ಮಂಡ್ಯ ನಗರದ ನೀರಿನ ಟ್ಯಾಂಕ್ ವೃತ್ತದಿಂದ ಬೆಸಗರಹಳ್ಳಿ ವೃತ್ತದವರೆಗೆ ಇರುವ ರಸ್ತೆಯನ್ನು ಡಾ.ಬಿ.ಆರ್. ಅಂಬೇಡ್ಕರ್ ರಸ್ತೆ ಎಂದು ನಾಮಕರಣ ಮಾಡಲು ಮಂಡ್ಯ ಜಿಲ್ಲಾಡಳಿತ ವಿಫಲವಾಗಿರುವ ಹಿನ್ನೆಲೆಯಲ್ಲಿ ಏ.14ರಂದು ಮಂಡ್ಯ ಜಿಲ್ಲಾಡಳಿತದಿಂದ ನಡೆಯುವ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಬಹಿಷ್ಕರಿಸಲು ಪ್ರಗತಿಪರ ಸಂಘಟನೆಗಳ ಒಕ್ಕೂಟ ನಿರ್ಧರಿಸಿವೆ.
1976ರಲ್ಲಿಯೇ ನೂರಡಿ ರಸ್ತೆಗೆ ಅಂಬೇಡ್ಕರ್ ರಸ್ತೆ ನಾಮಕರಣ ಮಾಡಿ ನಿರ್ಣಯ ಮಾಡಿದ್ದು, ಈ ಸಂಬಂಧ ವಾಟರ್ ಟ್ಯಾಂಕ್ ಬಳಿ ಡಾ.ಬಿ. ಆರ್. ಅಂಬೇಡ್ಕರ್ ವೃತ್ತ ಎಂದು ನಾಮಫಲಕ ಹಾಕಿದ್ದು, ಅದರ ಮುಂದುವರಿದ ಭಾಗವಾಗಿ ಎರಡು ಜೋಡಿ ರಸ್ತೆಗಳನ್ನು ಡಾ.ಬಿ. ಆರ್. ಅಂಬೇಡ್ಕರ್ ರಸ್ತೆ ಎಂದು ನಾಮಕರಣ ಮಾಡಬೇಕೆಂದು ತಮ್ಮ ಒತ್ತಾಯವಾಗಿದೆ, ಆದರೆ ಹಲವು ವರ್ಷಗಳಿಂದ ಈ ಸಮಸ್ಯೆ ಬಗೆಹರಿಸದ ಹಿನ್ನೆಲೆಯಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರು ಸಭೆ ನಡೆಸಿ, ಅಂಬೇಡ್ಕರ್ ಜಯಂತಿ ಬಹಿಸ್ಕರಿಸಲು ನಿರ್ಧರಿಸಿದ್ದೇವೆಂದು ದಲಿತ ಸಂಘರ್ಷ ಸಮಿತಿಯ ಎಂ.ವಿ.ಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಹಲವಾರು ಪ್ರಗತಿಪರ ಸಂಘಟನೆಗಳು, ರೈತರು, ಪರಿಶಿಷ್ಟರು, ಕಾರ್ಮಿಕರು, ಶೋಷಿತರು. ಸಮ ಸಮಾಜ ಚಿಂತಕರು ಹಲವಾರು ಮನವಿಗಳನ್ನು ನಗರಸಭೆ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಬಳಿ ಮನವಿ ಮಾಡಿದ್ದರೂ, ಇದವರೆವಿಗೂ ಸಮಸ್ಯೆಯನ್ನು ಬಗೆಹರಿಸಲು ಜಿಲ್ಲಾಡಳಿತ ಮುಂದಾಗಿಲ್ಲ, ಆದ್ದರಿಂದ ಏ.12ರ ಸಂಜೆ 6 ಯೊಳಗೆ ಮಂಡ್ಯ ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದಲ್ಲಿ ಅಂಬೇಡ್ಕರ್ ಜಯಂತಿಯನ್ನು ಬಹಿಷ್ಕರಿಸುತ್ತೇವೆಂದು ಅವರು ಎಚ್ಚರಿಕೆ ನೀಡಿದ್ಧಾರೆ.




