Friday, November 20, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು | ಕೂಳಗೆರೆ ಗ್ರಾ.ಪಂ. ಭ್ರಷ್ಟಾಚಾರ ಸಾಬೀತು : ಪರಿಶೀಲನಾ ವರದಿಯಲ್ಲೇನಿದೆ… ಇಲ್ಲಿದೆ ಸಂಪೂರ್ಣ ಮಾಹಿತಿ…..

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೂಳಗೆರೆ ಗ್ರಾಮ ಪಂಚಾಯಿತಿಯಲ್ಲಿ ನಕಲಿ ಬಿಲ್ಲುಗಳನ್ನು ಸೃಷ್ಠಿಸಿ ಹಣ ದುರುಪಯೋಗ ಮಾಡಲಾಗಿದೆ ಎಂದು ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರು ದೂರು ನೀಡಿದ ಮೇರೆಗೆ, ಇದರ ಪರಿಶೀಲನೆ ನಡೆಸಿದ ಮದ್ದೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದ ತಂಡವು, ಗ್ರಾ.ಪಂ.ನಲ್ಲಿ ಅಕ್ರಮ ನಡೆದಿರುವ ಬಗ್ಗೆ ಮಂಡ್ಯ ಜಿ.ಪಂ. ಸಿಇಓ ಅವರಿಗೆ ವರದಿ ಸಲ್ಲಿಸಿದೆ.

ಕೂಳಗೆರೆ ಗ್ರಾ.ಪಂ.ನಲ್ಲಿ ಒಬ್ಬ ವ್ಯಕ್ತಿಯಿಂದ ಹಣ ಪಡೆದು ಮತ್ತೊಬ್ಬ ವ್ಯಕ್ತಿಯ ಖಾತೆಗೆ ಹಣ ಜಮೆ ಮಾಡಿರುವುದು ಕಂಡು ಬಂದಿದೆ. ಅಲ್ಲದೇ Customer Copy ಮತ್ತು Merchant Copy ಎರಡನ್ನು ಒಬ್ಬರಿಗೆ ನೀಡಿ ಹಣ ಪಡೆದಿರುವುದು ಕಂಡುಬಂದಿದೆ. 500/-ರೂ ಹಣ ಪಡೆದು 580/- ರೂಗಳನ್ನು ಬೇರೆಯವರಿಗೆ ಬಿಲ್ಲು ನೀಡಿರುವುದು ಕಂಡುಬಂದಿದೆ ಎಂದು ಪರಿಶೀಲನಾ ತಂಡ ಪತ್ತೆ ಹಚ್ಚಿದೆ.

ಗ್ರಾಮಸ್ಥರಿಂದ ಹೆಚ್ಚು ಹಣ ಪಡೆದು ಕಡಿಮೆ ಹಣ ಸರ್ಕಾರಕ್ಕೆ ಜಮಾ ಮಾಡಿರುವುದು, ಎರಡು ಆಸ್ತಿ ಇರುವ ಗ್ರಾಮಸ್ಥರಿಂದ 3 ಆಸ್ತಿಗೆ ತೆರಿಗೆ ಹಣವನ್ನು ಪಡೆದಿರುವುದು, ಬೇರೆಯವರ Merchant Copy ನೀಡಿ ಹಣ ವಸೂಲು ಮಾಡಿರುವುದು, ಹೆಚ್ಚುವರಿಯಾಗಿ ಮಟನ್ ಮಾರ್ಕೆಟ್ ಎಂದು ತೆರಿಗೆ ವಸೂಲಿ ಮಾಡಿರುವುದು, ಬೇರೆ ಗ್ರಾಮದ ವ್ಯಾಪ್ತಿಯ ಹೆಸರಿನ ಬಿಲ್ಲುಗಳನ್ನು ನೀಡಿ ಹಣ ಪಡೆದಿರುವುದು, ಮ್ಯುಟೇಷನ್‌ಗೆ 1000/- ರೂ ಪಡೆಯುವ ಬದಲಾಗಿ 2600/- ಪಡೆದಿರುವುದು ಕಂಡು ಬಂದಿದೆ.

