ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಬೇಕಾದ ಸವಲತ್ತುಗಳನ್ನು ಪೋಷಕರು ಸರಿಯಾದ ರೀತಿಯಲ್ಲಿ ಕೊಟ್ಟರೆ ಉತ್ತಮ ಪ್ರಜೆಯಾಗಿ ರಾಷ್ಟ್ರಕ್ಕೆ ಕೊಡುಗೆ ಕೊಡುತ್ತಾರೆ ಎಂದು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ ಹೇಳಿದರು.
ಮಂಡ್ಯನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಎಸ್.ಬಿ.ಎಜುಕೇಶನ್ ಟ್ರಸ್ಟ್ ನ ಗೀತಾಂಜಲಿ ಇಂಟರ್ ನ್ಯಾಷನಲ್ ಸ್ಕೂಲ್ ವತಿಯಿಂದ ನಡೆದ ಗೀತಾಂಜಲಿ ಅಂತರಂಗ ಕಲೆಯ ಪ್ರತಿಬಿಂಬ ಕಾರ್ಯಕ್ರಮ
ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೋಷಕರು ತಮ್ಮ ಮಕ್ಕಳಿಗೆ ಆಸ್ತಿಯನ್ನು ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿದರೆ ಪ್ರಪಂಚದಲ್ಲಿ ಎಲ್ಲಿ ಬೇಕಾದರೂ ಜೀವನ ಮಾಡುತ್ತಾರೆ. ಪೋಷಕರು ಮಕ್ಕಳಿಗೆ ಮೌಲ್ಯಧಾರಿತ ಶಿಕ್ಷಣ ಕೊಡಬೇಕು. ಶಾಲೆಗಿಂತ ಹೆಚ್ಚು ದಿವಸ ಪೋಷಕರ ಹತ್ತಿರ ಮಕ್ಕಳು ಇರುತ್ತಾರೆ. ಮಗುವಿನ ಆಗು ಹೋಗುಗಳನ್ನು ನೋಡುವುದು ಪೋಷಕರ ಆದ್ಯ ಕರ್ತವ್ಯವಾಗಿದ್ದು ತಿಂಗಳಿಗೆ ಒಂದು ಭಾರಿಯಾದರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು,ಮಗುವಿನ ವಿದ್ಯಾಭ್ಯಾಸದ ಕಡೆ ಗಮನ ಕೊಟ್ಟರೆ ಮೌಲ್ಯಧಾರಿತ ಶಿಕ್ಷಣ ಪಡೆಯುತ್ತಾನೆ ಎಂದು ಹೇಳಿದರು.
ಮಕ್ಕಳಲ್ಲಿ ಭಿನ್ನ- ಭಿನ್ನ ಸಾಮರ್ಥ್ಯಗಳಿರುತ್ತವೆ ಆದ್ದರಿಂದ ಬೇರೆ ಮಕ್ಕಳ ಜೊತೆ ಹೋಲಿಕೆ ಬೇಡ ಜೀವನ ನಡೆಸಲು ಹಲವಾರು ಮಾರ್ಗಗಳಿವೆ ಆದ್ದರಿಂದ ಹೋಲಿಕೆ ಮಾಡುವುದರಿಂದ ಮಕ್ಕಳು ಖಿನ್ನತೆಗೊಳಗಾಗುತ್ತವೆ ಎಂದು ಹೇಳಿದರು.
ಎಸ್.ಬಿ. ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಶಿವಲಿಂಗಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಕಸರತ್ತು ಮಾಡಿದಾಗ ಮಕ್ಕಳು ಸರ್ವ ರೀತಿಯಲ್ಲೂ ಬೆಳೆಯಲು ಸಾಧ್ಯ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಪ್ರಪಂಚವನ್ನು ಆಳುವ ದೇಶ ಭಾರತವಾಗಿದ್ದು ಬೇರೆ ದೇಶಗಳಲ್ಲೂ ಪ್ರಧಾನಮಂತ್ರಿ ಆಗುವ ದೇಶ ಭಾರತವಾಗುತ್ತಿದೆ. ಈ ನಿಟ್ಟಿನಲ್ಲಿ ಪೋಷಕರು ಚಿಕ್ಕವಯಸ್ಸಿನಲ್ಲಿ ಮಕ್ಕಳನ್ನು ಕಾಪಾಡುವ ಜವಾಬ್ದಾರಿ ನಿಮ್ಮ ಮೇಲಿದೆ.ಎಲ್ಲರೂ ಸೇರಿ ಮಕ್ಕಳನ್ನು ಉತ್ತಮ ಪ್ರಜೆಯಾಗಿ ಮಾಡಿ ದೇಶದ ಅಭಿವೃದ್ಧಿಗೆ ಶ್ರಮಿಸಲು ಕರೆ ನೀಡಿದರು.
ಎಸ್.ಬಿ.ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಮಾತನಾಡಿ, ಪೋಷಕರು ಮಕ್ಕಳಿಗೆ ಆದರ್ಶ ನಡೆ ನುಡಿ ಬಗ್ಗೆ ತಿಳಿಸಬೇಕು.ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಬೆಳೆಸಬೇಕು. ಮಕ್ಕಳನ್ನು ಉತ್ತಮ ರೀತಿ ಬೆಳೆಸುವ ಅಭ್ಯಾಸ ಮೂಡಿಸಬೇಕು,ಮೊಬೈಲ್ ನಿಂದ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಂ.ಟಿ.ರಾಜೇಂದ್ರ ಅವರು ಮಕ್ಕಳಿಗೆ ಬಹುಮಾನ ವಿತರಿಸಿದರು. ವೇದಿಕೆಯಲ್ಲಿ ಪ್ರಾಂಶುಪಾಲೆ ಹೆಚ್.ಸರೋಜ, ಮುಖ್ಯೋಪಾಧ್ಯಾಯ ವಿ.ಡಿ.ರಾಜಣ್ಣ ಸೇರಿದಂತೆ ಇತರರು ಹಾಜರಿದ್ದರು.




