Wednesday, September 18, 2024

ಪ್ರಾಯೋಗಿಕ ಆವೃತ್ತಿ

ಬೆಳಗಾವಿಯಲ್ಲಿ ಪುಂಡಾಟಿಕೆ ನಡೆಸುವ ಎಂಇಎಸ್ ನಿಷೇಧಿಸಿ : ಕರವೇ ಪ್ರತಿಭಟನೆ

ಬೆಳಗಾವಿಯಲ್ಲಿ ಶಾಂತಿ ಕದಡುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಸಂಘಟನೆಯನ್ನು  ಕೂಡಲೇ ನಿಷೇಧಿಸಿ, ಅದರ ಮುಖಂಡರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಇಂದು ಟಿ.ಎ.ನಾರಾಯಣಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಮಂಡ್ಯ ಜಿಲ್ಲೆ ಘಟಕದ ವತಿಯಿಂದ  ಮಂಡ್ಯನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮಂಡ್ಯನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ ಬಳಿ ಜಮಾಯಿಸಿದ ಪ್ರತಿಭಟನಕಾರರು ಮಹಾರಾಷ್ಟ್ರ ಸರ್ಕಾರ ಹಾಗೂ ಎಂಇಎಸ್ ಸಂಘಟನೆಯ ಬ್ಯಾನರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಮಹಾರಾಷ್ಟ್ರದ ಕನ್ನಡಿಗರ ರಕ್ಷಣೆಗೆ ಮುಖ್ಯಮಂತ್ರಿಗಳು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಬೇಕು. ಈ ಕುರಿತು ಪ್ರಧಾನ ಮಂತ್ರಿಗಳ ಮಧ್ಯಪ್ರವೇಶಕ್ಕೆ ಆಗ್ರಹಿಸಬೇಕು. ಬೆಳಗಾವಿ ವಿವಾದವನ್ನು ಕೆಣಕಿ ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ, ಕನ್ನಡಿಗರ ಸಂಸ್ಥೆಗಳ ಮೇಲೆ, ಕನ್ನಡಿಗರ ಆಸ್ತಿ-ಪಾಸ್ತಿಗಳ ಮೇಲೆ ದಾಳಿ ನಡೆಸುತ್ತಿರುವ ಗೂಂಡಾಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಭಾಷಾವಾರು ಪ್ರಾಂತ್ಯ ವಿಂಗಡಣೆಯ ನಂತರ ಕರ್ನಾಟಕ, ಅನೇಕ ಕನ್ನಡದ ಪ್ರದೇಶಗಳನ್ನು ಕಳೆದುಕೊಂಡರೂ ರಾಷ್ಟ್ರೀಯ ಐಕ್ಯತೆಗೆ ಭಂಗಬರಬಾರದೆಂದು ಆದ ಅನ್ಯಾಯವನ್ನು ಸಹಿಸಿಕೊಂಡು ಬಂದಿದೆ. ಆದರೆ ಅಪ್ಪಟ ಕನ್ನಡದ ನೆಲವಾದ ಬೆಳಗಾವಿ ತಮಗೆ ಸೇರಬೇಕು ಎಂದು ಮಹಾರಾಷ್ಟ್ರ ದಶಕಗಳಿಂದ ತಗಾದೆ ತೆಗೆಯುತ್ತ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಲು ಕಾರಣವಾಗಿದೆ ಎಂದು ಆರೋಪಿಸಿದರು.

