Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕುಡಿಯುವ ನೀರಿನ ಕೊರತೆಯಾಗದಂತೆ ಎಚ್ಚರಿಕೆ ವಹಿಸಲು ಸೂಚನೆ

ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ಅವಶ್ಯಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಅಧಿಕಾರಿಗಳಿಗೆ ಸೂಚಿಸಿದರು

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಟ್ಯಾಂಕರ್ ಹಾಗೂ ಖಾಸಗಿ ಬೋರ್ ವೆಲ್ ಮೂಲಕ ನೀರು ಒದಗಿಸುತ್ತಿರುವ ಗ್ರಾಮಗಳಿಗೆ ತಾಲ್ಲೂಕು ತಹಶೀಲ್ದಾರ್ ಹಾಗೂ ತಾಲ್ಲೂಕು‌ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಕಡ್ಡಾಯವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದರು.

ನೀರು ಪೋಲಾಗದಂತೆ ಎಚ್ಚರವಹಿಸಿ

163 ಹೊಸ ಬೋರ್ ವೆಲ್ ಜಿಲ್ಲೆಯಲ್ಲಿ ಕುಡಿಯುವ ನೀರು ಒದಗಿಸಲು ಕಳೆದ ಎರಡು ತಿಂಗಳಿನಿಂದ ಜೆ.ಜೆ.ಎಂ‌ ಹಾಗೂ ಕಂಟೆಜೆನ್ಸಿ ಯೋಜನೆಯಡಿ 164 ಹೊಸ ಬೋರ್ ವೆಲ್ ಗಳನ್ನು ಕೊರೆಯಲಾಗಿದೆ. ಕುಡಿಯುವ ನೀರಿನ ಅವಶ್ಯಕತೆಗೆ ಜಿಲ್ಲಾಡಳಿತ ನಿರಂತರವಾಗಿ ಸ್ಪಂದಿಸುತ್ತಿದ್ದು, ಸಾರ್ವಜನಿಕರು ಸಹ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಕೆ. ಆರ್. ಪೇಟೆ ತಾಲ್ಲೂಕಿನ ಮುರುಗನಕೊಪ್ಪಲು ಹಾಗೂ ಹೊಸೂರು, ಮದ್ದೂರು ತಾಲ್ಲೂಕಿನ ಚಿಕ್ಕೋನಹಳ್ಳಿ ಹಾಗೂ ಬಸರಾಳು ಮಂಡ್ಯ ತಾಲ್ಲೂಕಿನ ಪಂಚೆಗೌಡನಹಳ್ಳಿ ಹಾಗೂ ತಿಮ್ಮನಹೊಸೂರು ಒಟ್ಟು 6 ಗ್ರಾಮಗಳಿಗೆ ಟ್ಯಾಂಕರ್ ಮೂಲಜ ನೀರನ್ನು ಪೂರೈಸಲಾಗುತ್ತಿದೆ ಎಂದು ಆಯಾ ತಾಲ್ಲೂಕಿನ ತಹಶೀಲ್ದಾರ್ ಸಭೆಗೆ ಮಾಹಿತಿ ಒದಗಿಸಿದರು.

ಪ್ರತಿವಾರ ಸಭೆ ನಡೆಸಿ

ಉಪವಿಭಾಗಾಧಿಕಾರಿಗಳು ಟಾಸ್ಕ್ ಫೋಸ್೯ಸಮಿತಿ ಅಧ್ಯಕ್ಷರಾಗಿದ್ದು, ಪ್ರತಿವಾರ ಸಭೆ ನಡೆಸಿ ಕುಡಿಯುವ ನೀರಿನ ತೊಂದರೆ ಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಉಲ್ಭಣವಾಗುವ ಗ್ರಾಮಗಳನ್ನು ಪಟ್ಟಿ ಮಾಡಿಕೊಂಡು ಯೋಜನೆಗಳನ್ನು ರೂಪಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಬರ ಪರಿಸ್ಥಿತಿ ಸಂದರ್ಭದಲ್ಲಿ ಖಾಸಗಿ ಬೋರ್ ವೆಲ್ ಗಳನ್ನು ಅದಿಗ್ರಹಣ ಮಾಡಿಕೊಳ್ಳುವ ಅಧಿಕಾರವನ್ನು ತಹಶೀಲ್ದಾರ್ ಹೊಂದಿದ್ದು, ಗ್ರಾಮಗಳಲ್ಲಿ ಲಭ್ಯವಿರುವ ಖಾಸಗಿ ಬೋರ್ ವೆಲ್ ಗಳನ್ಜು ಪಟ್ಟಿ ಮಾಡಿಕೊಳ್ಳಿ ಎಂದರು.

ಮಾಹಿತಿ ನೀಡಿ

ಕುಡಿಯುವ ನೀರಿನ ಉಪಯೋಗಕ್ಕಾಗಿ ಬಳಸುತ್ತಿರುವ ಬೋರ್ ವೆಲ್ ಗಳ ರಿಡ್ರಿಲ್ ಗಳಿಗೆ ರಿಗ್ ಮಾಲೀಕರು ಮೊದಲ ಆದ್ಯತೆ ನೀಡಬೇಕು ಎಂದು ಈಗಾಗಲೇ ತಿಳಿಸಲಾಗಿದೆ. ರಿಗ್ ಮಾಲೀಕರು ಸಹಕರಿಸದಿದ್ದಲ್ಲಿ ಭೂವಿಜ್ಞಾನಿಗಳ ಕಚೇರಿಗೆ ಮುಂದಿನ ಕ್ರಮ ಕೈಗೊಳ್ಳಲು ಮಾಹಿತಿ ನೀಡಿ ಎಂದರು.