ಕಟ್ಟಡ, ಭೂಮಿ, ಬೀದಿ ದೀಪ ಮತ್ತು ನೀರಿನ ಕರ ಪಡೆದು ಬಿಲ್ಲು ನೀಡಿ ಮತ್ತೆ ನೀರಿನ ಕರವೆಂದು ಹೆಚ್ಚುವರಿ ಹಣ ವಸೂಲಿ ಮಾಡಿರುವುದು, ಸರ್ಕಾರಕ್ಕೆ 3518/- ರೂಗಳನ್ನು ಜಮಾ ಮಾಡಿ ಅದೇ ವ್ಯಕ್ತಿಯಿಂದ ಹೆಚ್ಚುವರಿಯಾಗಿ 15067/-ರೂ ಗಳನ್ನು ಪಡೆದಿರುವುದು, ದಾಖಲೆಗಳನ್ನು ಪರಿಶೀಲಿಸಿ ಬಾಕಿ ತೆರಿಗೆ ಎಷ್ಟು ಎಂದು ತಿಳಿಸದೆ ಪ್ರತಿ ಬಾರಿಯೂ ಮನಸ್ಸಿಗೆ ಬಂದಂತೆ ತೆರಿಗೆಯನ್ನು ಖಾಲಿ ಪೇಪರಲ್ಲಿ ಬರೆದುಕೊಂಡಿರುವ ಅಕ್ರಮ ನಡೆದಿದೆ ಎಂದು ತಪಾಸಣಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನೀರಿನ ಕರ ತಿಂಗಳಿಗೆ 50 x 12=600/-ರೂಗಳನ್ನು ಪಂಚಾಯಿತಿಗೆ ನಿಗದಿಪಡಿಸಲಾಗಿದೆ. ಆದರೆ ಗ್ರಾಮದಲ್ಲಿ ಮನಸ್ಸಿಗೆ ಬಂದಂತೆ ನೀರಿನ ತೆರಿಗೆ ವಸೂಲಿ ಮಾಡಿರುವುದು ಕಂಡುಬಂದಿದೆ. ತೆರಿಗೆ ವಸೂಲಿ ಮಾಡುವ ಕೆಲಸ ಹೊರತುಪಡಿಸಿ ಇತರೆ ಕೆಲಸಗಳನ್ನು ಮಾಡುತ್ತಿರುವುದು, ಕೆಲವು ಪ್ರಕರಣಗಳಲ್ಲಿ ತೆರಿಗೆ ವಸೂಲಿ ಮಾಡಿ ಸರ್ಕಾರಕ್ಕೆ ಜಮಾ ಮಾಡದಿರುವುದು ಕಂಡು ಬಂದಿದೆ ಎಂದು ಪರಿಶೀಲನಾ ತನ್ನ ವರದಿಯಲ್ಲಿ ತಿಳಿಸಿದೆ.

ಕೂಳಗೆರೆ ಗ್ರಾ.ಪಂ. ಅಕ್ರಮದ ಬಗ್ಗೆ ದೂರುದಾರರು ನೀಡಿರುವ ದೂರಿನಲ್ಲಿ ಸತ್ಯಾಂಶವಿರುವುದು ಕಂಡು ಬಂದಿರುವುದಾಗಿ ತಿಳಿಸಿರುವುದರಿಂದ ಕೂಳಗೆರೆ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ವಿರುದ್ಧ ನಿಯಮಾನುಸಾರ ಸೂಕ್ತ ಶಿಸ್ತುಕ್ರಮ ಕೈಗೊಳ್ಳಬಹುದಾಗಿದೆ ಎಂದು ವರದಿಯು ತಿಳಿಸಿದೆ.

 

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