Thursday, September 19, 2024

ಪ್ರಾಯೋಗಿಕ ಆವೃತ್ತಿ

ಯುದ್ಧ ಭೂಮಿಯಲ್ಲಿ ಪತ್ರಕರ್ತರು…..

✍️ ವಿವೇಕಾನಂದ ಎಚ್.ಕೆ

ರಣ ಭೂಮಿಯಲ್ಲಿ ತಮ್ಮ ಜೀವದ ಹಂಗು ತೊರೆದು ಸಾಹಸ ಮೆರೆಯುತ್ತಿರುವ ಪತ್ರಕರ್ತರು……

ಏನು ಧೈರ್ಯ, ಏನು ಸಾಹಸ,
ಏನು ತ್ಯಾಗ, ಏನು ನಿಷ್ಠೆ, ಏನು ಪತ್ರಿಕಾ ಧರ್ಮ ಪಾಲನೆ….

ಅವರಿಗೆ ತುಂಬು ಹೃದಯದಿಂದ ಅಭಿನಂದನೆಗಳು. ಯಶಸ್ವಿಯಾಗಲಿ ಮತ್ತು ಅವರಿಗೆ ವಿಶ್ವ ಶ್ರೇಷ್ಠ ಪ್ರಶಸ್ತಿಗಳು ಲಭ್ಯವಾಗಲಿ ಎಂದು ಆಶಿಸುತ್ತಾ…..

ಯುದ್ದ ಭೂಮಿಯಿಂದ ನೇರ ಪ್ರಸಾರ ಮಾಡಿ……

ಮಿಸೈಲ್ ಗಳ ಉಡಾವಣೆಯಿಂದ ಪ್ರಾರಂಭಿಸಿ ಅವು ಹಾರಿ ಆಕಾಶದಲ್ಲಿ ಚಿತ್ತಾರ ಬಿಡಿಸುತ್ತಾ ಜನ ವಸತಿ ಕಟ್ಟಡದ ಮೇಲೆ ಬಿದ್ದು ಅದು ನಿಧಾನವಾಗಿ ಕುಸಿದು ನೆಲಸಮವಾಗಿ ಹೊಗೆ ಮತ್ತು ಧೂಳು ದಟ್ಟವಾಗಿ ಆಕಾಶದಲ್ಲಿ ಹಾರಾಡುವುದನ್ನು ಇಡೀ ವಿಶ್ವಕ್ಕೇ ತೋರಿಸಿ…..

ಆ ಕುಸಿದ ಕಟ್ಟಡದಿಂದ ಕೇಳುವ ಆರ್ತನಾದ, ರಕ್ತಸಿಕ್ತ ದೇಹಗಳು, ಚೆಲ್ಲಾಡಿದ ಮನುಷ್ಯರ ಅಂಗಾಂಗಗಳು, ರುಂಡ ಮುಂಡ ಬೇರ್ಪಟ್ಟ ಮಕ್ಕಳ ಶವಗಳು ಎಲ್ಲವನ್ನೂ ಸಾಧ್ಯವಾದಷ್ಟು ನೇರವಾಗಿ ತೋರಿಸಿ……

ಮಹಿಳೆಯರ ಮೇಲಿನ ಅತ್ಯಾಚಾರ, ಸೈನಿಕರ ಶಿರಚ್ಛೇದನ, ಮಕ್ಕಳ ಹತ್ಯೆ, ನೀರಿನ ಹಾಹಾಕಾರ, ಔಷಧಿಗಾಗಿ ಅಂಗಲಾಚುವಿಕೆ, ಸಾಮಾನ್ಯರ ಕಣ್ಣೀರಿನ ಕೊಡಿ ಎಲ್ಲವನ್ನೂ ತೋರಿಸಿ……

ಹಾಗೆಯೇ ಇಸ್ರೇಲಿಗರನ್ನು, ಹಮಾಸ್ ಹೋರಾಟಗಾರರನ್ನು, ಪ್ಯಾಲೆಸ್ಟೈನ್ ಜನರನ್ನು ಮಾತನಾಡಿಸಿ, ಸಂದರ್ಶಿಸಿ, ಪ್ರಶ್ನಿಸಿ ಅವರುಗಳನ್ನು ಮತ್ತಷ್ಟು ರೊಚ್ಚಿಗೆಬ್ಬಿಸಿ….

