Saturday, May 18, 2024

ಪ್ರಾಯೋಗಿಕ ಆವೃತ್ತಿ

ಸಿದ್ದರಾಮಯ್ಯನವರ ಹೇಳಿಕೆ ತಿರುಚಿ, ನಂತರ ತಿದ್ದಿದ ಎನ್‌ಡಿಟಿವಿ; ಸುಳ್ಳನ್ನೇ ವೈಭವೀಕರಿಸಿದ ಮಾಧ್ಯಮಗಳು

ಸಿದ್ದರಾಮಯ್ಯನವರು ತಮ್ಮ ಸಂದರ್ಶನದಲ್ಲಿ ಹೇಳಿರುವುದೇ ಒಂದಾದರೆ ಎನ್‌ಡಿಟಿವಿ ವರದಿ ಮಾಡಿರುವ ವಿಚಾರವೇ ಇನ್ನೊಂದಾಗಿದೆ . ಸಿದ್ದರಾಮಯ್ಯನವರು ಹೇಳದೆ ಇರುವ ಸಂಗತಿಯನ್ನು ಸೇರಿಸಿ ವರದಿ ಪ್ರಕಟಿಸಲಾಗಿದೆ. ಆದರೆ ಇದನ್ನೇ ‘ಕನ್ನಡಪ್ರಭ’ದಂತಹ ಪತ್ರಿಕಾ ಸಂಸ್ಥೆಗಳು ವರದಿ ಮಾಡಿವೆ. ಸಿದ್ದರಾಮಯ್ಯನವರು ವಿರೋಧ ವ್ಯಕ್ತಪಡಿಸಿದ ಬಳಿಕ ಹೆಡ್‌ಲೈನ್ ಹಾಗೂ ವರದಿಯನ್ನು ಎನ್‌ಡಿಟಿವಿ ತಿದ್ದಿದೆಯಾದರೂ ಸುಳ್ಳು ಈಗಾಗಲೇ ಊರು ಸುತ್ತಾಡಿಕೊಂಡು ಬಂದಿದೆ.

ಎನ್‌ಡಿಟಿವಿ ನಡೆಸಿದ ವಿಡಿಯೊ ಸಂದರ್ಶನದಲ್ಲಿ ಸಿದ್ದರಾಮಯ್ಯನವರು ಅನೇಕ ವಿಷಯಗಳನ್ನು ಮಾತನಾಡಿದ್ದಾರೆ. ಕೋಲಾರ ಮತ್ತು ವರುಣಾದಲ್ಲಿ ಸ್ಪರ್ಧಿಸುವ ಕುರಿತು, ಬಿಜೆಪಿ ಸರ್ಕಾರದ 40% ಕಮಿಷನ್‌ ದಂಧೆ ಮತ್ತು ಕೋಮುವಾದಿ ರಾಜಕಾರಣದ ಕುರಿತು ಮಾತನಾಡುತ್ತಾರೆ. ಜೊತೆಗೆ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿರುವುದಾಗಿಯೂ ಹೇಳುತ್ತಾರೆ.

“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಾದರೂ ಮುಖ್ಯಮಂತ್ರಿಯಾಗುವ ಆಕಾಂಕ್ಷೆಯನ್ನು ಹೊಂದಿರಬಹುದು. ನಾನು ಆಕಾಂಕ್ಷಿಯಾಗಿದ್ದೇನೆ, ಡಿ.ಕೆ.ಶಿವಕುಮಾರ್‌ ಅವರೂ ಆಕಾಂಕ್ಷಿಯಾಗಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲವೂ ನಡೆಯುತ್ತವೆ. ಇದರಲ್ಲಿ ಯಾವುದೇ ತಪ್ಪಿಲ್ಲ” ಎನ್ನುತ್ತಾರೆ. ಅದಕ್ಕೆ ಸಂದರ್ಶಕಿ ಕೂಡ ದನಿಗೂಡಿಸುತ್ತಾರೆ.

ಮುಂದುವರಿದು ಸಿದ್ದರಾಮಯ್ಯನವರು, “ನಾನು ಮುಖ್ಯಮಂತ್ರಿಯಾಗಬೇಕೆಂದು ಬಯಸುವುದು ತಪ್ಪಲ್ಲ, ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಬೇಕೆಂದು ಬಯಸುವುದು ತಪ್ಪಲ್ಲ, ಮತ್ಯಾರೋ ಮುಖ್ಯಮಂತ್ರಿಯಾಗಬೇಕೆಂದು ಬಯಸುವುದು ತಪ್ಪಲ್ಲ. ಅಂತಿಮವಾಗಿ ಆಯ್ಕೆಯಾದ ಎಂಎಲ್‌ಎಗಳು ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡುತ್ತಾರೆ. ಅಂತಿಮವಾಗಿ ಹೈಕಮಾಂಡ್‌ ನಿರ್ಧಾರ ಕೈಗೊಳ್ಳುತ್ತದೆ. ಇದು ಪ್ರಜಾಪ್ರಭುತ್ವದ ಮಾದರಿ” ಎನ್ನುತ್ತಾರೆ.

