Thursday, September 19, 2024

ಪ್ರಾಯೋಗಿಕ ಆವೃತ್ತಿ

4 ವರ್ಷವಿದ್ದ ಪರಿಷತ್ ಸ್ಥಾನ ಬಿಟ್ಟು ಬಂದಿದ್ದಕ್ಕೆ ಒಳ್ಳೆಯ ಬಹುಮಾನ ಕೊಟ್ಟಿದ್ದಾರೆ- ಇಬ್ರಾಹಿಂ ಕಿಡಿ

”ಜೆಡಿಎಸ್‌ ರಾಜ್ಯ ಘಟಕಕ್ಕೆ ನಾನೇ ಅಧ್ಯಕ್ಷ. ನನ್ನನ್ನು ಕೆಳಗಿಳಿಸುವ ಅಧಿಕಾರ ರಾಜ್ಯ ಉನ್ನತ ನಾಯಕರ ಸಭೆಗೆ ಇಲ್ಲ” ಎಂದು ಸಿ.ಎಂ.ಇಬ್ರಾಹಿಂ ಜೆಡಿಎಸ್‌ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಜೆಡಿಎಸ್  ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ವಿಸರ್ಜಿಸಿ ಹೆಚ್​ಡಿ ದೇವೇಗೌಡ ಅವರು ಇಂದು (ಗುರುವಾರ) ಆದೇಶ ಹೊರಡಿಸಿದ್ದಾರೆ. ಅಲ್ಲದೇ ತಾತ್ಕಾಲಿಕವಾಗಿ ಹೆಚ್​ಡಿ ಕುಮಾರಸ್ವಾಮಿ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಲೋಕಸಭಾ ಚುನಾವಣೆಗೆ ಬಿಜೆಪಿ ಜತೆ ಜೆಡಿಎಸ್​ ಮೈತ್ರಿ ಮಾಡಿಕೊಂಡಿರುವುದನ್ನು ವಿರೋಧಿಸಿ, ಪ್ರತ್ಯೇಕ ಸಭೆ ನಡೆಸುವುದರೊಂದಿಗೆ ತೀವ್ರ ಅಸಮಾಧಾನ ಹೊರಹಾಕಿದ್ದ ಸಿಎಂ ಇಬ್ರಾಹಿಂ ಇದೀಗ ರಾಜ್ಯಾಧ್ಯಕ್ಷ ಸ್ಥಾನ ಕಳೆದುಕೊಂಡಿದ್ದಾರೆ.

ಪಕ್ಷದ ರಾಜ್ಯ ಘಟಕ ವಿಸರ್ಜನೆ ಕುರಿತು ಗುರುವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಇಬ್ರಾಹಿಂ, ”ಅವರ ನಿರ್ಧಾರವನ್ನು ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇನೆ. ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸುತ್ತೇನೆ. ದೇವೇಗೌಡರಿಗೆ ಪುತ್ರ ವ್ಯಾಮೋಹ ಇರೋದು ಈಗ ಸಾಬೀತಾಗಿದೆ. ನನ್ನನ್ನು ಕೆಣಕಿದ್ದೀರಿ, ಇದರ ಪರಿಣಾಮ ಮುಂದೆ ಏನಿರುತ್ತೆ ಅಂತ ಕಾದು ನೋಡಿ” ಎಂದು ಎಚ್ಚರಿಸಿದರು.

”ಮೊದಲು ಕಾರ್ಯಕಾರಿ ಸಮಿತಿಯ 2/3 ನೇ ಸದಸ್ಯರ ಅನುಮತಿ ಪಡೆದು ನೋಟೀಸ್ ಕೊಡಬೇಕಾಗಿತ್ತು. ನಾನು ಇಲ್ಲಿಗೇ ಇದನ್ನು ಬಿಡಲ್ಲ, ಹಾಸನದಲ್ಲಿ, ಮಂಡ್ಯದಲ್ಲಿ ಪಕ್ಷದ ಮುಖಂಡರ ಸಭೆ ಮಾಡುತೇನೆ. ಮಹಾಭಾರತದ ನಾಟಕದ ಅಂಕ ಶುರುವಾಗಿದೆ. ಯಾವ ಒಕ್ಕಲಿಗರ ಮಕ್ಕಳನ್ನು ದೇವೇಗೌಡರು ಬೆಳೆಸಿದ್ದಾರೆ? ರಾತ್ರಿ ಹಗಲು ಓಡಾಡಿ ಅವರ ಮಗನನ್ನ ಗೆಲ್ಲಿಸಿದ್ದೇನೆ. ನನಗೆ ಅವರು ಒಳ್ಳೆಯ ಬಹುಮಾನ ಕೊಟ್ಟಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

”ನಾನು ಚುನಾವಣಾ ಆಯೋಗದಲ್ಲಿ ನಿಮ್ಮ ನಿರ್ಧಾರ ಪ್ರಶ್ನೆ ಮಾಡುತ್ತೇನೆ” ಎಂದು ಹೇಳಿದ್ದಾರೆ.

