Thursday, September 19, 2024

ಪ್ರಾಯೋಗಿಕ ಆವೃತ್ತಿ

ಭಾರತೀಯರು ಸಾಧನೆಯ ಹಾದಿಯಲ್ಲಿ ಸಾಗಬೇಕು : ಸಿಇಒ


  • ಇಸ್ರೇಲ್ ಇತಿಹಾಸ ರೋಚಕ : ಯಹೂದಿ ಕೃತಿ ಲೋಕಾರ್ಪಣೆ

  • ಶ್ರೀಕಾಂತ್‌ಶೆಟ್ಟಿ ಅವರ ಕೃತಿ ಬಿಡುಗಡೆಗೊಳಿಸಿದ ಶಾಂತ ಎಲ್. ಹುಲ್ಮನಿ

ವಿಶ್ವದ ಎಲ್ಲಾ ದೇಶಗಳಿಗಿಂತ ಸಂಪನ್ಮೂಲ ರಾಷ್ಟ್ರವಾಗಿರುವ ಭಾರತ ದೇಶದ ಜನತೆ ಮನಸ್ಸು ಮಾಡಿದರೆ ಎಲ್ಲಾ ಕ್ಷೇತ್ರಗಳಲ್ಲೂ ಉನ್ನತವಾದ ಸಾಧನೆ ಮಾಡುವ ಶಕ್ತಿ ಇದೆ ಎಂದು ಜಿ.ಪಂ.ಸಿಇಒ ಶಾಂತ ಎಲ್.ಹುಲ್ಮನಿ ಹೇಳಿದರು.

ಮಂಡ್ಯ ನಗರದ ಕರ್ನಾಟಕ ಸಂಘದ ಆವರಣದಲ್ಲಿ ರಾಷ್ಟ್ರ ವಿಕಾಸ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಶ್ರೀಕಾಂತ್‌ಶೆಟ್ಟಿ ಅವರ ಯಹೂದಿ ಕೃತಿ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಸ್ರೇಲ್ ದೇಶದ ಸ್ವಾತಂತ್ರ್ಯ ಸಂಗ್ರಾಮ ಹಾಗೂ ರೋಚಕ ಇತಿಹಾಸವನ್ನು ದಾಖಲಿಸಿರುವ ಯಹೂದಿ ಕೃತಿ ಅತ್ಯಂತ ಪರಿಣಾಮಕಾರಿಯಾಗಿದೆ. ಶೇ.22ರಷ್ಟು ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡಿರುವವರು ಪುಟ್ಟ ರಾಷ್ಟ್ರದ ಜನರು ಎನ್ನುವುದು ಶ್ಲಾಘನೀಯ. ಜಗತ್ತಿನ ಪುರಾತನವಾದ ಯಹೂದಿ ಧರ್ಮಿಯರು ತಮ್ಮ ದೇಶದ ಅಭಿವೃದ್ಧಿಗಾಗಿ ದುಡಿದ ಪರಿಯನ್ನು ಲೇಖಕರು ಬಹಳ ಅರ್ಥಪೂರ್ಣವಾಗಿ ವರ್ಣಿಸಿದ್ದಾರೆ ಎಂದರು.

ಇತಿಹಾಸವನ್ನು ಅರಿತವನು ಮಾತ್ರ ಇತಿಹಾಸವನ್ನು ಸೃಷ್ಟಿಸಬಲ್ಲರು ಎಂಬುದನ್ನು ಪ್ರತಿಯೊಬ್ಬರೂ ಅರಿತು ಭಾರತೀಯ ಪರಂಪರೆಯನ್ನು ವಿಶ್ವದಾದ್ಯಂತ ಹರಡುವ ಸಾಹಸಕ್ಕೆ ಮುಂದಾಗಬೇಕೆಂದು ಹೇಳಿದರು.

ಕೃತಿಯನ್ನು ಕುರಿತು ಮಾತನಾಡಿದ ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್, ಒಂದು ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಯಹೂದಿಗಳ ಸ್ವಾಭಿಮಾನ, ಹೋರಾಟದ ಕೆಚ್ಚು, ದೇಶಾಭಿಮಾನ ಭಾರತೀಯರಿಗೆ ಸ್ಪೂರ್ತಿಯಾಗಬೇಕಿದೆ. ಇಸ್ರೇಲ್ ಸ್ವಾತಂತ್ರ್ಯವನ್ನು ಪಡೆಯಲು ರಕ್ತಸಿಕ್ತ ಹೋರಾಟವನ್ನು ನಡೆಸಿ ಸಹಸ್ರಾರು ಮಂದಿ ಬಲಿಯಾಗಿ ಹೋದ ಚರಿತ್ರೆಯನ್ನು ಯಹೂದಿ ಕೃತಿಯಲ್ಲಿ ಶ್ರೀಕಾಂತ್‌ಶೆಟ್ಟಿ ರೋಚಕವಾಗಿ ವರ್ಣಿಸಿದ್ದಾರೆ ಎಂದರು.

