Saturday, May 18, 2024

ಪ್ರಾಯೋಗಿಕ ಆವೃತ್ತಿ

ಭಾರತ ಐಕ್ಯತಾ ಯಾತ್ರೆ ಐತಿಹಾಸಿಕ : ಸಿದ್ದರಾಮಯ್ಯ 


  • ಕೇಂದ್ರ ಸರ್ಕಾರದಿಂದ ಧರ್ಮ ರಾಜಕಾರಣಕ್ಕೆ ಕುಮ್ಮಕ್ಕು 
  • ಗೋಡ್ಸೆ-ಸಾರ್ವಕರ್ ಚಿಂತನೆಗಳ ಮೇಲೆ ನಡೆಯುತ್ತಿರುವ ಸರ್ಕಾರ

ದಕ್ಷಿಣ ಭಾರತದ ತುತ್ತತುದಿ ಕನ್ಯಾಕುಮಾರಿಯಿಂದ ಉತ್ತರ ಭಾರತದ ತುತ್ತತುದಿ ಕಾಶ್ಮೀರದವರೆಗೆ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಯುವ ನಾಯಕ ರಾಹುಲ್ ಗಾಂಧಿ ಅವರು ಹಮ್ಮಿಕೊಂಡಿರುವ (ಭಾರತ ಐಕ್ಯತಾ ಯಾತ್ರೆ) ಐತಿಹಾಸಿಕ ಭಾರತ್ ಜೋಡೋ ಯಾತ್ರೆ ಸ್ವಾತಂತ್ರೊತ್ತರ ಭಾರತದ ಐತಿಹಾಸಿಕ ಯಾತ್ರೆಯಾಗಿದೆ ಎಂದು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಣ್ಣಿಸಿದರು.

ಮಂಡ್ಯ ನಗರದ ಸುಮರವಿ ಕನ್ವೆನ್ಷನ್ ಹಾಲ್ ನಲ್ಲಿ ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದ ದಕ್ಷಿಣದಿಂದ ಉತ್ತರಕ್ಕೆ ಒಟ್ಟು 12 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 150 ದಿನಗಳ ಕಾಲ, 1570 ಕಿ.ಮೀ. ಪಾದಯಾತ್ರೆ ನಡೆಯಲಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಯಾರೂ ಕೂಡ ಪಾದಯಾತ್ರೆ ನಡೆಸಿದ ಇತಿಹಾಸ ಇಲ್ಲವೇ ಇಲ್ಲ ಎಂದರು.

ರಾಜ್ಯದಲ್ಲಿ ಒಟ್ಟು 22 ದಿನಗಳ ಕಾಲ, 510 ಕಿ.ಮೀ. ವರೆಗೆ ಯಾತ್ರೆಯೂ ಸಂಚರಿಸಲಿದೆ, ಅದರಲ್ಲಿ ಮಂಡ್ಯ ಜಿಲ್ಲೆಯಲ್ಲಿ ಅ.3, 6 ಹಾಗೂ 7ರಂದು ಸಂಚರಿಸಲಿದೆ, ರಾಜ್ಯದಲ್ಲಿ ಯಾತ್ರೆ, ಇರುವಾಗ ಬಳ್ಳಾರಿಯಲ್ಲಿ ಮಾತ್ರ ಬೃಹತ್ ಸಮಾವೇಶ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಸುಮಾರು 5 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ರಾಜ್ಯದಲ್ಲಿ ಚಾಮರಾಜನಗರ, ಮಂಡ್ಯ, ತುಮಕೂರು, ಕೊಡಗು, ಚಿತ್ರದುರ್ಗ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಯಾತ್ರೆಯೂ ಸಂಚರಿಸಲಿದೆ ಎಂದರು.

ಧರ್ಮ ರಾಜಕಾರಣಕ್ಕೆ ಕುಮ್ಮಕ್ಕು

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಧರ್ಮ ರಾಜಕಾರಣಕ್ಕೆ  ಕುಮ್ಮಕ್ಕು ನೀಡುತ್ತಿದೆ, ಗೋಡ್ಸೆ ಹಾಗೂ ಸಾರ್ವಕರ್ ಚಿಂತನೆಗಳ ಮೇಲೆ ನಡೆಯುತ್ತಿರುವ ಸರ್ಕಾರಗಳಿಂದ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರಿಗೆ ರಕ್ಷಣೆ ಸಿಗುವುದೆ ಎಂದು ಪ್ರಶ್ನಿಸಿದರು.

