Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಹಿಳಾ ಪಿಎಸ್ಐ ಹೆಸರಿನಲ್ಲಿ ಡೆತ್‌ನೋಟ್‌ ಬರೆದಿಟ್ಟ ಯುವಕ

ಮಹಿಳಾ ಪಿಎಸ್ಐ ಒಬ್ಬರು ನನ್ನ ಮೇಲೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದು, ಇದರಿಂದ ನನಗೆ ಅವಮಾನವಾಗಿದೆ ಎಂದು ಆರೋಪಿಸಿ ಯುವಕನೊಬ್ಬ ಡೆತ್‌ನೋಟ್ ಬರೆದು ನಾಪತ್ತೆಯಾಗಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ರಾಯಚೂರು ಜಿಲ್ಲೆ ಸಿರವಾರ ಪಟ್ಟಣದ ಪೊಲೀಸ್ ಠಾಣೆಯ ಗೀತಾಂಜಲಿ ಶಿಂಧೆ ಎಂಬುವವರು ತಾಯಣ್ಣ ನೀಲಗಲ್ ಎಂಬ ಯುವಕನ ಮೇಲೆ ಕಳೆದ ಮೂರು ತಿಂಗಳಿಂದ ವಿನಾಕಾರಣ ಠಾಣೆಗೆ ಕರೆಸಿಕೊಂಡು ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ನಾಪತ್ತೆಯಾಗಿರುವ ತಾಯಣ್ಣನ ವಿರುದ್ಧ 4 ಕ್ರಿಮಿನಲ್ ಹಾಗೂ 5 ಸಿವಿಲ್ ಪ್ರಕರಣಗಳಿವೆ ಎಂದು ವರದಿಯಾಗಿದೆ.

ಯುವಕ ತಾಯಣ್ಣ ತನ್ನ ಸಂಬಂಧಿಕರೋರ್ವರ ಜಮೀನಿನಲ್ಲಿ ಭತ್ತ ಕಟಾವು ಮಾಡಿರುವ ಬಗ್ಗೆ ದೂರು ದಾಖಲಾಗಿತ್ತು. ಈ ವಿಚಾರವಾಗಿ ಡಿ. 2ರಂದು ತಾಯಣ್ಣನನ್ನು ಠಾಣೆಗೆ ಕರೆಸಿ, ಬಹಳ ಹೊತ್ತು ಲಾಕಪ್‌ನಲ್ಲಿ ಕೂರಿಸಿದ್ದರು. ಬಳಿಕ ಆತನನ್ನು ಬಿಟ್ಟು ಕಳುಹಿಸಲಾಗಿತ್ತು. ಬಳಿಕ, ಅದೇ ದಿನ ಯುವಕ ಡೆತ್‌ನೋಟ್ ಬರೆದಿಟ್ಟು, ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ

ಯುವಕ ತನ್ನ ಡೆತ್‌ನೋಟ್‌ನಲ್ಲಿ  “ಪಿಎಸ್ಐ ಗೀತಾಂಜಲಿ ಶಿಂಧೆ ಅವರಿಗೆ ನಾನು ಹೊರಗಡೆ ಕಂಡಾಗಲೆಲ್ಲ ಜೀಪ್ ನಿಲ್ಲಿಸಿ, ಹಲವಾರು ಬಾರಿ ನನಗೆ ಥಳಿಸಿದ ಅನೇಕ ಪ್ರಸಂಗಗಳು ಇವೆ. ಇದರಿಂದ ನಾನು ಭಯಭೀತನಾಗಿ ಬಹಳಷ್ಟು ನೊಂದಿದ್ದೇನೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾನೆ.

“ಜಾಲಾಪುರ ಸೀಮೆಯಲ್ಲಿರುವ ಜಮೀನು ವಿಚಾರವಾಗಿ ಮೂರು ತಿಂಗಳಿನಿಂದ ವಿನಾಕಾರಣ ಠಾಣೆಗೆ ಕರೆಸಿ ಪಿಎಸ್ಐ ಗೀತಾಂಜಲಿ ಶಿಂಧೆ ಕಿರುಕುಳ ನೀಡುತ್ತಿದ್ದಾರೆ. ರೌಡಿಶೀಟ್ ಓಪನ್ ಮಾಡುವುದಾಗಿ ಬೆದರಿಸುತ್ತಿದ್ದಾರೆ” ಎಂದೂ ಕೂಡ ಡೆತ್‌ನೋಟ್‌ನಲ್ಲಿ ಆರೋಪಿಸಿದ್ದಾನೆ. ಪಿತ್ರಾರ್ಜಿತ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತಾಯಣ್ಣನ ಮೇಲೆ ಈಗಾಗಲೇ 4 ಪ್ರಕರಣಗಳಿವೆ.

ತಾಯಣ್ಣನು ಎರಡು ಪುಟಗಳ ಸುದೀರ್ಘ ಡೆತ್‌ನೋಟ್ ಬರೆದಿದ್ದು, ಪತ್ರದ ಕೊನೆಯಲ್ಲಿ “ನನ್ನ ಎಲ್ಲ ಕುಟುಂಬ ಸದಸ್ಯರನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಇದೇ ನನ್ನ ಕೊನೆಯ ಬರಹ, ಮಿಸ್ ಯು ಅಮ್ಮ” ಎಂದು ಬರೆದಿಟ್ಟು ನಾಪತ್ತೆಯಾಗಿದ್ದಾನೆ.

ಡೆತ್‌ನೋಟ್ ಬರೆದಿಟ್ಟು ಕಾಣೆಯಾಗಿರುವ ಮಗನನ್ನ ಹುಡುಕಿಕೊಡಿ ಅಂತ ತಾಯಣ್ಣನ ಕುಟುಂಬಸ್ಥರು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಅವರಿಗೆ ಮನವಿ ಮಾಡಿದ್ದಾರೆ. ಆದರೆ ಆತ ಇನ್ನೂ ಬದುಕಿದ್ದಾನೆಯೇ ಅಥವಾ ನಿಜವಾಗಿಯೂ ಆತ್ಮಹತ್ಯೆಗೆ ಶರಣಾಗಿದ್ದಾನೆಯೇ ಎಂದು ತಿಳಿದುಬಂದಿಲ್ಲ. ಅಲ್ಲದೇ, ಮೊಬೈಲ್ ಕೂಡ ಆತ ಮನೆಯಲ್ಲಿಯೇ ಬಿಟ್ಟು ಹೋಗಿದ್ದಾನೆ ಎಂದು ತಿಳಿದುಬಂದಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!