“ಒಂದು ವೇಳೆ ಡಿ.ಕೆ.ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಹೈಕಮಾಂಡ್ ನಿರ್ಧರಿಸಿದರೆ?” ಎಂದು ಸಂದರ್ಶಕಿ ಕೇಳುತ್ತಾರೆ. ಮುಂದುವರಿದು, “ಇಲ್ಲ, ಅದು ಹಾಗಾಗುವುದಿಲ್ಲ. ಹೈಕಮಾಂಡ್ ಕೂಡ ತನ್ನಷ್ಟಕ್ಕೆ ತಾನೇ ನಿರ್ಧಾರವನ್ನು ಕೈಗೊಳ್ಳುವುದಿಲ್ಲ. ಹೊಸದಾಗಿ ಆಯ್ಕೆಯಾದ ಎಂಎಲ್‌ಎಗಳ ನಿರ್ಧಾರದ ಮೇಲೆ ಮುಂದುವರಿಯುತ್ತದೆ” ಎನ್ನುತ್ತಾರೆ.

ಹೀಗೆ ಸಿದ್ದರಾಮಯ್ಯನವರು ಮಾತನಾಡಿದ್ದರೆ, ಬೇರೆಯದ್ದೇ ರೀತಿಯಲ್ಲಿ ವರದಿ ಮಾಡಲಾಗಿದೆ. “ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಕಾಂಗ್ರೆಸ್ ಹೈಕಮಾಂಡ್‌ ಮುಖ್ಯಮಂತ್ರಿ ಹುದ್ದೆಯನ್ನು ನೀಡುವುದಿಲ್ಲ” ಎಂದು ಸಿದ್ದರಾಮಯ್ಯನವರು ಎನ್‌ಡಿಟಿವಿ ಸಂದರ್ಶನದಲ್ಲಿ ತಿಳಿಸಿದ್ದಾರೆಂದು ‘ಕನ್ನಡಪ್ರಭ’ ದಿನಪತ್ರಿಕೆ ಮುಖಪುಟದಲ್ಲಿ ವರದಿ ಮಾಡಿದೆ.

ಎನ್‌ಡಿಟಿವಿ ತನ್ನ ವರದಿಯಲ್ಲಿ “ಡಿ.ಕೆ.ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ ಹುದ್ದೆಯನ್ನು ಹೈಕಮಾಂಡ್ ನೀಡುವುದಿಲ್ಲ” ಎಂಬ ಸಾಲನ್ನು ಸೇರಿಸಿದೆ. ವಿರೋಧ ವ್ಯಕ್ತವಾದ ಬಳಿಕ ವರದಿಯನ್ನು ತಿದ್ದಿದೆ.

ತಿರುಚಲ್ಪಟ್ಟಿರುವ ವರದಿ
ತಿದ್ದಲ್ಪಟ್ಟ ವರದಿ

“ಇಲ್ಲ, ಹಾಗೇ ಆಗಲು ಸಾಧ್ಯವಿಲ್ಲ. ಏಕೆಂದರೆ ನಾವು ಪ್ರಜಾಪ್ರಭುತ್ವ ದಾರಿಯಲ್ಲಿ ನಡೆಯಬೇಕು. ತನ್ನಷ್ಟಕ್ಕೆ ತಾನೇ ಹೈಕಮಾಂಡ್ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಹೊಸದಾಗಿ ಆಯ್ಕೆಯಾದ ಎಂಎಲ್‌ಎಗಳ ಅಭಿಪ್ರಾಯದಂತೆ ಹೋಗಬೇಕಾಗುತ್ತದೆ” ಎಂದು ಸಿದ್ದರಾಮಯ್ಯನವರು ಹೇಳಿರುವುದಾಗಿ ಎನ್‌ಡಿಟಿವಿ ವರದಿಯನ್ನು ತಿದ್ದಿದೆ.

ಎನ್‌ಡಿಟಿವಿ ಮಾಡಿರುವ ಸುಳ್ಳು ಸುದ್ದಿಗೆ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಈ ಕುರಿತು ಟ್ವೀಟ್‌ಗಳನ್ನು ಮಾಡಿ ಸ್ಪಷ್ಟೀಕರಣ ನೀಡಿದ್ದಾರೆ. “ನಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ನಾನು ಆಡದ ಮಾತುಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿಯೊಂದನ್ನು ಪ್ರಕಟಿಸಿದೆ. ಇದು ಸಂಪೂರ್ಣ ಸುಳ್ಳು ಮತ್ತು ದುರುದ್ದೇಶದಿಂದ ಕೂಡಿದ್ದಾಗಿದೆ. ಎನ್.ಡಿ ಟಿವಿ ತಕ್ಷಣ ಈ ಬರಹವನ್ನು ಅಳಿಸಿಹಾಕಿ ತಿದ್ದುಪಡಿ ಪ್ರಕಟಿಸಬೇಕು ಎಂದು ಒತ್ತಾಯಿಸುತ್ತೇನೆ” ಎಂದಿದ್ದಾರೆ.

ನಮ್ಮ ಪಕ್ಷದ ಮುಂದಿನ ಮುಖ್ಯಮಂತ್ರಿಯನ್ನು ಶಾಸಕಾಂಗ ಪಕ್ಷ ಮತ್ತು ಹೈಕಮಾಂಡ್ ಕೂಡಿ ಆಯ್ಕೆ ಮಾಡಲಿದೆ ಎನ್ನುವುದನ್ನು ನೂರು ಸಲ ಹೇಳಿದ್ದೇನೆ. ನನ್ನ ಮತ್ತು ಡಿ.ಕೆ.ಶಿವಕುಮಾರ್‌ ನಡುವೆ ಭಿನ್ನಾಭಿಪ್ರಾಯವನ್ನು ಹುಟ್ಟುಹಾಕುವ ವಿರೋಧ ಪಕ್ಷಗಳ ಹುನ್ನಾರಕ್ಕೆ ಮಾಧ್ಯಮಗಳು ಆಯುಧವಾಗಿ ಬಳಕೆಯಾಗಬಾರದು” ಎಂದು ಆಶಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!