Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೆಂಪೇಗೌಡರ ಅಭಿವೃದ್ಧಿಯ ಚಿಂತನೆ ಎಲ್ಲರಿಗೂ ಮಾದರಿ: ಚಲುವರಾಯಸ್ವಾಮಿ

ನಾಡಪ್ರಭು ಕೆಂಪೇಗೌಡರವರು ಉತ್ತಮ ಆಡಳಿತ ಹಾಗೂ ಅಭಿವೃದ್ಧಿಯ ಚಿಂತನೆಯಿಂದಾಗಿ ಬೆಂಗಳೂರು ಮಹಾನಗರವನ್ನು ಬಹಳ ಅಚ್ಚುಕಟ್ಟಾಗಿ ನಿರ್ಮಾಣವಾಗಿದೆ. ಅವರ ಉತ್ತಮ ಆಡಳಿತ ಹಾಗೂ ಅಭಿವೃದ್ಧಿಯ ಚಿಂತನೆ ಎಲ್ಲರಿಗೂ ಮಾದರಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ತಿಳಿಸಿದರು.

ಮಂಡ್ಯ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ಮಂಡ್ಯನಗರ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಕೆಂಪೇಗೌಡರ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.

ಪ್ರತಿ ವರ್ಷವೂ ಸರ್ಕಾರದಿಂದ ವಿವಿಧ ಜಯಂತಿಯನ್ನು ಆಚರಿಸುತ್ತಿದ್ದೂ, ನಮ್ಮ ನಾಡಿನ ಅಭಿವೃದ್ಧಿಗೆ ಶ್ರಮಿಸಿದ ವಿವಿಧ ಮಹನೀಯರು ನೀಡಿದ ಕೊಡುಗೆಗೆ ಗೌರವ ಸಲ್ಲಿಸಿ ಮುಂದಿನ ಪೀಳಿಗೆಗೆ ತಿಳಿಸುವುದು ಜಯಂತಿ ಆಚರಣೆಯ ಉದ್ದೇಶವಾಗಿದೆ. ಬೆಂಗಳೂರು ನಗರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದೂ, ಇದಕ್ಕೆ ಕಾರಣ ಕೆಂಪೇಗೌಡರವರ ದೂರದೃಷ್ಟಿ ಹಾಗೂ ರೂಪಿಸಿದ ಯೋಜನೆಗಳು ಎಂದರು.

ನಾಡಪ್ರಭು ಕೆಂಪೇಗೌಡರು ತಮ್ಮ ಆಳ್ವಿಕೆಯ ಅವಧಿಯಲ್ಲಿ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯನ್ನು ನೋಡಿ ಪ್ರಭಾವಿತರಾಗಿ, ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡಬೇಕು ಎಂದು ಪಣತೊಟ್ಟು ಬೆಂಗಳೂರು ನಗರವನ್ನು ನಿರ್ಮಿಸಿದರು. ಅವರ ದೃಷ್ಟಿಕೋನ ಎಲ್ಲಾ ವರ್ಗದ ಜನರಿಗೆ ಒಳಿತು ಹಾಗೂ ಅನುಕೂಲವಾಕರವಾಗಿತ್ತು.ಬೆಂಗಳೂರಿನಲ್ಲಿ ಸಮೃದ್ಧಿಯಾಗಿ ಕೆರೆ ಕಟ್ಟೆಗಳ ನಿರ್ಮಾಣದ ಜೊತೆಗೆ ವ್ಯಾಪಾರಕ್ಕೆ ಉತ್ತಮ ಅವಕಾಶ ಕಲ್ಪಿಸಿದ್ದಾರೆ. ನೂರಾರು ವರ್ಷಗಳ ಕಾಲ ಜನರಿಗೆ ಉಪಯೋಗವಾಗುವಂತೆ ಶ್ರಮಿಸಿದ್ದಾರೆ ಎಂದು ತಿಳಿಸಿದರು.

ಪ್ರತಿಯೊಬ್ಬರಲ್ಲೂ ನಮ್ಮ ದೇಶ, ನಮ್ಮ ನಾಡು ಎಂಬ ಮನೋಭಾವನೆ ಬೆಳೆಯಬೇಕು. ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರ ಕೊಡುಗೆ ಇರಬೇಕು. ಸಮಾಜಮುಖಿ ಕೆಲಸ ಮಾಡುವವರನ್ನು ಪ್ರೋತ್ಸಾಹಿಸಿ ಅವರೊಂದಿಗೆ ಕೈ ಜೋಡಿಸಿ ಎಂದರು.

