Wednesday, October 23, 2024

ಪ್ರಾಯೋಗಿಕ ಆವೃತ್ತಿ

ಅಂತರಾಷ್ಟ್ರೀಯ ಯೋಗ ದಿನ; ಬಿ.ಎಸ್. ಶಿವಣ್ಣ ಅವರ ಸೇವಾ ಮನೋಭಾವವನ್ನು ನೆನೆಯುತ್ತಾ…….

ವಿವೇಕಾನಂದ ಎಚ್.ಕೆ

” ತನಗೂ ಒಂದು ದಿನ ಸಾವಿದೆ ಎಂಬುದನ್ನು ಅರಿತವನು ಇನ್ನೊಬ್ಬರಿಗೆ ಎಂದೂ ತೊಂದರೆ ಕೊಡುವುದಿಲ್ಲ ” – ಗೌತಮ ಬುದ್ಧ………

ಅಂತರಾಷ್ಟ್ರೀಯ ಯೋಗ ದಿನ ಜೂನ್ 21ರ ಈ ಸಂದರ್ಭದಲ್ಲಿ ಯೋಗದ ಮಹತ್ವ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ.ರಾಮ ಮನೋಹರ ಲೋಹಿಯಾ ವಿಚಾರ ವೇದಿಕೆಯ ಬಿ ಎಸ್ ಶಿವಣ್ಣ ಅವರ ಸೇವಾ ಮನೋಭಾವವನ್ನು ನೆನೆಯುತ್ತಾ…….

ಆಧುನಿಕ ಸಮಾಜದ ಮೋಸ, ವಂಚನೆ, ಹಿಂಸಾಕೃತ್ಯಗಳು, ಅಧಿಕಾರ ದಾಹ, ಅತ್ಯಾಚಾರ, ಆತ್ಮಹತ್ಯೆ, ಅಪಘಾತಗಳು ಈ ಎಲ್ಲವನ್ನು ನೋಡಿದಾಗ ನಿಜಕ್ಕೂ ಬುದ್ಧನ ಮಾತುಗಳು ಮತ್ತೆ ಮತ್ತೆ ನೆನಪಾಗುತ್ತದೆ, ಕಾಡುತ್ತದೆ. ಮನುಷ್ಯ ಪ್ರಾಣಿಗೆ ಇಷ್ಟು ಸರಳ ವಿಷಯಗಳು ಅರ್ಥವಾಗುವುದಿಲ್ಲವೇ ಎಂದು ಆಶ್ಚರ್ಯವಾಗುತ್ತದೆ…….

ಬುದ್ಧನ ಈ ಚಿಂತನೆ ಕೇವಲ ಒಣ ಅಕ್ಷರಗಳಾಗಲಿ, ಮಾತುಗಳ ಜೋಡಣೆಯಾಗಲಿ ಅಲ್ಲ. ದೇಹ ಮತ್ತು ಮನಸ್ಸನ್ನು ಧೀರ್ಘವಾಗಿ ಮತ್ತು ಆಳವಾಗಿ ದಂಡಿಸಿದ ನಂತರ ಚಿಂತನೆ, ಮಂಥನ, ಅಧ್ಯಯನಗಳಿಂದ ಆಗಿನ ಕಾಲದಲ್ಲೇ ಒಡಮೂಡಿದ ಜ್ಞಾನೋದಯದ ಸಾಲುಗಳು, ಸಾರ್ವಕಾಲಿಕ ಸತ್ಯಗಳು……