ಖಾಸಗಿ ಬೋರ್ ವೆಲ್ ನಿಂದ ನೀರು ಪಡೆಯುತ್ತಿರುವ ಕಡೆ ತಹಶೀಲ್ದಾರ್ ಖಾಸಗಿ ಬೋರ್ ವೆಲ್ ಮಾಲೀಕರೊಂದಿಗೆ ಮಾಡಿಕೊಂಡಿರುವ ಒಪ್ಪಂದ ಹಾಗೂ ಆದೇಶದ ಪ್ರತಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಮೂರು ದಿನದೊಳಗಾಗಿ ಸಲ್ಲಿಸಬೇಕು ಎಂದರು.

ಟ್ಯಾಂಕರ್ ಮೂಲಕ ನೀರು ಪಡೆಯುತ್ತಿದ್ದಲ್ಲಿ ಅವರಿಗೆ ಪ್ರತಿ 15 ದಿನಕೊಮ್ಮೆ ಹಾಗೂ ಖಾಸಗಿ ‌ಬೋರ್ ವೆಲ್ ನಲ್ಲಿ ನೀರು ಪಡೆಯುತ್ತಿದ್ದಾರೆ, ತಿಂಗಳಿಗೊಮ್ಮೆ ಹಣ ಪಾವತಿ‌ ಮಾಡಬೇಕು. ಖಾಸಗಿ ಬೋರ್ ವೆಲ್ ಗಳ ಮೂಲಕ ದಾನಿಗಳು ಉಚಿತವಾಗಿ ನೀರು ನೀಡುತ್ತಿದ್ದಲ್ಲಿ ಅದಕ್ಕೂ ಸಹ ಪಂಚನಾಮೆ‌ ಮಾಡಿಕೊಂಡು ತಹಶೀಲ್ದಾರ್ ಆದೇಶ ಹೊರಡಿಸಬೇಕು ಎಂದರು.

ಕುಡಿಯುವ ನೀರಿಗೆ ಮೊದಲ ಆದ್ಯತೆ

ಅನಧಿಕೃತವಾಗಿ ಪಂಪ್ ಸೆಟ್ ಮೋಟರ್ ಬಳಸಿ ಕೆರೆಗಳಿಂದ ನೀರು ಪಡೆದು ಕೃಷಿ ಅಥವಾ ಅನ್ಯ ಉದ್ದೇಶಕ್ಕೆ ಬಳಸುತ್ತಿದ್ದರೆ ಮುಲಾಜಿಲ್ಲದೆ ಮೋಟರ್ ಗಳನ್ನು ಜಪ್ತಿ ಮಾಡಿಕೊಂಡು ಕ್ರಮಕೈಗೊಳ್ಳಿ. ಕುಡಿಯುವ ನೀರು ಸಾರ್ವಜನಿಕರು ಹಾಗೂ ಜಾನುವಾರುಗಳಿಗೆ ಒದಗಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದರು.

ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರನ್ನು ಪಡೆಯುತ್ತಿರುವ ಮೂಲಗಳು ಬದಲಾಗಬಹುದು. ಈ ಹಿನ್ನಲೆಯಲ್ಲಿ ಕುಡಿಯುವ ನೀರನ್ನು ಲ್ಯಾಬ್ ಗಳಲ್ಲಿ ಪರೀಕ್ಷೆಗೆ ಒಳಪಡಿಸಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರು ತಿಳಿಸಿದರು.

ಲೋಪ ಕಂಡು ಬಂದರೆ ಕ್ರಮ

ಟ್ಯಾಂಕರ್ ಹಾಗೂ ಖಾಸಗಿ ಬೋರ್ ವಲ್ ಗಳ ಮೂಲಕ ನೀರು ಒದಗಿಸುತ್ತಿರುವ ಗ್ರಾಮಗಳಿಗೆ ದಿಢೀರ್ ಭೇಟಿ ನೀಡಲಿದ್ದು, ದಾಖಲೆಗಳನ್ನು ಅಧಿಕಾರಿಗಳು ಸರಿಯಾಗಿ ನಿರ್ವಹಿಸಬೇಕು. ಯಾವುದೇ ಲೋಪ ಕಂಡು ಬಂದರೂ ಕ್ರಮ ವಹಿಸುವುದಾಗಿ ಎಚ್ಚರಿಕೆ ನೀಡಿದರು.

ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು ಮಾತನಾಡಿ, ಜನರಿಗೆ ಮಿತವಾಗಿ ನೀರು ಬಳಸುವುದರ ಬಗ್ಗೆ ಜಾಗೃತಿ ಮೂಡಿಸಿ. ಟ್ಯಾಂಕರ್ ನಿಂದ ನೀರು ಒದಗಿಸುವ ಮೊದಲು ಸುತ್ತಲೂ ಯಾವುದೇ ಖಾಸಗಿ ಬೋರ್ ವೆಲ್ ನಿಂದ ನೀರು ಪಡೆಯಲು ಸಾಧ್ಯವಿಲ್ಲ ಎಂಬುದನ್ನು ಖಾತ್ರಿ ಪಡೆದುಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಅಭಿಯಂತರ ಶಿವರಾಜು, ನಗರಾಭಿವೃದ್ಧಿ ಕೋಶದ ಯೋಜನ ನಿರ್ದೇಶಕಿ ತುಷಾರಮಣಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್‌ ಹೆಚ್ ನಿರ್ಮಲ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!