ರೈತರು ಬೆಳೆದ ಬೆಳೆ ಮಾರಾಟ ಮಾಡಲು ಸ್ಥಳ ಬೇಕಿತ್ತು, ಬೆಂಗಳೂರಿನಲ್ಲಿ ಸ್ಥಳ ಮಾಡಿಕೊಟ್ಟ ವ್ಯಾಪರಕ್ಕೆ ಉತ್ತಮ ಪೇಟೆಗಳನ್ನು ನಿರ್ಮಾಣ ಮಾಡಿಕೊಟ್ಟವರು ನಾಡಪ್ರಭು ಕೆಂಪೇಗೌಡರು ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಅವರು ತಿಳಿಸಿದರು.

ಸಮುದ್ರಕ್ಕಿಂತ 3500 ಅಡಿ ಎತ್ತರದಲ್ಲಿದ್ದ ಬೆಂಗಳೂರನ್ನು ರಾಜಧಾನಿಯಾಗಿ ಆಯ್ಕೆ ಮಾಡಿ ಹಲವಾರು ಸೌಲಭ್ಯಗಳನ್ಜು ಒದಗಿಸಿ ಲಕ್ಷಾಂತರ ಜನರು ಜೀವನ ನಡೆಸುವ ರೀತಿ ಸುಂದರವಾಗಿ ನಿರ್ಮಾಣ ಮಾಡಿದ ಹೆಗ್ಗಳಿಕೆ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ ಎಂದರು.

ಪಾಕ್೯ಗಳ ಅಭಿವೃದ್ಧಿಗಾಗಿ ರೂ 2 ಕೋಟಿ ಬಿಡುಗಡೆಯಾಗಿದ್ದು, ರೈಲ್ವೆ ನಿಲ್ದಾಣದ ಹತ್ತಿರ ಇರುವ ಕೆಂಪೇಗೌಡ ಪಾಕ್೯ನ್ನು ಅಭಿವೃದ್ಧಿ ಪಡಿಸಿ ಮುಂದಿನ ವರ್ಷದೊಳಗೆ ಉದ್ಘಾಟನೆಗೆ ಸಿದ್ಧಪಡಿಸಲಾಗುವುದು ಎಂದರು.

ಸಕ್ಕರೆ ಕಾರ್ಖಾನೆಗೆ ಹಿಂದಿನ ವರ್ಷ 50 ಕೋಟಿ ರೂ ಅನುದಾನವನ್ನು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರಕ್ಕೆ ಮನವಿ ಸಲ್ಲಿಸಿ, ಕಾರ್ಖಾನೆಗೆ ಒದಗಿಸಿ ಅಭಿವೃದ್ಧಿಪಡಿಸಿದ್ದಾರೆ. ಈ ವರ್ಷ ಕಾರ್ಖಾನೆ ಉತ್ತಮವಾಗಿ ನಡೆಯುತ್ತದೆ ಎಂದರು.

ಸರ್ಕಾರ ಬೆಂಗಳೂರಿನ ಹತ್ತಿರ ಇನ್ನೊಂದು ವಿಮಾನ ನಿಲ್ದಾಣ ನಿರ್ಮಿಸಲು ಚಿಂತಿಸುತ್ತಿದ್ದು, ಮಂಡ್ಯ ಅಥವಾ ಮದ್ದೂರು ಭಾಗದಲ್ಲಿ ಉತ್ತಮ ಸ್ಥಳವನ್ನು ಗುರುತಿಸಿ ನೀಡಲು ಸಿದ್ಧವಿದ್ದೇವೆ. ಈ ಬಗ್ಗೆ ಕೇಂದ್ರ ಸಚಿವರೊಂದಿಗೂ ಚರ್ಚಿಸಲಾಗುವುದು ಎಂದರು.

ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಮಾತನಾಡಿ, ಈ ಹಿಂದೆ ರಾಜ ಮಹರಾಜರು ಹಾಗೂ ಮಹಾನ್ ವ್ಯಕ್ತಿಗಳು ಸಮಾಜದಲ್ಲಿ ನಮ್ಮ ಜೀವಿತ ಅವಧಿಯಲ್ಲಿ ಸಮಾಜಕ್ಕೆ ಉಪಯುಕ್ತವಾಗುವ ಕೆರೆ, ಕಟ್ಟೆ, ಕಾಲುವೆ, ಮರ ಗಿಡಗಳನ್ನು ನೆಟ್ಟಿ ಕೊಡುಗೆ ನೀಡಿದರೆ ಜೀವನ ಸಾರ್ಥಕವಾಗುತ್ತದೆ ಎಂದು ಭಾವಿಸುತ್ತಿದ್ದರು. ಇಂದಿನ ಜನರು ಸಹ ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಳ್ಳಬೇಕು ಎಂದರು.

ಕೆಂಪೇಗೌಡರ ಚರಿತ್ರೆ ತಿಳಿಸಿದ ಸ್ವಾಮೀಜಿ

ಕೊಮ್ಮೇರಹಳ್ಳಿ ಆದಿಚುಂಚನಗಿರಿ ಶಾಖಾ ಮಠದ ಪುರುಷೋತ್ತಮಾನಂದ ಸ್ವಾಮೀಜಿ ಮಾತನಾಡಿ, ನಾಡಪ್ರಭು ಕೆಂಪೇಗೌಡ ಅವರು ಅವರ ತಂದೆ ಜೊತೆಯಲ್ಲಿ ವಿಜಯನಗರ ಸಾಮ್ರಾಜ್ಯಕ್ಕೆ ಹೋದಾಗ ಅಲ್ಲಿಯ ಐಶ್ವರ್ಯ, ಬೀದಿ ಬೀದಿಗಳಲ್ಲಿ ಇದ್ದಂತಹ ಚಿನ್ನ ಬೆಳ್ಳಿಗಳನ್ನು ಮಾರಾಟ, ಸಮೃದ್ಧವಾದ ಆಸ್ತಿಯನ್ನು ಕಂಡು ಇಂತಹ ಒಂದು ನಗರವನ್ನು ನಾನು ನಮ್ಮ ಪ್ರದೇಶದಲ್ಲಿ ಕಟ್ಟಬೇಕು ಎಂದು ಮನದಟ್ಟು ಮಾಡಿಕೊಂಡರು.

ಎಷ್ಟೋ ಪ್ರದೇಶಗಳನ್ನು ನೋಡಿ ಯಾವುದು ಕೂಡ ಸರಿ ಅನಿಸದೆ ಇದ್ದಾಗ ಬೆಂದಕಾಳೂರು ಎಂಬ ಗ್ರಾಮವನ್ನು ಆಯ್ಕೆ ಮಾಡಿಕೊಂಡು ಬೆಂಗಳೂರು ನಿರ್ಮಾಣಕ್ಕೆ ಮುಂದಾಗುತ್ತಾರೆ. ಬೆಂಗಳೂರು ನಗರ ವನ್ನು ನಿರ್ಮಿಸಿ 4 ದಿಕ್ಕಿನಲ್ಲೂ 4 ಗೋಪುರಗಳನ್ನು ಕಟ್ಟಿಸುತ್ತಾರೆ ನಾಡಿನ ಎಲ್ಲಾ ಜನರಿಗೂ ಎಲ್ಲಾ ಜನಾಂಗದ ಬಂಧುಗಳಿಗೂ 54 ಪೇಟೆ ಗಳನ್ನು ನಿರ್ಮಾಣ ಮಾಡುತ್ತಾರೆ. ಆ ಪೇಟೆಗಳಲ್ಲಿ ಆಯಾ ಜನಾಂಗದವರು ವ್ಯವಹಾರ ವ್ಯಾಪಾರ ಮಾಡುವುದಕ್ಕೆ ಅನುವು ಮಾಡಿ ಕೊಟ್ಟರು ಮತ್ತು ಸರ್ವರಿಗೂ ಸುಖ ಬಾಳು ಸರ್ವರಿಗೂ ಸಮ ಬಾಳು ನೀಡಿದರು.

