Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| 70ನೇ ದಿನಕ್ಕೆ ಕಾವೇರಿ ಹೋರಾಟ: ಜರ್ನಲಿಸ್ಟ್ ಕ್ಲಬ್ ಬೆಂಬಲ

ಕನ್ನಂಬಾಡಿಯಿಂದ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನದಿ ಪ್ರಾಧಿಕಾರದ ಆದೇಶ ಖಂಡಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಹೋರಾಟದ 70ನೇ ದಿನವಾದ ಸೋಮವಾರ ಮಂಡ್ಯ ಜಿಲ್ಲಾ ಜರ್ನಲಿಸ್ಟ್ ಕ್ಲಬ್ ಸದಸ್ಯರು ಭಾಗವಹಿಸಿ ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿದರು.

ಹಿರಿಯ ಪತ್ರಕರ್ತರು, ಕ್ಲಬ್ ಅಧ್ಯಕ್ಷರೂ ಆದ ನುಡಿಭಾರತಿ ಬಸವೇಗೌಡ ಮಾತನಾಡಿ, ಕಾವೇರಿ ನೀರು ಬಳಕೆ ವಿಷಯದಲ್ಲಿ ಸಂಕಷ್ಟದಲ್ಲಿರುವ ರೈತರ ಹಿತ ಕಾಪಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಸರ್ಕಾರ ಈ ವಿಷಯದಲ್ಲಿ ಸ್ಪಷ್ಟ ನಿಲುವು ತಾಳದಿರುವುದು ವಿಷಾದನೀಯ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದನ್ನು ಸ್ವಾಗತಿಸುತ್ತೇವೆ. ಆದರೆ, ಈವರೆಗೂ ನೀರು ಹರಿಸುವುದಿಲ್ಲ ಎಂದು ಸ್ಪಷ್ಟಪಡಿಸದೆ ಇಬ್ಬಗೆ ನೀತಿ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಳೆಯ ಅಭಾವದಿಂದಾಗಿ ಬೆಳೆಗಳು ಒಣಗುತ್ತಿವೆ. ರಾಜ್ಯ ಸರ್ಕಾರ ನಾಲೆಗಳಿಗೆ ನೀರು ಹರಿಸಿ ಒಣಗುತ್ತಿರುವ ಬೆಳೆಗಳ ರಕ್ಷಣೆ ಮಾಡುವ ಮೂಲಕ ಜಿಲ್ಲೆಯ ರೈತರ ಹಿತ ಕಾಪಾಡಲಿ ಎಂದರು.

ಕ್ಲಬ್ ಉಪಾಧ್ಯಕ್ಷ ಆರ್.ಮೋಹನ್ ಕುಮಾರ್ ದೇಶಹಳ್ಳಿ ಮಾತನಾಡಿ, ಯಾವ ರಾಜಕೀಯ ಪಕ್ಷಗಳು ರೈತರ ಹಿತ ಕಾಪಾಡುವಲ್ಲಿ ಬದ್ಧತೆ ತೋರಿಸಿಲ್ಲ. ಅಧಿಕಾರದಲ್ಲಿದ್ದವರು ನೀರು ಬಿಟ್ಟರೆ, ಇಲ್ಲದವರು ಪ್ರತಿಭಟನೆ ನಡೆಸಿದ್ದಾರೆಯೇ ಹೊರತು ಕಾವೇರಿ ಸಮಸ್ಯೆ ಬಗೆ ಹರಿದಿಲ್ಲ. ಯಾರಿಗೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಇಚ್ಛಾಶಕ್ತಿ, ಬದ್ಧತೆ ಇಲ್ಲ ಎಂದು ಹೇಳಿದರು.

ಸ್ವರ್ಣ ವಾಹಿನಿ ಮುಖ್ಯಸ್ಥ ಶಂಭು ಕೆ. ಕಬ್ಬನಹಳ್ಳಿ ಮಾತನಾಡಿ, ಕಾವೇರಿ ಹೋರಾಟದ ಹಿನ್ನೆಲೆಯಲ್ಲಿ ನೀಡಿದ್ದ ಬಂದ್ ಕರೆಗೆ ಜಿಲ್ಲೆಯ ಮತ್ತು ಬೆಂಗಳೂರಿನ ಜನರು ಉತ್ತಮ ಸ್ಪಂದನೆ ನೀಡಿ ಬಂದ್ ಯಶಸ್ಸು ಗೊಳಿಸಿದರು. ಹಾಗೆಯೇ ಕಾವೇರಿ ನೀರು ಹಂಚಿಕೆ ಸಂಕಷ್ಟ ಸೂತ್ರ ಸಿಗುವವರೆಗೂ ಹೋರಾಟಕ್ಕೆ ಪ್ರತಿಯೊಬ್ಬರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಹಿರಿಯ ಪತ್ರಕರ್ತ ಚಂದ್ರಶೇಖರ ದ.ಕೋ.ಹಳ್ಳಿ ಮಾತನಾಡಿ, ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಗಲು ಇರುಳು ಚಿಂತಿಸುತ್ತಾ ನಿರಂತರ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿರುವ ರೈತ ಹಿತರಕ್ಷಣಾ ಸಮಿತಿಯ ಎಲ್ಲ ಮುಖಂಡರು, ಸದಸ್ಯರು ನಿಜವಾದ ಜನಪ್ರತಿನಿಧಿಗಳು. ಚುನಾಯಿತ ಶಾಸಕರುಗಳಲ್ಲ ಎಂದರು.

ಜಿಲ್ಲಾ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಮ್, ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ಸದಸ್ಯರಾದ ಕನ್ನಡ ಸೇನೆ ಮಂಜುನಾಥ್, ಮುದ್ದೇಗೌಡ, ಇಂಡುವಾಳು ಚಂದ್ರಶೇಖರ್, ಪತ್ರಕರ್ತರಾದ ದಾಸ್ ಪ್ರಕಾಶ್, ರಮೇಶ್, ಸುರೇಶ್, ಗೌರಮ್ಮ, ಗುತ್ತಲು ಚಂದು, ಮಹಾಂತಪ್ಪ, ಸುಶೀಲಮ್ಮ, ಸುಜಾತ ಕೃಷ್ಣ, ರಮೇಶ್, ಮಂಜುಳಾ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!