ಭಾರತೀನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕ ಕೆ.ಎಂ.ಉದಯ್ ಅವರು ಭೇಟಿನೀಡಿ ಆಸ್ಪತ್ರೆಯ ಕೊಠಡಿಗಳನ್ನು ವೀಕ್ಷಿಸಿ ವೈದ್ಯರ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳು ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಬೇಕು. ಆಸ್ಪತ್ರೆಯಲ್ಲಿ ಏನೇ ಸಮಸ್ಯೆ ಇದ್ದರೂ ಮಾಹಿತಿ ನೀಡಬೇಕೆಂದು ತಿಳಿಸಿದರು.
ಗ್ರಾಮಾಂತರ ಪ್ರದೇಶದ ಜನರಿಗೆ ಉತ್ತಮ ಆರೋಗ್ಯ ಒದಗಿಸಬೇಕೆಂಬ ನಿಟ್ಟಿನಲ್ಲಿ ಕ್ಷೇತ್ರದ ಮಾಜಿ ಶಾಸಕರ ಅವಧಿಯಲ್ಲಿ ಆಸ್ಪತ್ರೆಯ ವೈದ್ಯರ ಮತ್ತು ಸಿಬ್ಬಂದಿಗಳ ವಸತಿ ಗೃಹ ಅಭಿವೃದ್ದಿ, ಸುಸಜ್ಜಿತ ಡ್ರೈನೇಜ್ ಮತ್ತು ಶವಗಾರದ ಕೊಠಡಿ ಅಭಿವೃದ್ದಿ ಸೇರಿದಂತೆ ಆಸ್ಪತ್ರೆ ಒಳಾಂಗಣದ ಅಭಿವೃದ್ದಿಗೆ 2.5 ಕೋಟಿ ರೂ ವೆಚ್ಚವನ್ನು ಬಿಡುಗಡೆಗೊಳಿಸಿದ್ದರು. ಈ ಎಲ್ಲಾ ಕಾಮಗಾರಿಗಳು ಪ್ರಗತಿ ಹಂತದಲ್ಲಿರುವುದನ್ನು ನೂತನ ಶಾಸಕ ಕೆ.ಎಂ.ಉದಯ್ ವೀಕ್ಷಿಸಿ ಪರಿಶೀಲನೆ ನಡೆಸಿದರು.

ಬಳಿಕ ಆಸ್ಪತ್ರೆಯ ಹೆರಿಗೆ ವಾರ್ಡ್ ಗೆ ಭೇಟಿ ನೀಡಿ ಇಲ್ಲಿ ಎಲ್ಲಾ ರೀತಿಯ ಸೌಲಭ್ಯಗಳಿದೆಯೇ ಎಂದು ಆಡಳಿತ ವೈದ್ಯಾಧಿಕಾರಿ ಡಾ.ಜಗದೀಶ್ ಅವರನ್ನು ಪ್ರಶ್ನಿಸಿದ ಅವರು ಸೌಲಭ್ಯಗಳಿಲ್ಲದಿದ್ದರೆ ನನ್ನ ಗಮನಕ್ಕೆ ತರಬೇಕೆಂದು ಹೇಳಿದರು.
ಕಾರ್ಖಾನೆಗೆ ಭೇಟಿ
ಶ್ರೀಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿ ಯಂತ್ರೋಪಕರಣಗಳನ್ನು ಪರಿಶೀಲನೆ ನಡೆಸಿದರು.
ಕಾರ್ಖಾನೆಯ ಸಕ್ಕರೆ ಉತ್ಪಾದನಾ ಸ್ಥಳಕ್ಕೂ ಧಾವಿಸಿ ಸಕ್ಕರೆ ಉತ್ಪನ್ನವಾಗುವುದರ ಬಗ್ಗೆ ಮಾಹಿತಿ ಪಡೆದು ಕೊಂಡರು. ಆಡಳಿತ ಮಂಡಳಿಯವರಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಸಕಾಲಕ್ಕೆ ಹಣ ಪಾವತಿ ಮಾಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಶ್ರೀಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಮಣಿ, ಡಿಜಿಎಂ ರವಿ, ಆಡಳಿತ ಮಂಡಳಿಯ ಅಧಿಕಾರಿಗಳಾದ ನಿತೀಶ್, ನಿಂಗಪ್ಪ ಸೇರಿದಂತೆ ಇತರರಿದ್ದರು.




