಮಾನ್ಯರ ವಿರೋಧಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ಮುಂದಾಗಬೇಕೆಂದು ತಿಳಿಸಿದರು.

ಗೋಷ್ಠಿಯಲ್ಲಿ ಪ್ರಾಂತ ರೈತ ಸಂಘದ ಉಪಾಧ್ಯಕ್ಷರಾದ ಎ.ಎಲ್. ಶಿವಕುಮಾರ್, ಚಿಕ್ಕಸ್ವಾಮಿ, ಪ್ರಕಾಶ್, ಸತೀಶ್, ಶಿವಕುಮಾರ್, ಗಿರೀಶ್, ಪ್ರದೀಪ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!