Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಮವಸ್ತ್ರದಲ್ಲಿ ದೇವರ ಪಲ್ಲಕ್ಕಿ ಹೊತ್ತು ಭಜನೆ ಮಾಡಿದ ಪೊಲೀಸರು !

ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ದಂಪತಿ ಜೊತೆಗೆ ಪೊಲೀಸರು ದೇವರ ಪಲ್ಲಕ್ಕಿ ಹೊತ್ತು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿರುವ ಸಂಗತಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನವರಿ 03ರಂದು ನಗರದ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಅದಕ್ಕಾಗಿ ಪೊಲೀಸರನ್ನು ನೇಮಿಸಿ ಬಂದೋಬಸ್ತ್ ಮಾಡಲಾಗಿತ್ತು. ಆದರೆ, ವಿಜಯಪುರದ ಸಿದ್ದೇಶ್ವರ ಶ್ರೀಗಳು ನಿಧನದ ಕಾರಣ ಮುಖ್ಯಮಂತ್ರಿ ಬೊಮ್ಮಾಯಿ ತಮ್ಮ ಕಾರ್ಯಕ್ರಮ ರದ್ದು ಮಾಡಿಕೊಂಡು ವಿಜಯಪುರಕ್ಕೆ ತೆರಳಿದ್ದರು. ಹೀಗಾಗಿ, ದೇವಾಲಯದ ಬಳಿ ನಿಯೋಜನೆಗೊಂಡು, ಖಾಲಿ ಕುಳಿತಿದ್ದ ಪೊಲೀಸರು ದೇವಾಲಯದಲ್ಲಿ ಭಜನೆ ಮಾಡಿ, ಸುಬ್ರಹ್ಮಣ್ಯಸ್ವಾಮಿಯ ಪಲ್ಲಕ್ಕಿ ಹೊತ್ತು ಮೆರವಣಿಗೆ ಮಾಡಿದ್ದಾರೆ.

ಬೆಳಗ್ಗೆ 8.30ರಿಂದ 9.30ರವರೆಗೆ ನಡೆದ ಪೂಜಾ‌ ಕಾರ್ಯಕ್ರಮದಲ್ಲಿ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ದಂಪತಿ ಭಾಗಿಯಾಗಿದ್ದರು. ಅವರೊಂದಿಗೆ ಪೊಲೀಸರು ಪಲ್ಲಕ್ಕಿ ಹೊತ್ತು ದೇವಾಲಯ ಸುತ್ತ ಪ್ರದಕ್ಷಿಣೆ ಹಾಕಿದ್ದಾರೆ.

ಸ್ಥಳಿಯ ನಿವಾಸಿಗಳು, “ಘಾಟಿ ಸುಬ್ರಹ್ಮಣ್ಯಸ್ವಾಮಿ ಪೂಜಾ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್, ವೃತ್ತ ನಿರೀಕ್ಷಕ ಹರೀಶ್, ಮುನಿಕೃಷ್ಣ ಮತ್ತು ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದಾರೆ. ಇಲಾಖೆಯ ಸಮವಸ್ತ್ರ ಧರಿಸಿಯೇ ಪಲ್ಲಕ್ಕಿ ಹೊತ್ತು ಸಾಗಿದ್ದು, ಕರ್ತವ್ಯ ಲೋಪ ಎಸಗಿದ್ದಾರೆ” ಎಂದು ಕಿಡಿಕಾರಿದ್ದಾರೆ.

“ಸಾರ್ವಜನಿಕ ಸೇವೆಗೆ ಸೇರುವಾಗ ನಾನು ಕರ್ತವ್ಯದಲ್ಲಿದ್ದಾಗ ಯಾವುದೇ ಧರ್ಮ, ಭಾಷೆ, ಬಂಧು-ಬಳಗಕ್ಕೆ ಸೀಮಿತವಾಗಿರದೆ, ದ್ವೇಷಗಳಿಗೆ ಆಸ್ಪದ ನೀಡದೆ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಪ್ರಮಾಣ ಮಾಡಿರುವುದನ್ನು ಮರೆತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಸ್ಥಳದಲ್ಲಿದ್ದ ಎಲ್ಲ ಸಿಬ್ಬಂದಿಗಳು ಧಾರ್ಮಿಕ ಆಚರಣೆಗಳಲ್ಲಿ ತೊಡಗಿದ್ದಾರೆ. ಪೊಲೀಸ್ ಇಲಾಖೆಯ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!