ಬಿಜೆಪಿಯು ದೇಶದಾದ್ಯಂತ ಕೋಮು ಗಲಭೆಗಳನ್ನು ಹುಟ್ಟು ಹಾಕಿ, ಜನರ ನಡುವೆ ವಿಷ ಬೀಜ ಬಿತ್ತುತಿದೆ, ಅಲ್ಲದೇ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ನಾಶ ಮಾಡುವ ಸಂಚು ರೂಪಿಸಿದೆ ಎಂದು ದೂರಿದರು.

ಗೋಡ್ಸೆ ಭಾವಚಿತ್ರ ಮೆರವಣಿಗೆ ನಾಚಿಕೆಗೇಡು

ಶಿವಮೊಗ್ಗದಲ್ಲಿ ನಡೆದ ಗಣೀಶೋತ್ಸವ ಮೆರವಣಿಗೆಯಲ್ಲಿ ಆರ್.ಎಸ್.ಎಸ್., ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ಮಹಾತ್ಮಗಾಂಧಿ ಅವರ ಕೊಲೆಗಾರ ನಾಥೂರಾಮ್ ಗೋಡ್ಸೆ ಅವರ ಭಾವಚಿತ್ರ ಪ್ರದರ್ಶನ ಮಾಡಿರುವುದು ನಾಚಿಕೆಗೇಡಿನ ವಿಚಾರ ಎಂದು ಕಿಡಿಕಾರಿದರು.

ಮೋದಿಗೆ ಅಭಿವೃದ್ಧಿ ಬೇಕಿಲ್ಲ

ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ದೇಶದ ಜನರ ಸಮಸ್ಯೆ ಮುಖ್ಯ ಅಲ್ಲ, ಗ್ರಾಮೀಣ ಜನರ ಬದುಕು, ದೇಶದ ಅಭಿವೃದ್ಧಿ ಯಾವುದೂ ಮುಖ್ಯವಲ್ಲ. ಅವರಿಗೆ ಅಧಿಕಾರವೇ ಮುಖ್ಯ. ಅದಕ್ಕಾಗಿ ಭಾರತ ವಿಭಜನೆ ಮಾಡುತ್ತಿದ್ದಾರೆಂದು  ಮಾಜಿ ಸಚಿವ ಚಲುವರಾಯಸ್ವಾಮಿ ಕಿಡಿಕಾರಿದರು.

ಸಮಾರಂಭದಲ್ಲಿ  ಪ್ರಾಸ್ತಾವಿಕ ಮಾತನಾಡಿದ ಅವರು, ಹಿಂದೆ ಒಬ್ಬರು ಅಥವಾ ಇಬ್ಬರು ಪಕ್ಷ ಸೇರಿಕೊಳ್ಳುತ್ತಿದ್ದರು. ಇಂದು ಬಿಜೆಪಿ ಪಕ್ಷ ಸರ್ಕಾರಗಳನ್ನು ಉರುಳಿಸಿ 15-20 ಶಾಸಕರನನ್ನು ಸೆಳೆದು ಸರ್ಕಾರ ರಚನೆ ಮಾಡಿದೆ. ಐಟಿ, ಇಡಿಯನ್ನು ತೋರಿಸಿ ಶಾಸಕರನ್ನು ಸೆಳೆದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತಂದಿದೆ. ಧರ್ಮಗಳ ಹೆಸರಿನಲ್ಲಿ ದೇಶ ಒಡೆಯುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಎಐಸಿಸಿ ಉಸ್ತುವಾರಿ ರೋಜಿ ಜಾನ್, ಮಾಜಿ ಸಂಸದ ಧ್ರುವನಾರಾಯಣ್, ಡಾ.ರವೀಂದ್ರ ಮತ್ತಿತರರು ಮಾತನಾಡಿದರು.

ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳೀಗೌಡ, ಮಧು ಮಾದೇಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಶಿವಣ್ಣ, ಡಾ.ರವೀಂದ್ರ, ಮಾಜಿ ಶಾಸಕರಾದ ರಮೇಶ್ ಬಾಬು, ಪ್ರಕಾಶ್, ಕೆ.ಬಿ.ಚಂದ್ರಶೇಖರ್, ಬಾಲರಾಜ್, ಆತ್ಮಾನಂದ, ವಿಧಾನ ಪರಿಷತ್  ಮಾಜಿ ಸದಸ್ಯ ಬಿ.ರಾಮಕೃಷ್ಣ, ಮುಖಂಡರಾದ ಗಣಿಗ ರವಿಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!