Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿಯಲ್ಲಿ ಕಾಂಗ್ರೆಸ್ ಶಕ್ತಿ ಪ್ರಬಲವಾಗಿದೆ : ಡಿ.ಕೆ.ಶಿವಕುಮಾರ್

ನನಗೂ ಮಳವಳ್ಳಿಗೂ ಅಪಾರ ನಂಟು ಇದೆ. ಇಲ್ಲಿ ಕಾಂಗ್ರೆಸ್ ಶಕ್ತಿ ಪ್ರಬಲವಾಗಿದೆ ಎನ್ನುವುದಕ್ಕೆ ಈ ಸಭೆ ಸಾಕ್ಷಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನುಡಿದರು.

ಮಳವಳ್ಳಿಯಲ್ಲಿ ಶನಿವಾರ ಸಂಜೆ ನಡೆದ ‘ಪ್ರಜಾಧ್ವನಿಯಾತ್ರೆ’ಯಲ್ಲಿ ನೆರೆದಿದ್ದ ಅಪಾರ ಜನಸ್ತೋಮವನ್ನುದ್ಧೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ಚುನಾವಣೆಯಲ್ಲಿ ಒಂದು ಸ್ಥಾನವು ಸಿಗಲಿಲ್ಲ, ಪ್ರಜಾಪ್ರಭುತ್ವದ ತೀರ್ಪು ಒಪ್ಪಿಕೊಳ್ಳಬೇಕು. ಯೋಗಕ್ಕಿಂತ ಯೋಗಕ್ಷೇಮ ಮುಖ್ಯ ಎನ್ನುವ ರೀತಿ ಮುಖ್ಯಮಂತ್ರಿ ಅವಕಾಶವನ್ನು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬೆಂಬಲ ಕೊಟ್ಟಿದ್ದೋ ಆದರೆ ಅದನ್ನು ಅವರು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದರು.

ಕುಮಾರಸ್ವಾಮಿ ಏನು ಕೊಟ್ಟಿದ್ದಾರೆ ?

ಕಳೆದ ಏಂಟು ವರ್ಷಗಳಿಂದ ಬಿಜೆಪಿಯವರು ದೇಶದಲ್ಲಿ ಅಧಿಕಾರ ನಡೆಸುತ್ತಿದ್ದಾರೆ. ಬಡತನದ ಜೀವನವನ್ನು ಯಾವ ರೀತಿ ಬದಲಾವಣೆ ಮಾಡಿದ್ದಾರೆ ಎನ್ನುವುದನ್ನು ಕೇಳಬೇಕು. ಉಳುಮೆ ಮಾಡಲು ಭೂಮಿ ಕೊಟ್ಟಿದ್ದು  ಬಿಜೆಪಿನಾ ? ಅನ್ನಭಾಗ್ಯ, ಹಾಲಿಗೆ ಪ್ರೋತ್ಸಾಹ ಧನ, ಬಿಸಿಯೂಟ ಸೇರಿದಂತೆ ಹತ್ತಾರು ಕಾರ್ಯಕ್ರಮ ನೀಡಿರುವುದು ಕಾಂಗ್ರೆಸ್. ಶಿಕ್ಷಣ, ಆರೋಗ್ಯ, ಆಶ್ರಯ ಕೊಟ್ಟು ಕೆಲಸ ಮಾಡಿದ್ದೇವೆ. ಕುಮಾರಸ್ವಾಮಿ ಏನು ಕೊಟ್ಟಿದ್ದಾರೆ. ಬಿಜೆಪಿಯವರು ವಿಷಬೀಜ ಬಿತ್ತುತ್ತಿದ್ದಾರೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ನಡೆಸಿ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ ಎಂದರು.

ಎರಡು ಹೃದಯಗಳನ್ನು ಜೋಡಿಸುವ ಕೆಲಸ ಮಾಡುವಲ್ಲಿ ಬಿಜೆಪಿ, ಜೆಡಿಎಸ್ ವಿಫಲವಾಗಿವೆ. ಮೈಷುಗರ್ ಕಾರ್ಖಾನೆ ಮುಚ್ಚಲು ಬಿಜೆಪಿ ಹೊರಟಿದೆ. ಭದ್ರಾವತಿ ಕಾರ್ಖಾನೆ ಮಾರಾಟ ಮಾಡಲು ಹೊರಟಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಗಗನಕ್ಕೆ ಏರಿಕೆಯಾಗಿದೆ. ನಿಮ್ಮ ಆದಾಯ ಪಾತಾಳಕ್ಕೆ ಹೋಗಿದೆ. ಬೆಂಬಲ ಬೆಲೆ ಸಿಗುತ್ತಿಲ್ಲ, ಬಿಜೆಪಿ ಜೆಡಿಎಸ್ ಏನಾದರೂ ಒಂದು ಅನುಕೂಲವಾಗುವ ಕೆಲಸ ಮಾಡಿದೀರಾ ಎಂದು ಪ್ರಶ್ನಿಸಿದರು.