ಏಕೆಂದರೆ ನೀವು ಪತ್ರಕರ್ತರು. ಸುದ್ದಿ ಪ್ರಕಟಿಸುವುದು ನಿಮ್ಮ ಧರ್ಮ. ಹೊಡೆದಾಡುವುದು ಸೈನಿಕ ಧರ್ಮ. ಅದನ್ನು ವೀಕ್ಷಿಸುವುದು ನಮ್ಮ ಕರ್ಮ…….

ಶಾಂತಿಗಾಗಿ ಜೀವ ಕೊಡುವವರು, ಸ್ವಾತಂತ್ರ್ಯಕ್ಕಾಗಿ ಜೀವ ಕೊಡುವವರು, ದೇಶಕ್ಕಾಗಿ ಜೀವ ಕೊಡುವವರು, ಧರ್ಮಕ್ಕಾಗಿ ಜೀವ ಕೊಡುವವರು, ಪ್ರೀತಿಗಾಗಿ ಜೀವ ಕೊಡುವವರ ಮಧ್ಯೆ ಸುದ್ದಿಗಾಗಿ ಜೀವ ಕೊಡುವವರು ಇರಲಿ…….

ಕಾಶ್ಮೀರಿ ಪಂಡಿತರ ಹತ್ಯೆಯೂ ಒಂದೇ, ಉಕ್ರೇನ್ ಜನರ ಹತ್ಯೆಯೂ ಒಂದೇ, ಮಣಿಪುರಿಗಳ ಹತ್ಯೆಯೂ ಒಂದೇ, ಯಹೂದಿಗಳ ಹತ್ಯೆಯೂ ಒಂದೇ, ಪ್ಯಾಲೆಸ್ಟೈನಿಗಳ ಹತ್ಯೆಯೂ ಒಂದೇ ಎನ್ನುವವರು ಸಾಮಾನ್ಯ ನಾಗರಿಕರು. ಅವು ಭಿನ್ನ, ಅದಕ್ಕೆ ಕಾರಣಗಳು ಭಿನ್ನ. ಇಲ್ಲಿ ಇವರು ಸರಿ, ಅಲ್ಲಿ ಅವರು ತಪ್ಪು, ನಮ್ಮದು ಮಾತ್ರ ನೇರ ಪ್ರಸಾರ ಎನ್ನುವವರು ಯುದ್ಧ ಭೂಮಿಯ ಪತ್ರಕರ್ತರು……

ಶಾಂತಿ ಅಹಿಂಸೆ ಎಂಬುದು ಮಾನವ ಸಂಸ್ಕೃತಿಯಾಗಿ ಉಳಿದರೆ ಮಾತ್ರ ವಿಶ್ವ ನೆಮ್ಮದಿಯಾಗಿ ಇರಲು ಸಾಧ್ಯ. ಮುಖ್ಯವಾಗಿ ರಾಜಕಾರಣಿಗಳು, ಧಾರ್ಮಿಕ ಮುಖಂಡರು, ಪತ್ರಕರ್ತರು ತಮ್ಮ ವೈಯಕ್ತಿಕ ಸ್ವಾರ್ಥ ತ್ಯಜಿಸಿ ಜನರ ಹಿತಾಸಕ್ತಿಗಾಗಿ ಕೆಲಸ ಮಾಡದ ಹೊರತು ಮಾನವ ಜನಾಂಗ ಸಂತೋಷದಿಂದ ಇರಲು ಸಾಧ್ಯವಿಲ್ಲ…