ಮಹಾರಾಷ್ಟ್ರದ ಒತ್ತಡದಿಂದಲೇ ಕೇಂದ್ರ ಸರ್ಕಾರದಿಂದ ರಚಿಸಲ್ಪಟ್ಟ ಮೆಹರ್ ಚಂದ್ ಮಹಾಜನ್ ಅವರ ಏಕಸದಸ್ಯ ಆಯೋಗ ಬೆಳಗಾವಿ ಕರ್ನಾಟಕಕ್ಕೆ ಸೇರಬೇಕು ಎಂದು ತೀರ್ಪು ನೀಡಿದೆ, ಆದರೆ ಇದನ್ನು ಒಪ್ಪದ ಮಹಾರಾಷ್ಟ್ರ ಸರ್ಕಾರ ಮತ್ತು ಅಲ್ಲಿನ ರಾಜಕಾರಣಿಗಳು ದಶಕಗಳಿಂದ ಬೆಳಗಾವಿಯಲ್ಲಿ ಕನ್ನಡಿಗರು ಮತ್ತು ಮರಾಠಿಗರ ನಡುವೆ ಸಂಘರ್ಷದ ವಾತಾವರಣ ನಿರ್ಮಿಸಲು ಯತ್ನಿಸುತ್ತಿದ್ದಾರೆ. ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಎಂಬ ಭಾಷಾಂಧ ಗೂಂಡಾ ಸಂಘಟನೆಗೆ ಹಣಕಾಸಿನ ಬೆಂಬಲ ನೀಡಿ ಗಡಿಭಾಗದಲ್ಲಿ ದಾಂಧಲೆ ನಡೆಸಲು, ಕನ್ನಡಿಗರ ಮೇಲೆ ದಾಳಿ ನಡೆಸಲು ಕಾರಣರಾಗಿದ್ದಾರೆ ಎಂದು ದೂರಿದರು.

ಬೆಳಗಾವಿ ವಿವಾದ ಈಗ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ಬಾಕಿ ಇದೆ. ಇಂಥ ಸಂದರ್ಭದಲ್ಲಿ ಈ ನೆಲದ ಕಾನೂನಿಗೆ ಗೌರವ ನೀಡಿ, ತ್ವರಿತಗಾಗಿ ಕಾಯುವ ಬದಲು ಬೆಳಗಾವಿಯಲ್ಲಿ ಸಂಘರ್ಷ ಮೂಡಿಸಲು ಯತ್ನಿಸಲಾಗುತ್ತಿದೆ. ಇದರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಮೊದಲಿನಿಂದಲೂ ಹೋರಾಡುತ್ತ ಬಂದಿದ್ದು, ಬೆಳಗಾವಿಯಲ್ಲಿ ಶಾಂತಿಸ್ಥಾಪನೆ ದೃಷ್ಟಿಯಿಂದ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕೆಂಬ ಒತ್ತಾಯಿಸಿದರು.

ಮಹಾರಾಷ್ಟ್ರದ ಬಹುತೇಕ ಎಲ್ಲ ರಾಜಕೀಯ ಪಕ್ಷಗಳೂ ಕನ್ನಡಿಗರ ವಿರುದ್ಧ ನಡೆಯುತ್ತಿರುವ ದಾಳಿಗಳಿಗೆ ಪ್ರಚೋದನೆ ನೀಡುತ್ತಿವೆ, ಅಲ್ಲದೇ ಶಿವಸೇನೆಯ ಎರಡೂ ಬಣಗಳು ಮತ್ತು ಎನ್ ಸಿಪಿ, ಎಂ.ಎನ್.ಎಸ್ ಪಕ್ಷಗಳು ವಿಶೇಷವಾಗಿ ಈ ಕುಕೃತ್ಯಗಳಲ್ಲಿ ನೇರವಾಗಿ ಶಾಮೀಲಾಗಿವೆ. ಅವುಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಕರವೇ ರಾಜ್ಯ ಉಪಾಧ್ಯಕ್ಷ ಎಂ.ಎಸ್.ಚಿದಂಬರ್, ಜಿಲ್ಲಾಧ್ಯಕ್ಷ ಕೆ.ಟಿ.ಶಂಕರೇಗೌಡ, ಮುಖಂಡರಾದ ಅಶೋಕ್, ಕಾಂತರಾಜು, ಯೋಗೇಶ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!