ಇದನ್ನು ಎಳವೆಯಲ್ಲಿ, ಪ್ರೌಢಾವಸ್ಥೆಯಲ್ಲಿ, ಯೌವ್ವನದಲ್ಲಿ ನಮ್ಮ ಪೀಳಿಗೆ ಸರಿಯಾಗಿ ಮನವರಿಕೆ ಮಾಡಿಕೊಟ್ಟಿದ್ದೇಯಾದರೆ ಕನಿಷ್ಠ ಮುಂದಿನ ದಿನಗಳಾದರು ಉತ್ತಮವಾಗಿ ರೂಪಗೊಳ್ಳಬಹುದು. ಆದರೆ ದುರಂತವೆಂದರೆ, ಪ್ರತಿನಿತ್ಯದ ಮಾಧ್ಯಮಗಳ ಬ್ರೇಕಿಂಗ್ ನ್ಯೂಸ್ ಗಳಾಗಲಿ, ಶಿಕ್ಷಣದ ಮೌಲ್ಯಗಳಾಗಲಿ, ಸಮಾಜದ ಚಟುವಟಿಕೆಗಳಾಗಲಿ ಈ ನಿಟ್ಟಿನಲ್ಲಿ ಸಾಗುತ್ತಲೇ ಇಲ್ಲ. ಬದಲಾಗಿ ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ. ಇದು ಅತ್ಯಂತ ಅಪಾಯಕಾರಿಯಾಗಿ ಬೆಳೆಯುತ್ತಿದೆ…..

ಯೋಗ ದಿನದ ಸಂದರ್ಭದಲ್ಲಿ ಯೋಗ ಕೇವಲ ದೈಹಿಕ ಮತ್ತು ಮಾನಸಿಕ ನಿಯಂತ್ರಣ ಅಥವಾ ಕಸರತ್ತು ಆಗಬಾರದು. ಅದೊಂದು ಬದುಕಿನ ತಿಳುವಳಿಕೆ, ನಡವಳಿಕೆ ಮತ್ತು ವ್ಯಕ್ತಿತ್ವವಾಗಬೇಕು ಎಂಬುದು ನಮ್ಮೆಲ್ಲರ ಆಶಯ…..

ಇಂದು ಅಂತಾರಾಷ್ಟ್ರೀಯ ಯೋಗ ದಿನ ( ಜೂನ್ ‌21 )

ವಿಶ್ವಕ್ಕೆ ಭಾರತದ ಬಹುದೊಡ್ಡ ಕೊಡುಗೆ……

ನಾಗರಿಕತೆ ಬೆಳೆದಂತೆಲ್ಲಾ ಮನುಷ್ಯನ ಬದುಕು ಹೆಚ್ಚು ಸಂಕೀರ್ಣವಾಗ ತೊಡಗಿತು. ಅದರ ಪರಿಣಾಮ ಆತನ‌ ದೇಹ ಮತ್ತು ಮನಸ್ಸುಗಳು ನಿಧಾನವಾಗಿ ಘಾಸಿಯಾಗಲು ಪ್ರಾರಂಭವಾಯಿತು. ಅದರಿಂದ ಹೊರ ಬರಲು ವಿಶ್ವದ ಎಲ್ಲಾ ಪ್ರಾಚೀನ ನಾಗರಿಕತೆಗಳು ವಿವಿಧ ರೀತಿಯ ವಿಧಾನಗಳನ್ನು ಪರಿಶೋಧಿಸಿದವು. ಅದರ ಭಾರತೀಯ ವಿಧಾನಗಳಲ್ಲಿ ಪ್ರಮುಖವಾದುದು ಯೋಗ……

ಅದಕ್ಕೆ ವೈಜ್ಞಾನಿಕ ರೂಪ ನೀಡಿ, ಕ್ರಮಬದ್ದವಾಗಿ ಅಳವಡಿಸಿ, ಅದನ್ನು ಜನಪ್ರಿಯಗೊಳಿಸಿದ್ದು ಪಂತಂಜಲಿ ಎಂಬ ಮಹರ್ಷಿ ಎಂದು ಗುರುತಿಸಲಾಗಿದೆ. ಇದು ನನ್ನ ತಿಳಿವಳಿಕೆ. ಇನ್ನೂ ಸ್ಪಷ್ಟ ಇತಿಹಾಸ ತಿಳಿದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು…..

