Sunday, November 22, 2026

ಪ್ರಾಯೋಗಿಕ ಆವೃತ್ತಿ

ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ಸತೀಶ್ ಜಾರಕಿಹೊಳಿ ಬಂಧಿಸಿ: ಸಿ.ಪಿ.ಉಮೇಶ್

ಹಿಂದೂ ಎನ್ನುವ ಪದ ಅಶ್ಲೀಲ ಎನ್ನುವ ಮೂಲಕ ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಒತ್ತಾಯಿಸಿದರು.

ಮಂಡ್ಯ ನಗರದ ಸರ್. ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.

ಬಹುಸಂಖ್ಯಾತ ಹಿಂದೂಗಳನ್ನು ಕೆಟ್ಟದಾಗಿ ಮಾತನಾಡುವುದು,ಅವಮಾನಿಸುವುದು ಕಾಂಗ್ರೆಸ್ ಪಕ್ಷದ ಸಿದ್ಧಾಂತ.ಹಿಂದೂಗಳ ಬಗ್ಗೆ ಕೀಳಾಗಿ ಮಾತನಾಡುವುದನ್ನು ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿದೆ. ಹಿಂದೂಗಳನ್ನು ಅವಮಾನಿಸಿ ರುವುದು , ಕಡೆಗಣಿಸುವುದು ಸೇರಿದಂತೆ ಇನ್ನಿತರೆ ಕಾರ್ಯಸೂಚಿಗಳನ್ನು ಕಾಂಗ್ರೆಸ್ ತನ್ನ ವೃತ್ತಿಯನ್ನಾಗಿ ಮಾಡಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂ ಎಂಬುದು ಭಾರತದ ಜೀವನ ಪದ್ಧತಿ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ನಮ್ಮ ರಾಷ್ಟ್ರಗೀತೆಯ ಕೊನೆಯ ಸಾಲಿನಲ್ಲಿ ಜೈ ಹಿಂದ್ ಎನ್ನುವ ಶಬ್ದವೂ ಇದೆ. ಇದನ್ನು ಅರ್ಥೈಸಿಕೊಳ್ಳದ ಸತೀಶ್ ಜಾರಕಿಹೊಳಿ ಬಹುಸಂಖ್ಯಾತ ಹಿಂದೂಗಳಿಗೆ ಮಾತ್ರವಲ್ಲದೇ, ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಹರಿಹಾಯ್ದರು.

ಇತ್ತೀಚಿನ ದಿನಗಳಲ್ಲಿ ಜಾಗತೀಕ ಮಟ್ಟದಲ್ಲಿ ಸದ್ದು ಮಾಡಿದ್ದ “ಡಿಸ್‌ಮ್ಯಾಂಟ್‌ಲಿಂಗ್ ಆಫ್ ಗ್ಲೋಬಲ್ ಹಿಂದೂತ್ವ ಶೀರ್ಷಿಕೆಯಡಿ ವಿದೇಶಿ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ ಹಿಂದೂ ವಿರೋಧಿ ನಡವಳಿಕೆ ಸೇರಿದಂತೆ ಹಿಂದೂ ಧರ್ಮವನ್ನು ಜಾಗತಿಕವಾಗಿ ನಾಶ ಮಾಡುವಂತಹ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ.ಒಂದು ಧರ್ಮದ ಮತ ಕ್ರೋಢೀಕರಣ ಮಾಡಲು ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿದ್ದಾರೆ.ಈ ಹಿಂದೆ ಹಿಂದೂ ಧರ್ಮದ ಮೇಲೆ ಎಷ್ಟೇ ದಾಳಿ ನಡೆದರೂ ನಮ್ಮ ಸಂಸ್ಕತಿ ನಾಶ ಪಡಿಸಲು ಸಾಧ್ಯವಾಗಿಲ್ಲ.ಇನ್ನು ಸತೀಶ್ ಜಾರಕಿಹೊಳಿ ಅವರಿಂದ ಸಾಧ್ಯವೇ? ಎಂದು ವಾಗ್ದಾಳಿ ನಡೆಸಿದರು.

ಹಿಂದೂ ವಿರೋಧಿ ನೀತಿ ಹೊಂದಿರುವ ವಿದೇಶಿಗರಿಂದ ಅಪಾರ ಹಣವನ್ನು ತಂದು ದೇಶದೊಳಗೆ ಹಿಂದೂ ವಿರೋಧಿ ಗಳಿಗೆ ನೀಡುತ್ತಿದ್ದಾರೆಂಬ ಅನುಮಾನವಿದೆ. ರಾಷ್ಟ್ರದ ಹಿತದೃಷ್ಟಿ, ಸಮಾಜದಲ್ಲಿ ಶಾಂತಿ ನೆಲೆಸ ಬೇಕಾದ ಹಿನ್ನಲೆಯಲ್ಲಿ ಕೀಳು ಹೇಳಿಕೆ ನೀಡಿರುವ ಸತೀಶ್ ಜಾರಕಿಹೊಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಚಂದಗಾಲು ಶಿವಣ್ಣ, ಹೊಸಹಳ್ಳಿ ನಾಗೇಶ್, ಸಿ.ಟಿ.ಮಂಜುನಾಥ್, ಟಿ.ಎಸ್. ವಿವೇಕ್, ನಾಗಾನಂದ್‌, ಸಿದ್ದರಾಜುಗೌಡ, ಶಿವಕುಮಾರ್ ಆರಾಧ್ಯ, ಎಂ.ವಸಂತ್ ಕುಮಾರ್, ನಾಗಣ್ಣ, ಮಲ್ಲಪ್ಪ, ಎಂ.ಕೆ.ಕೇಶವಮೂರ್ತಿ, ಯಲಿಯೂರು ನವೀನ್ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