ನಾಗಮಂಗಲ ತಾಲ್ಲೂಕಿನಲ್ಲಿ ಯಾವುದೇ ರೀತಿಯ ಅಭಿವೃದ್ಧಿಗಳು ಆಗಿಲ್ಲ, ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಗ್ರಹಣ ಹಿಡಿದಂತೆ ಆಗಿದೆ. ಜೊತೆಗೆ ತಾಲೂಕಿನಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಸ್ವ ಪಕ್ಷದವರೇ ಭ್ರಷ್ಟಾಚಾರವನ್ನ ಖಂಡಿಸಿ ಹಲವಾರು ಬಾರಿ ಹೇಳಿಕೆ ನೀಡಿದ್ದಾರೆಂದು ಜೆಡಿಎಸ್ ಶಾಸಕ ಸುರೇಶ್ ಗೌಡ ವಿರುದ್ಧ ಮಂಡ್ಯ ಜಿಲ್ಲೆ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಕಿಡಿಕಾರಿದರು.
ನಾಗಮಂಗಲ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ನಾಯಕರಾದ ಎನ್.ಚಲುವರಾಯಸ್ವಾಮಿ ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮತ್ತೇ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡುವುದರಲ್ಲೇ ಶಾಸಕರು ಕಾಲಹರಣ ಮಾಡುತ್ತಿದ್ದಾರೆಂದು ಕಿಡಿಕಾರಿದರು.
ನಾಗಮಂಗಲ ಜನತೆಯ ಮಾನ ಮಾರ್ಯಾದೆಯನ್ನು ಹರಾಜು ಹಾಕುವ ಕೆಲಸವನ್ನು ಸುರೇಶ್ ಗೌಡ ಮಾಡುತ್ತಿದ್ದಾರೆ, ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಅವರಿಗೆ ಆಸಕ್ತಿ ಇಲ್ಲ, ಆಡಳಿತ ವಿಚಾರದಲ್ಲಿ ಜವಾಬ್ದಾರಿ ಇಲ್ಲ, ಕ್ಷೇತ್ರದಲ್ಲಿ ಸೇಡಿನ ರಾಜಕಾರಣ ಮಾಡಿಕೊಂಡು ಬಂದವರು. ಜನರಿಗೋಸ್ಕರ ಆಡಳಿತ ಮಾಡಿ ಕೊಂಡು ಬಂದವರಲ್ಲ, ಮಂಡ್ಯ ಜಿಲ್ಲೆಯ ಜಿಲ್ಲಾ ಪಂಚಾಯ್ತಿ ಸಭೆಗಳನ್ನ ಮಾಡದೇ ಶಾಸಕರು ತಾಲೋಕಿನ ಅಭಿವೃದ್ಧಿಯನ್ನ ಸಮಾಧಿ ಮಾಡಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಅದರಲ್ಲೂ ನಾಗಮಂಗಲ ಕ್ಷೇತ್ರದ ಶಾಸಕರು ಜನಸಾಮಾನ್ಯರ ಕುಂದು ಕೊರತೆಗಳನ್ನ ಆಲಿಸಿಲ್ಲ, ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಕೂಡ ಮಾಡಿಲ್ಲ, ಯಾವುದೇ ಸದನದ ಸಭೆಗಳಿಗೆ ಭಾಗವಹಿಸಿಲ್ಲ. ಹೀಗಾದರೆ ತಾಲೂಕಿನ ಸಮಸ್ಯೆಗಳು ಬಗೆಹರಿಯುವುದಾದರೂ ಹೇಗೆ ? ಇಂತಹ ಜನ ನಾಯಕರ ಅವಶ್ಯಕತೆ ಜನರಿಗೆ ಇಲ್ಲ, ತಮ್ಮ ಸ್ವಾರ್ಥಹಕ್ಕಾಗಿಯೇ ಶಾಸಕ ಸ್ಥಾನ ಎಂದು ಅವರು ಪರಿಗಣಿಸಿರುವಂತೆ ಕಾಣುತ್ತಿದೆ ಎಂದರು.
ತಾಲ್ಲೂಕಿನ ಸಮಸ್ಯೆಯನ್ನು ಬೆಳಗಾವಿಯ ಅಂತಿಮ ಅಧಿವೇಶನದಲ್ಲಿ ಚರ್ಚಿಸುವ ಬದಲು ಕಾರ್ಯಕ್ರಮ ಮಾಡುವುದರಲ್ಲಿ ಮಗ್ನರಾಗಿ ಮತದಾರರಿಗೆ ವಂಚಿಸುತ್ತಿದ್ದಾರೆ. ಈ ಎಲ್ಲ ನಡವಳಿಕೆಯಿಂದ ಮತದಾರರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರನ್ನ ಮನೆಗೆ ಕಳುಹಿಸಿ, ಅಭಿವೃದಿಗಾಗಿ ಶ್ರಮಿಸಿದ ಎನ್. ಚೆಲುವರಾಯಸ್ವಾಮಿ ಅವರಿಗೆ ಮತ ನೀಡಿ ಕ್ಷೇತ್ರದ ಅಭಿವೃದ್ಧಿ ಮಾಡಲು ಅವಕಾಶ ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು.