ದೇಹ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ ಹೆಚ್ಚು ಆರೋಗ್ಯಯುತ ಜೀವನ ರೂಪಿಸಿಕೊಳ್ಳಲು ಯೋಗ ಒಂದು ಅತ್ಯುತ್ತಮ ವಿಧಾನ. ಇದು‌ ಜಾತಿ‌ ಧರ್ಮ ಭಾಷೆ ಪ್ರದೇಶ ಎಲ್ಲವನ್ನೂ ಮೀರಿದ್ದು. ಪ್ರಾಕೃತಿಕವಾದ ಸರಳ‌ ಸಹಜ ಸ್ವಾಭಾವಿಕ ವಿಧಾನ. ಇದು ಭಕ್ತಿ ಪೂರ್ವಕ ಆಧ್ಯಾತ್ಮವಲ್ಲ. ಎಲ್ಲೋ ಕೆಲವರು ಆಧುನಿಕವಾಗಿ ವ್ಯಾಪಾರೀಕರಣದ‌ ದೃಷ್ಟಿಯಿಂದ ಇದಕ್ಕೆ ಧಾರ್ಮಿಕ ರೂಪ ನೀಡಿರಬಹುದು. ವಾಸ್ತವದಲ್ಲಿ ಇದು ಆರೋಗ್ಯ ಪೂರ್ಣ ಜೀವನ ಶೈಲಿಯ ಒಂದು ಅದ್ಬುತ ಮಾರ್ಗ……

ಯೋಗ ಮತ್ತು ಪ್ರಾಣಾಯಾಮ ಆರೋಗ್ಯ ಪೂರ್ಣ ಜೀವನದ ಒಂದು ವೈಜ್ಞಾನಿಕ ವಿಧಾನ ಎಂಬುದನ್ನು ವೈದ್ಯಲೋಕ ಸಹ ಸ್ವೀಕರಿಸುತ್ತದೆ…….

ಇದರ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ದಯವಿಟ್ಟು ‌ಸಾಧ್ಯವಿರುವ ಮತ್ತು ಅವಕಾಶವಿರುವ ಎಲ್ಲರೂ ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಯೋಗವನ್ನು ಅಳವಡಿಸಿಕೊಂಡರೆ ಬದುಕು ಹೆಚ್ಚು ಸಹನೀಯ ಎನಿಸುತ್ತದೆ. ತಪ್ಪುಗಳು ಕಡಿಮೆಯಾಗುತ್ತದೆ. ಸುಖ ಸಂತೋಷ ಹೆಚ್ಚಾಗುತ್ತದೆ ಎಂದು ನಿಶ್ಚಿತವಾಗಿ ಹೇಳಬಹುದು…..

ಈ ಸಂದರ್ಭದಲ್ಲಿ ಮತ್ತೊಂದು ಪ್ರಮುಖ ವಿಷಯ ಮತ್ತು ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಹೇಳಬೇಕೆನಿಸುತ್ತಿದೆ……..

ಬಿ. ಎಸ್. ಶಿವಣ್ಣನವರು…….

ಈ ಸಮಾಜ ಇರುವುದರಲ್ಲಿ ಒಂದಷ್ಟು ಸಮಾಧಾನಕರ, ನೆಮ್ಮದಿ ಕಾಣುತ್ತಿರುವುದು ಈಗಲೂ ಸಮಾಜ ಮುಖಿಯಾಗಿ ಚಿಂತಿಸುತ್ತಾ, ತಮ್ಮ ಕೈಲಾದಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕೆಲವು ಸಂಘ, ಸಂಸ್ಥೆಗಳು ಮತ್ತು ಜನರಿಂದಾಗಿ. ಅಂತಹವರಲ್ಲಿ ಒಬ್ಬರು ಶಿವಣ್ಣನವರು. …..