ಮನುಷ್ಯ ಸಾಹಸ ಜೀವಿಯಾಗಬೇಕು ಎಂಬುದು ಪ್ರಶಂಸನೀಯ. ಪತ್ರಕರ್ತರು ಯುದ್ಧ ಭೂಮಿಯ ನೈಜ ವರದಿ ನೀಡಬೇಕು ಎಂಬುದು ಅಷ್ಟೇ ಉತ್ತಮ ನಡೆ. ಆದರೆ ವೃತ್ತಿ ಧರ್ಮ ಮೀರಿ ಮಾನವ ಧರ್ಮ ಪಾಲನೆಯಾಗಬೇಕು. ಸುದ್ದಿ ಪ್ರಸಾರವು ಸೂಕ್ಷ್ಮ ವಿವೇಚನೆ ಹೊಂದಿರಬೇಕು. ಅದು ಸದಾ ಶಾಂತಿ ಅಹಿಂಸೆಯ ಪರವಾಗಿಯೇ ಇರಬೇಕು. ಸಾವಿಗೆ ಸವಾಲು ಹಾಕುವುದು ಮನುಷ್ಯ ಜನಾಂಗದ ಹಿತಾಸಕ್ತಿಯನ್ನು ಕಾಪಾಡುವಂತಿರಬೇಕೆ ಹೊರತು ಯುದ್ಧ ಭೂಮಿಯ ಭಯಾನಕ ದೃಶ್ಯಗಳು ಹಿಂಸೆಯನ್ನು ಪ್ರಚೋದಿಸುವಂತೆ ಇರಬಾರದು. ಸತ್ಯವನ್ನು ಸಹ ಪ್ರೀತಿಯ ಮುಖವಾಡ ತೊಡಿಸಿಯೇ ಹೇಳಬೇಕು. ಇಲ್ಲದಿದ್ದರೆ ಸತ್ಯವೂ ಅಪಾಯಕಾರಿ ದ್ವೇಷವನ್ನು ಉಂಟುಮಾಡಬಹುದು. ಈ ವಿಷಯದಲ್ಲಿ ಪತ್ರಕರ್ತರ ಜವಾಬ್ದಾರಿ ಮುಖ್ಯವಾಗುತ್ತದೆ……..

ಯಾವುದೇ ವರದಿಗಾರಿಕೆಗೆ ಮಾನವೀಯ ಮುಖವಾಡ ಇಲ್ಲದಿದ್ದರೆ ಅದು ನಿಷ್ಪ್ರಯೋಜಕ ಮತ್ತು ಆಘಾತಕಾರಿ. ಯುದ್ಧದ ವರದಿಯೂ ಶಾಂತಿಯ ಪ್ರೇರೇಪಣೆಯಾಗಬೇಕೆ ಹೊರತು ಬಲಾಢ್ಯರ ವಿಜೃಂಭಣೆಯಾಗಬಾರದು…..

ವೈದ್ಯರ, ಶಿಕ್ಷಕರು, ವಕೀಲರು, ಲೆಕ್ಕಪರಿಶೋಧಕರು, ಎಂಜಿನಿಯರುಗಳು, ವಾಹನ ಚಾಲಕರು, ಅಡಿಗೆ ತಯಾರಕರು, ಪೂಜಾರಿ, ಮೌಲ್ವಿ, ಫಾದರ್ ಗಳು ಯಾರೇ ಆಗಿರಲಿ ತಮ್ಮ ವೃತ್ತಿ ಧರ್ಮವನ್ನು ಮಾನವನ ಶಾಂತಿ ಅಹಿಂಸೆಗೆ ಪೂರಕವಾಗಿ ಕೆಲಸ ಮಾಡದಿದ್ದರೆ ಅದು ಅಧರ್ಮ ಮತ್ತು ವಿಶ್ವಾಸ ದ್ರೋಹ. ಆ ನೆಲೆಯಲ್ಲಿ ಯುದ್ದ ಭೂಮಿಯ ವರದಿಗಾರಿಕೆ ಕೇವಲ ನೇರ ಪ್ರಸಾರಕ್ಕೆ ಸೀಮಿತವಾಗದೆ ಇನ್ನುಳಿದ ವಿಶ್ವಕ್ಕೆ ಶಾಂತಿಯ ಪಾಠವಾಗಲಿ. ಮನುಷ್ಯ ಮನುಷ್ಯರ ನಡುವಿನ ದ್ವೇಷ ಕಡಿಮೆಯಾಗಿ ಪ್ರೀತಿ ಉದ್ಭವವಾಗಲಿ ಎಂದು ಆಶಿಸುತ್ತಾ…..

ಪತ್ರಕರ್ತರು ಕ್ಷೇಮವಾಗಿ ಯುದ್ದ ಭೂಮಿಯಿಂದ ಮರಳಲಿ ಯುದ್ದ ನಿಲ್ಲಲಿ………….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!