ಇಡೀ ದೇಶಕ್ಕೆ ಉತ್ತಮ ನಾಯಕತ್ವ ಇದ್ದರೆ ಅಂತಹ ರಾಷ್ಟ್ರ ಎಷ್ಟೇ ತುಳಿತಕ್ಕೆ ಒಳಗಾದರೂ ಪ್ರಗತಿಯ ಹಾದಿಯಲ್ಲಿ ಸಾಗುತ್ತದೆ ಎಂಬುದಕ್ಕೆ ಇಸ್ರೇಲ್ ದೇಶ ಉತ್ತಮ ಉದಾಹರಣೆಯಾಗಿದೆ. ನಮ್ಮ ದೇಶವನ್ನು ಆಳ್ವಿಕೆ ಮಾಡುವ ನಾಯಕರು ಸ್ವಾರ್ಥವನ್ನು ಬಿಟ್ಟು ಜನಹಿತಕ್ಕೆ ದುಡಿಯುವ ತುಡಿತವನ್ನು ತಮ್ಮದಾಗಿಸಿಕೊಂಡಾಗ ಮಾತ್ರ ದೇಶದ ಉದ್ದಾರ ಸಾಧ್ಯ ಎಂದರು.

ಕ್ರಿಶ್ಚಿಯನ್ ಹಾಗೂ ಮುಸಲ್ಮಾನ್ ಧರ್ಮಕ್ಕೂ ಪೂರ್ವದಲ್ಲಿ ಜನ್ಮತೆಳೆದ ಯಹೂದಿ ಜನಾಂಗದ ಮೇಲೆ ನಡೆದಿರುವಷ್ಟು ದೌರ್ಜನ್ಯ, ಅತ್ಯಾಚಾರ, ಯುದ್ಧ, ಕ್ರೌರ್ಯ ಮತ್ಯಾವ ಧರ್ಮಿಯರ ಮೇಲೂ ನಡೆದಿಲ್ಲ. ಅಂತಹ ಸಾವಿನ ಮನೆಯನ್ನು ಗೆದ್ದು ಬಂದ ಯಹೂದಿಗಳು ಬ್ರಿಟೀಷರಿಂದ 1948ರಲ್ಲಿ ಬಂಧಮುಕ್ತರಾಗಿ ನಡೆಸಿದ ಕೃಷಿ, ತಂತ್ರಜ್ಞಾನ, ಮಿಲಿಟರಿ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕ್ರಾಂತಿ ಹಿಂದೂಗಳಿಗೆ ಮಾದರಿ ಎಂದರೆ ತಪ್ಪಾಗಲಾರದು ಎಂದು ಇಸ್ರೇಲ್ ಇತಿಹಾಸವನ್ನು ಬಣ್ಣಿಸಿದರು.

ಕೃತಿಯ ಲೇಖಕ ಶ್ರೀಕಾಂತ್ ಶೆಟ್ಟಿ ಮಾತನಾಡಿ, ರಾಷ್ಟ್ರ ನಿರ್ಮಾಣದ ಕನಸನ್ನು ಅಕ್ಷರಶ: ಅನುಷ್ಠಾನಗೊಳಿಸಿದ ಕೀರ್ತಿಗೆ ಪಾತ್ರರಾಗಿರುವ ಇಸ್ರೇಲ್ ದೇಶದ ಯಹೂದಿಗಳ ಅಂತ:ಶಕ್ತಿ ನಮಗೆಲ್ಲಾ ಪ್ರೇರಣೆಯಾಗಬೇಕಿದೆ. ಒಂದು ಪುಟ್ಟರಾಷ್ಟ್ರವನ್ನು ಹೊಸಕಿ ಹಾಕುವ ಅರಬ್, ಕ್ರೈಸ್ತರ ಅಟ್ಟಹಾಸವನ್ನು ಮೆಟ್ಟಿನಿಂತ ಯಹೂದಿಯರ ಹೋರಾಟದ ಕಿಚ್ಚು ಭವ್ಯ ಪರಂಪರೆಯುಳ್ಳ ಭಾರತೀಯರಿಗೆ ಪರಿಚಯವಾಗಲೆಂಬ ಮಹಾತ್ವಾಕಾಂಕ್ಷೆಯೊಂದಿಗೆ ಈ ಕೃತಿಯನ್ನು ಬರೆಯಲಾಗಿದೆ ಎಂದು ಪುಸ್ತಕದ ಆಶಯವನ್ನು ವ್ಯಕ್ತಪಡಿಸಿದರು.

ರಾಷ್ಟ್ರನಿರ್ಮಾಣದ ಚರಿತ್ರೆಯನ್ನು ಸಾರುವ ಹತ್ತುಹಲವು ಕೃತಿಗಳ ಮಾರಾಟ ಕೇಂದ್ರದ ರಾಷ್ಟ್ರವಿಕಾಸ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸುರೇಶ್ ಉಪಸ್ಥಿತರಿದ್ದರು. ವಿಶ್ವನಾಥ್ ಸ್ವಾಗತಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!