”ಇವತ್ತಿನವರೆಗೂ ದೇವೇಗೌಡರನ್ನು ನಾನು ನನ್ನ ತಂದೆ ಸಮಾನ ಅಂದುಕೊಂಡಿದ್ದೆ. ಇದೇನಾ ಮಗನಿಗೆ ಕೊಡುವ ಪ್ರೀತಿ?” ಎಂದು ಪ್ರಶ್ನಿಸಿದ್ದಾರೆ.

”ಇನ್ನೂ ನಾಲ್ಕು ವರ್ಷ ಇದ್ದ ನನ್ನ ಪರಿಷತ್ ಸ್ಥಾನ ಬಿಟ್ಟು ನಿಮ್ಮ ಬಳಿ ಬಂದೆ ಆದರೆ ನೀವು ಹೀಗೆ ಮಾಡಿದ್ದೀರಿ. ಇಷ್ಟು ದೊಡ್ಡ ವಯಸ್ಸಿನಲ್ಲಿ ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನಿಮಗೆ ಕೈ ಮುಗಿತಿನಿ, ಇನ್ನೂ ಎಷ್ಟು ಮನೆ ಹಾಳು ಮಾಡಬೇಕು ಅಂತಾ ಮಾಡಿದ್ದೀರಿ?” ಎಂದು ದೇವೆಗೌಡರಿಗೆ ಪ್ರಶ್ನಿಸಿದ್ದಾರೆ.

”ಇವತ್ತಿನ ಸಭೆಗೆ ನನಗೆ ಆಹ್ವಾನ ಇರಲಿಲ್ಲ. ಸಭೆ ಬಗ್ಗೆ ನನಗೆ ಗೊತ್ತೂ ಇಲ್ಲ. ಕಂಡೋರ ಮಕ್ಕಳು ಸಿಕ್ಕಿದ್ದೇವೆ ಅಂತ ಹೀಗೆಲ್ಲಾ ಮಾಡುವುದು ಸರಿಯಲ್ಲ ಗೌಡ್ರೇ. ನನಗೆ ಅಧಿಕಾರದ ಆಸೆ ಇಲ್ಲ. ಜೆಡಿಎಸ್ ಕುಟುಂಬದ ಸ್ವತ್ತು ಅಂತ ತೋರಿಸಿಬಿಟ್ಟಿರಿ. ಗೌಡರಿಗೆ ಸ್ವಲ್ಪವಾದರೂ ಪ್ರಜ್ಞೆ ಬೇಡವಾ? ನನ್ನ ಜೊತೆ ಮಾತಾಡಬೇಕು ಅಂತ ಅನ್ನಿಸಲಿಲ್ವಾ? ರಾತ್ರಿ ಹಗಲು ಓಡಾಡಿ ಅವರ ಮಗನನ್ನು ಗೆಲ್ಲಿಸಿದ್ದೇನೆ. ನನಗೆ ಅವರು ಒಳ್ಳೆಯ ಬಹುಮಾನ ಕೊಟ್ಟಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.

”ನಾನು ಕೋರ್ಟ್‌ಗೆ ಹೋಗುತ್ತೇನೆ, ವಕೀಲರಿಂದ ನಿಮ್ಮ ಆದೇಶಕ್ಕೆ ತಡೆಯಾಜ್ಞೆ ತರುತ್ತೇನೆ, ಅವರಿಗೆ ನನ್ನನ್ನು ತೆಗೆಯುವ ಅಧಿಕಾರ ಇಲ್ಲ. ಕಾರ್ಯಕಾರಿ ಸಮಿತಿಯ 3/2 ನೇ ಸದಸ್ಯರ ಅನುಮತಿ ಪಡೆದು ಮೊದಲು ನನಗೆ ನೋಟಿಸ್ ಕೊಡಬೇಕು. ನನ್ನನ್ನು ಕೆಣಕಿದ್ದೀರಿ, ಇದರ ಪರಿಣಾಮ ಮುಂದೆ ಏನಿರುತ್ತದೆ ಅಂತ ಕಾದು ನೋಡಿ” ಎಂದು ಸವಾಲು ಹಾಕಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!