ಡಾ. ರಾಮ ಮನೋಹರ ಲೋಹಿಯಾ ವಿಚಾರ ವೇದಿಕೆಯನ್ನು ಸ್ಥಾಪಿಸಿಕೊಂಡು, ಸಮಾಜದ ಬಡವರು, ದುರ್ಬಲ ವರ್ಗದವರಿಗೆ ಆರ್ಥಿಕ ಸಹಾಯ ಮಾಡುತ್ತಾ ಜೀವನವನ್ನು ಸಾರ್ಥಕ ಪಡಿಸಿಕೊಳ್ಳುತ್ತಿದ್ದಾರೆ…..

ಮಂಡ್ಯ ಜಿಲ್ಲೆಯ ಮಳವಳ್ಳಿ ಮೂಲದ ಇವರು ಅನೇಕ ವರ್ಷಗಳಿಂದ ಮತ್ತು ಈ ಕ್ಷಣಕ್ಕೂ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಕೊಡುವುದು, ಅನೇಕ ಪೌರಕಾರ್ಮಿಕರಿಗೆ ಜೀವವಿಮೆ ಮಾಡಿಸುವುದು, ಪರಿಸರ ಉಳಿಸುವುದು, ಊರಿನ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡುವುದು ಹಾಗೂ ಸಾಧ್ಯವಿರುವ ಕಡೆ ಹೀಗೆ ಸಮಾಜದಲ್ಲಿ ಬದಲಾವಣೆಗಾಗಿ ನಿರಂತರ ಪ್ರಯತ್ನ ಪಡುತ್ತಿದ್ದಾರೆ….

ಇದು ಒಂದು ರೀತಿಯ ಸಾಮಾಜಿಕ ಯೋಗವೇ. ಬುದ್ಧನ ಮಾತಿನಂತೆ ನಮ್ಮ ಸಾವು ಖಚಿತ ಎಂಬುದು ತಿಳಿದ ನಂತರ ವ್ಯಕ್ತಿಯೊಬ್ಬ ನಿಜಕ್ಕೂ ಇನ್ನೊಬ್ಬರಿಗೆ ತೊಂದರೆ ಕೊಡಲಾರ. ಹಾಗೆಯೇ ಸಾವಿನ ಖಚಿತತೆ, ಅನಿವಾರ್ಯತೆ, ಅನಂತತೆಯ ಅರಿವಿರುವವರು ಶಿವಣ್ಣನವರಂತೆ ಸಮಾಜ ಮುಖಿ ಕೆಲಸಗಳಲ್ಲಿಯೂ ತೊಡಗಿಸಿಕೊಳ್ಳುತ್ತಾರೆ. ಏಕೆಂದರೆ ಸತ್ತ ನಂತರ ಮಾಡುವುದಕ್ಕೆ ಏನೂ ಇರುವುದಿಲ್ಲ…….

ಶ್ರೀ ಶಿವಣ್ಣನವರಿಗೆ ಹೃದಯ ತುಂಬಿದ ಧನ್ಯವಾದಗಳನ್ನು ಅರ್ಪಿಸುತ್ತಾ……

ಒಳ್ಳೆಯವರನ್ನು ಮತ್ತು ಒಳ್ಳೆಯದನ್ನು ಸ್ವೀಕರಿಸೋಣ ಮತ್ತು ಪ್ರೋತ್ಸಾಹಿಸೋಣ.
ಅದೇ ಸಮಯದಲ್ಲಿ ಕೆಟ್ಟವರನ್ನು ಮತ್ತು ಕೆಟ್ಟದ್ದನ್ನು ನಿರ್ಲಕ್ಷಿಸೋಣ, ತಿರಸ್ಕರಿಸೋಣ, ಸಾಧ್ಯವಾದರೆ ವಿರೋಧಿಸೋಣ….

ಶಿವಣ್ಣನವರ ಸಂಪರ್ಕ ಸಂಖ್ಯೆ
9448417379…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!