Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಹದೇವಪುರದಲ್ಲಿ ಅಸ್ಪೃಶ್ಯತೆ ಆಚರಣೆ : ದಲಿತರಿಗೆ ಕ್ಷೌರ ಮಾಡಲು ನಿರಾಕರಣೆ

ದಲಿತ ಸಮುದಾಯದವರು ತಮಗೆ ಕ್ಷೌರ ಮಾಡುವಂತೆ ಕೇಳಿದ ಕಾರಣಕ್ಕೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಮತ್ತು ಅಕ್ಕಪಕ್ಕದ ಗ್ರಾಮಗಳ 10 ಕ್ಷೌರದ ಅಂಗಡಿಗಳನ್ನು ಕ್ಷೌರಿಕರು ಸಾಮೂಹಿಕವಾಗಿ ಮುಚ್ಚಿದ್ದಾರೆ.

ಕಳೆದ 20 ದಿನಗಳಿಂದ ಮಹದೇವಪುರದ ಏಳು, ಅಕ್ಕಪಕ್ಕದ ಗ್ರಾಮಗಳಲ್ಲಿನ ಮೂರು ಕ್ಷೌರಿಕರ ಅಂಗಡಿಗಳನ್ನು ಬಂದ್‌ ಮಾಡಿದ್ದಾರೆ. ಇದರಿಂದಾಗಿ ಗ್ರಾಮದ ಜನರು ಕ್ಷೌರಕ್ಕಾಗಿ ಅರಕೆರೆ, ಮಂಡ್ಯಕೊಪ್ಪಲು ವೃತ್ತ ಹಾಗೂ ಪಟ್ಟಣ ಪ್ರದೇಶಗಳಿಗೆ ತೆರಳುವಂತಾಗಿದೆ.

ನವೆಂಬರ್‌ 5ರಂದು ತಹಶೀಲ್ದಾರ್‌ ಶ್ವೇತಾ ಎನ್‌.ರವೀಂದ್ರ ನೇತೃತ್ವದಲ್ಲಿ ಕುಂದುಕೊರತೆ ಸಭೆ ನಡೆದಿತ್ತು. ಅಂದು ಕೆಲವರು, ಮಹದೇವಪುರದಲ್ಲಿ ದಲಿತ ಸಮುದಾಯದವರಿಗೆ ಕ್ಷೌರ ಮಾಡುತ್ತಿಲ್ಲ ಎಂದು ದೂರು ನೀಡಿದ್ದರು. ನಂತರ ಅಲ್ಲಿನ ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್‌ ಈ ಕುರಿತು ನ.6ರಂದು ಅರಕೆರೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಪೊಲೀಸರು ಭೇಟಿ ನೀಡಿದ್ದು, ದಲಿತ ಸಮುದಾಯದವರಿಗೆ ಕ್ಷೌರ ಮಾಡುವಂತೆ ಮನವೊಲಿಸಲು ಯತ್ನಿಸಿದ್ದರು. ಇದನ್ನು ನಿರಾಕರಿಸಿದ ಕ್ಷೌರಿಕರು ಅಂಗಡಿಗಳನ್ನೇ ಬಂದ್‌ ಮಾಡಿದ್ದಾರೆ.

“ಚನ್ನಹಳ್ಳಿ, ಬಿದರಹಳ್ಳಿ ಗ್ರಾಮದ ದಲಿತರು ಬಂದರೆ ಮಹದೇವಪುರದ ಕ್ಷೌರಿಕರು ಯಾವುದೇ ತಕರಾರಿಲ್ಲದೆ ಕ್ಷೌರ ಮಾಡುತ್ತಾರೆ. ಆದರೆ, ತಮ್ಮದೇ ಊರಿನ ದಲಿತರಿಗೆ ನಿರಾಕರಿಸುತ್ತಿದ್ದಾರೆ. ಈ ಬಗ್ಗೆ ದೂರು ನೀಡಲಾಗಿದೆ. ಬಹಿರಂಗವಾಗಿ ಅಸ್ಪೃಶ್ಯತೆ ಆಚರಿಸುತ್ತಿದ್ದರೂ ಈವರೆಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್‌ ಆರೋಪಿಸಿದರು.

“ಸಿಪಿಐ ಪುನೀತ್‌ ಅವರು ನ.14ರಂದು ಗ್ರಾಮಕ್ಕೆ ಭೇಟಿ ನೀಡಿ, ದಲಿತರಿಗೆ ಕ್ಷೌರ ಮಾಡಿಸಿದ್ದರು. ಮಾರನೇ ದಿನದಿಂದ ಅಂಗಡಿಗಳು ಪುನಃ ಬಂದ್ ಆಗಿವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ನವೆಂಬರ್‌ 23ರಂದು ಡಿವೈಎಸ್‌ಪಿ ಸಂದೇಶಕುಮಾರ್‌ ನೇತೃತ್ವದಲ್ಲಿ ಸಭೆ ನಡೆಸಿದ್ದು, ಕ್ಷೌರಿಕರ ಮನವೊಲಿಸುವಂತೆ ಗ್ರಾಮದ ಇತರ ವರ್ಗದವರಿಗೆ ಸೂಚಿಸಿದ್ದಾರೆ. ಇದಕ್ಕೆ ಗ್ರಾಮಸ್ಥರು ಮೂರು ದಿನ ಕಾಲಾವಕಾಶ ಕೇಳಿದ್ದಾರೆ” ಎಂದು ಸಭೆಯಲ್ಲಿದ್ದವರು ತಿಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!