Thursday, September 19, 2024

ಪ್ರಾಯೋಗಿಕ ಆವೃತ್ತಿ

ಗ್ರಾಮೀಣ ಶಾಲೆಗಳಿಂದ ಮಾತ್ರ ಭಾರತೀಯ ಸಂಸ್ಕೃತಿ ಉಳಿಸಲು ಸಾಧ್ಯ

ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದಿದರೆ ಮಾತ್ರ ಭಾರತೀಯ ಸಂಸ್ಕೃತಿ ಉಳಿಸಲು ಸಾಧ್ಯವಾಗುತ್ತದೆ ಎಂದು ಹೊನ್ನಾಯಕನಹಳ್ಳಿ ಶ್ರೀ ಮಂಟೇಸ್ವಾಮಿ ಸಿದ್ದಪ್ಪಾಜಿ ಮಠದ ಮಠಾಧಿಪತಿ ಎಂ. ಎಲ್. ವರ್ಚಸ್ವಿ ಶ್ರೀಕಂಠಸಿದ್ದಲಿಂಗರಾಜೇ ಆರಸು ತಿಳಿಸಿದರು.

ಮಳವಳ್ಳಿ ತಾಲ್ಲೂಕಿನ ಚೊಟ್ಟನಹಳ್ಳಿಯಲ್ಲಿ ಶ್ರೀಗಳು ತಮ್ಮ 42ನೇ ಹುಟ್ಟುಹಬ್ಬದ ಅಂಗವಾಗಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಾಗ್ರಿಗಳ ವಿತರಿಸಿ ಅವರು ಮಾತನಾಡಿದರು.

ಇಂದು ಭಾರತೀಯ ಸಂಸ್ಕೃತಿಯನ್ನು ಹಳ್ಳಿಗಳಲ್ಲಿ ಮಾತ್ರ ನೋಡಲು ಸಾಧ್ಯವಾಗುತ್ತಿದೆ. ಪಟ್ಟಣ ಹಾಗೂ ನಗರಗಳಲ್ಲಿ ವಾಸ ಮಾಡುತ್ತಿರುವವರು ಪಾಶ್ಚಿಮಾತ್ಯ ಸಂಸ್ಕೃತಿ ಅಳವಡಿಸಿಕೊಂಡಿರುವುದರಿಂದ ಭಾರತೀಯ ಸಂಸ್ಕೃತಿಯೇ ಕಾಣದಂತಾಗಿದ್ದು,ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಪ್ರತಿಯೊಬ್ಬರಿಗೂ ಉಚಿತ ಶಿಕ್ಷಣ ನೀಡುವುದು ಸಂವಿಧಾನದ ಮೂಲಭೂತ ಹಕ್ಕು ಆಗಿದೆ.ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿಯೂ ಆಗಿದೆ. ಆದರೇ ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚಾಗಿ ಪ್ರಾರಂಭಗೊಳ್ಳುತ್ತಿರುವುದರಿಂದ ಶಿಕ್ಷಣ ಪಡೆಯುವುದರಲ್ಲಿ ವ್ಯತ್ಯಾಸ ಕಾಣುತ್ತಿದೆ. ಶಿಕ್ಷಣದಿಂದ ಮಾತ್ರ ಬದುಕು ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗುವುದರಿಂದ ಪೋಷಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕೆಂದು ಹೇಳಿದರು.

ಸರ್ಕಾರಿ ಶಾಲೆಗಳನ್ನು ಮಾದರಿಶಾಲೆಗಳನ್ನಾಗಿ ಮಾಡಬೇಕೆಂಬ ಹಂಬಲದೊಂದಿಗೆ ಕೆಲವೊಂದು ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ದಿಗೊಳಿಸಲಾಗುತ್ತಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ದಿಪಡಿಸುವುದು ಇದೆ, ದೇವರು ಶಕ್ತಿ ಕೊಟ್ಟರೇ ಇನ್ನು ಹೆಚ್ಚಿನ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಕೈಜೋಡಿಸುವುದಾಗಿ ಹೇಳಿದರು.

ತಾನು ಸೈನಿಕನಾಗಬೇಕೆಂದು ಆಸೆ ಹೊಂದಿದ್ದೆ, ಆದರೇ ಮಠದ ಜವಾವ್ದಾರಿ ನನ್ನ ಮೇಲೆ ಇದ್ದುದ್ದರಿಂದ ಹೋಗಲು ಸಾಧ್ಯವಾಗಿಲ್ಲ, ಆದರೆ ಸೈನಿಕರ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದೇನೆ. ತರಬೇತಿ ನೀಡುವ ಸ್ಥಳಕ್ಕೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಅಲ್ಲಿನ ವಾತಾವರಣವನ್ನು ತಿಳಿಸಿದರೇ ವಿದ್ಯಾರ್ಥಿಗಳ ಮನಸ್ಸಿನಲ್ಲಿಯೇ ದೇಶಾಭಿಮಾನ ಬೆಳೆಯಬಹುದು, ಶಾಲೆಯ ಆಢಳಿತ ಮಂಡಳಿ ಒಪ್ಪಿದರೆ ಪರಿಚಯ ಮಾಡಿಸಲಾಗುವುದು ಎಂದರು.

ಮಂಟೇಸ್ವಾಮಿ ಸಿದ್ದಪ್ಪಾಜಿ ಅವರ ಪರಂಪರೆಗೆ ಭಕ್ತರು ಕೊಡುತ್ತಿರುವ ಗೌರವವೇ ಇಂದು ಮಠಾಧಿಪತಿಗಳ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವುದಕ್ಕೆ ಕಾರಣವಾಗಿದೆ. ತಮ್ಮ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ.ದೇವರು ಎಲ್ಲರಿಗೂ ಆಯಸ್ಸು, ಆರೋಗ್ಯಭಾಗ್ಯವನ್ನು ನೀಡಲಿ ಎಂದು ಹಾರೈಸಿದರು.

ಸ್ವಾಮೀಜಿಯ ಜನ್ಮದಿನದ ಅಂಗವಾಗಿ ಚೊಟ್ಟನಹಳ್ಳಿ ಗ್ರಾಮಸ್ಥರು ಸ್ವಾಮೀಜಿಗಳಿಗೆ ಆತ್ಮೀಯವಾಗಿ ಅಭಿನಂದಿಸಿ ಗೌರವಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವಿತ್ರ, ವೈದ್ಯಾಧಿಕಾರಿ ಜ್ಯೋತಿ, ಕ್ಷೇತ್ರ ಸಮನ್ವಯ ಅಧಿಕಾರಿ ಶ್ರೀನಿವಾಸ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ, ಜಯಪ್ರಕಾಶ್ ಆಕಾಶವಾಣಿ ಕಲಾವಿದ ಮೈಸೂರು ಗುರುರಾಜ್, ಜಿಲ್ಲಾಪಂಚಾಯಿತಿ ಮಾಜಿ ಸದಸ್ಯೆ ಸುಷ್ಮಾ ರಾಜ್ ಮುಖಂಡರಾದ ಶಿವಕುಮಾರ್, ಅರುಣ್, ಕುಮಾರ್, ಶ್ರೀನಿವಾಸ್ ,ಚಿಕ್ಕಸ್ವಾಮಿ ಪ್ರಕಾಶ, ಸತೀಶ್, ರಮೇಶ್, ಸಿ.ಕೆ.ಸಿದ್ದೇಗೌಡ, ಲೋಕೇಶ್ ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!