ಪೊಲೀಸ್ ಕೆಲಸದಲ್ಲೂ ಕೋಟಿ ಕೋಟಿ ಲಂಚ

ಪೊಲೀಸ್ ಕೆಲಸದಲ್ಲೂ ಕೋಟಿ ಕೋಟಿ ಲಂಚ ನಡೆಯುತ್ತಿದ್ದರೂ ಗೃಹಮಂತ್ರಿ ಎಲ್ಲವೂ ಸರಿಯಿದೆ ಎನ್ನುತ್ತಿದ್ದಾರೆ. ನಿಮ್ಮ ಮಗನಾಗಿ ನಿಮ್ಮ ಮುಂದೆ ಬಂದು ನಿಂತಿದ್ದೇನೆ. ನಮಗೆ ಬೆಂಬಲ ಕೊಡಿ, ಸರ್ವರಿಗೂ ಸಮಪಾಲು, ಸಮಬಾಳು ನೀಡಲು ಶಕ್ತಿಯನ್ನು ನೀಡಿ ಈ ಭ್ರಷ್ಟ ಸರ್ಕಾರಕ್ಕೆ ತೊಲಗಿಸಲು ಶಕ್ತಿ ಕೊಡಿ, ಇನ್ನೂರು ಯೂನಿಟ್ ಉಚಿತವಾಗಿ ಕೊಡುತ್ತೇವೆ, ಗ್ಯಾಸ್, ಡೀಸೆಲ್, ಪೆಟ್ರೋಲ್, ಅಡುಗೆ ಎಣ್ಣೆ ಬೆಲೆ ಜಾಸ್ತಿಯಾಗಿದೆ. ಅದಕ್ಕೆ ಗೃಹಿಣಿಗೆ ಎರಡು ಸಾವಿರ ಕೊಡುತ್ತೇವೆ, ಬಿಜೆಪಿಯವರು ಹದಿನೈದು ಲಕ್ಷ ಕೊಡ್ತಿನಿ ಅಂದು, ಖಾಲಿ ಟ್ರಂಕ್ ಒಡೆದ್ರು, ಹಾಗೆ ನಾವ್ ಮಾಡಲ್ಲ ಎಂದರು.

ಎಚ್.ಎಂ.ರೇವಣ್ಣ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರು ಹಗಲಿರುಳು ದುಡಿತಿದ್ದಾರೆ, ಇವರು ಆಧಿಕಾರ ವಹಿಸಿಕೊಂಡ ಕ್ಷಣದಿಂದ ಕಾಂಗ್ರೆಸ್ ನಲ್ಲಿ ಸಂಚಲನ ಮೂಡಿದೆ. ಆ ಧಮ್ ಇರೋದು ಡಿಕೆಶಿಗೆ ಮಾತ್ರ, ಇದು ಅಭೂತಪೂರ್ವ ಸ್ವಾಗತ ನೋಡಿದರೆ ನಮಗೆಲ್ಲ ಇಂದಿರಾ ಗಾಂಧಿ ಸ್ವಾಗತದ ನೆನಪಾಗುತ್ತದೆ. ಚುನಾವಣೆ ಬಂದಾಗ ಬರುವ ಪಕ್ಷದ ಬಗ್ಗೆ ಎಚ್ಚರವಿರಲಿ, ದೇವರಾಜು ಅರಸು ಕಾಲದಿಂದಲೂ ಉಳುಮೆ ಮಾಡಲು ಭೂಮಿ ಕೊಟ್ಟ ಪಕ್ಷವಾದ ಕಾಂಗ್ರೆಸ್ ನೆನೆಯಬೇಕು. ಬಿಜೆಪಿ. ದಳದವರ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಬಿಜೆಪಿಯವರು ಧರ್ಮದ ಹಾಗೂ ಭಾವನಾತ್ಮಕ ವಿಚಾರಗಳನ್ನ ಮುಂದಿಟ್ಟುಕೊಂಡು ಚುನಾವಣೆ ಗೆಲ್ಲುತ್ತಿದ್ದಾರೆ, ನರೇಂದ್ರಸ್ವಾಮಿ ಅವರು ಯುವ ನಾಯಕರು ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಸಮಾರಂಭದಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ದ್ರುವನಾರಾಯಣ, ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಿವಣ್ಣ, ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷ ಅಂಜನಾ ಶ್ರೀಕಾಂತ್, ಯುವ ಘಟಕದ ಅಧ್ಯಕ್ಷ ವಿಜಯ್ ಕುಮಾರ್, ಮುಖಂಡರಾದ ಮಲ್ಲಾಜಮ್ಮ, ಗಣಿಗ ರವಿ ಕುಮಾರ್, ಕನಕಪುರದ ವಿಶ್ವನಾಥ್, ಕೆ.ಜೆ.ದೇವರಾಜು, ಎಸ್.ಪಿ.ಸುಂದರ್ ರಾಜ್, ಡಾ.ಮೂರ್ತಿ, ಎಂ.ಬಿ.ಮಲ್ಲಯ್ಯ, ಸುಜಾತಾ ಕೆ.ಎಂ.ಪುಟ್ಟು, ಸುಷ್ಮಾ ರಾಜು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!