ಜನರಿಗೆ ನೀರು ಒದಗಿಸಲು ನೂರಾರು ಕೆರೆ ಕಟ್ಟೆ ಬಾವಿಗಳನ್ನು ಮಾಡಿದರು, ಎಲ್ಲಾ ಜನರಿಗೂ ದೇವಾಲಯಗಳನ್ನು ನಿರ್ಮಾಣ ಮಾಡಿದರು. ಜನರಿಗೆ ಓಡಾಡುವುದಕ್ಕೆ ವಾಯು ವಿಹಾರಕ್ಕಾಗಿ ವಿವಿಧ ಪಾರ್ಕ್ ನ್ನು ಕೂಡ ನಿರ್ಮಿಸಿದರು.

ಸಾಧಕರಿಗೆ ಸನ್ಮಾನ 

ಇದೇ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜಸೇವೆ,ಸಂಘಟನೆಯ ವಿಭಾಗದಿಂದ ಜ್ಯೋತಿ ನಾಗಣ್ಣಗೌಡ, ರೈತ ಚಳವಳಿ ನಾಯಕ ಎ.ಎಲ್. ಕೆಂಪುಗೌಡ, ಸಮಾಜ ಸೇವೆ, ಯುವ ಸಂಘಟನೆ ಕ್ಷೇತ್ರದಿಂದ ತಗ್ಗಳ್ಳಿ ವೆಂಕಟೇಶ್, ರಕ್ತದಾನ ಶಿಬಿರ, ಸಂಘಟನೆ ಕ್ಷೇತ್ರದಿಂದ ಎನ್ ಕೆ ಯುವ ಬ್ರಿಗೇಡ್, ಕ್ರೀಡಾ ಕ್ಷೇತ್ರ- ಅರವಿಂದ್ ಎ ಅವರಿಗೆ ಸನ್ಮಾನ ಮಾಡಲಾಯಿತು.

ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ

ತದನಂತರ ಜಿಲ್ಲಾ ಮಟ್ಟದ ಕೆಂಪೇಗೌಡ ಜಯಂತಿ ಆಚರಣೆ ಅಂಗವಾಗಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಬಹುಮಾನ-ಮದ್ದೂರು ತಾಲೂಕು ಪೂರ್ಣ ಪ್ರಜ್ಞಾ ಕಾನ್ವೆಂಟ್ ಶಾಲೆಯ ಲಿಖಿತಾರಾಜು, ದ್ವಿತೀಯ ಬಹುಮಾನ-ಪಾಂಡವಪುರ ತಾಲೂಕು ಎಲ್ ಕೆ ಆರ್ ಸಿಬಿಎಸ್ಸಿ ಶಾಲೆಯ ಪ್ರಜ್ಞಾ, ತೃತೀಯ ಬಹುಮಾನ- ಮಂಡ್ಯ ಉತ್ತರ ವಲಯದ ದೊಡ್ಡಗರುಡನಹಳ್ಳಿ ಸರ್ಕಾರಿ ಪ್ರೌಢಶಾಲೆ ಆಶಾ ಅವರಿಗೆ ಬಹುಮಾನ ವಿತರಿಸಲಾಯಿತು.

ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಪ್ರಥಮ ಬಹುಮಾನ- ಶ್ರೀರಂಗಪಟ್ಟಣ ತಾಲೂಕು ಅರಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದೀಪಿಕಾ ಜಿ.ಕೆ, ದ್ವಿತೀಯ ಬಹುಮಾನ- ಮದ್ದೂರು ತಾಲೂಕು ಶಿವಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಿಶನ್ ಸಿ.ಎನ್ ಅವರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಡಾ ಅಧ್ಯಕ್ಷ ನಹೀಮ್, ಜಿಲ್ಲಾಧಿಕಾರಿ ಡಾ ಕುಮಾರ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಕ್ ತನ್ವಿರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್ ಯತೀಶ್, ಅಪರ ಜಿಲ್ಲಾಧಿಕಾರಿ ಡಾ. ಹೆಚ್. ಎಲ್. ನಾಗರಾಜು, ಉಪವಿಭಾಗಾಧಿಕಾರಿ ಶಿವಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್. ಉದಯಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷೆ ಮೀರಾಶಿವಲಿಂಗಯ್ಯ ಅವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!