Thursday, September 19, 2024

ಪ್ರಾಯೋಗಿಕ ಆವೃತ್ತಿ

ಜನಪ್ರಿಯ ನಟಿ ಲೀಲಾವತಿ ಅವರು ಕಣ್ಮರೆಯಾದ ಸಂದರ್ಭದಲ್ಲಿ………..

ವಿವೇಕಾನಂದ ಎಚ್.ಕೆ

ನಟನೆ, ಖ್ಯಾತಿ, ಕೃಷಿ, ಮಗನ ಮೇಲಿನ ಮಮತೆ, ಪ್ರಾಣಿ ಪ್ರೀತಿ, ಒಂದಷ್ಟು ಸಮಾಜ ಸೇವೆ ಎಲ್ಲವೂ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ.‌ ಆದರೆ ಇದನ್ನು ಮೀರಿ ಬಹಳಷ್ಟು ಮಧ್ಯಮವರ್ಗದ ಸಿನಿ ಪ್ರೇಮಿಗಳ ಮನಸ್ಸಿನಲ್ಲಿ ಒಂದು ಕೆಟ್ಟ ಕುತೂಹಲ ಹಾಗೇ ಉಳಿದಿದೆ. ಕೆಲವರು ಆ ಬಗ್ಗೆ ಪುಸ್ತಕಗಳು, ಟಿವಿ ಸಂದರ್ಶನಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರು ಇನ್ನೂ ಕೆಲವರಿಗೆ ಮತ್ತೇನೋ ತಿಳಿಯುವ ಆಸೆ…..

ರಾಜ್ ಲೀಲಾ ವಿನೋದ ಎಂಬ ರವಿ ಬೆಳೆಗೆರೆಯವರ ಹಸಿ ಅನಿಸಿಕೆಗಳ ಪುಸ್ತಕವೂ ಜನಪ್ರಿಯವಾಗಿದೆ. ಸಾಕಷ್ಟು ಹಿರಿಯ ಪತ್ರಕರ್ತರು ಇದರ ಬಗ್ಗೆ ಖಾಸಗಿಯಾಗಿ ಮಾತನಾಡುತ್ತಾರೆ. ಸಿನಿಮಾ ಕ್ಷೇತ್ರದ ಅನುಭವಿಗಳು ತಮ್ಮದೇ ಅಭಿಪ್ರಾಯ ಪಡುತ್ತಾರೆ. ಅವರ ಒಡನಾಡಿಗಳು ಮತ್ತಷ್ಟು ಹೇಳುತ್ತಾರೆ. ಆದರೆ ಒಟ್ಟಾರೆ ‌ತುಂಬಾ ಸ್ಪಷ್ಟತೆ ಏನು ದೊರೆಯುವುದಿಲ್ಲ. ಕಾರಣ…….

ಈ ವಿಷಯ ಅತ್ಯಂತ ಖಾಸಗಿಯಾದದ್ದು.‌ ಬಹಳ ಹಳೆಯದು. ಸರಿಯಾದ ಸಂಪರ್ಕ ಸಾಧನಗಳು ಇಲ್ಲದ ಸಮಯದಲ್ಲಿ ನಡೆದಿರಬಹುದಾದ ಘಟನೆ. ಸಿನಿಮಾ ರಂಗದಲ್ಲಿ ಹೆಚ್ಚು ಕಡಿಮೆ ಪುರುಷ ಪ್ರಧಾನ ಮೇಲುಗೈ ಸಾಧಿಸಿದ ಸಂದರ್ಭದಲ್ಲಿ ಘಟಿಸಿರುವುದು.‌ ಆಗಿನ ಕಾಲದ ಸಹಜ ನಡವಳಿಕೆಯೂ ಆಗಿರಬಹುದು…..

ಈ ವಿಷಯದಲ್ಲಿ ಕೆಟ್ಟ ಕುತೂಹಲ ಅಂತಹ ಒಳ್ಳೆಯ ನಡೆಯಲ್ಲ. ಇದರಲ್ಲಿ ಮೂರನೆಯ ವ್ಯಕ್ತಿಯ ಪ್ರವೇಶ ಸಹ ಅನುಚಿತ. ಇದು ಅಪರಾಧವೂ ಅಲ್ಲ. ಇದರಲ್ಲಿ ಭಾಗಿಯಾದವರು ಒಬ್ಬರಿಗೊಬ್ಬರು ಪೋಲೀಸ್, ನ್ಯಾಯಾಲಯ ಅಥವಾ ಇನ್ಯಾವುದೇ ಮಧ್ಯಸ್ಥಿಕೆಯಲ್ಲಿ ಯಾರ ಮೇಲೂ ದೂರು ದಾಖಲಿಸಿಲ್ಲ. ಬಹಿರಂಗವಾಗಿ ಎಂದೂ ಜಗಳವಾಡಿಲ್ಲ…..

ಯಾರಿಂದ ಯಾರಿಗೆ ಯಾವಾಗ ಅನ್ಯಾಯವಾಗಿದೆ ಎಂಬುದು ಸ್ಪಷ್ಟವಿಲ್ಲ. ಹೇಗೆ ಅನ್ಯಾಯವಾಗುತ್ತದೆ ಎಂಬುದೂ ಚರ್ಚಾಸ್ಪದ. ಬಹುತೇಕ ಇದರಲ್ಲಿ ಭಾಗಿಯಾದವರು ಈ ಬಗ್ಗೆ ಮೌನವಹಿಸಿರುವುದನ್ನು ಕಾಣಬಹುದು. ಎಲ್ಲೋ ಕೆಲವೊಮ್ಮೆ ಆತ್ಮೀಯರಲ್ಲಿ ಅಥವಾ ಪತ್ರಕರ್ತರ ಸಂದರ್ಶನದಲ್ಲಿ ಸ್ವಲ್ಪ ಮಾತನಾಡಿರಬಹುದು. ಇಲ್ಲಿ ಒಬ್ಬೊಬ್ಬರ ದೃಷ್ಟಿಕೋನ ಒಂದೊಂದು ರೀತಿ ಇರುತ್ತದೆ…

ಈ ವಿಷಯ ಹೇಗಿದೆಯೆಂದರೆ ಇಲ್ಲಿ ಎಲ್ಲಾ ಸಾಧ್ಯತೆಗಳು ಇರುತ್ತವೆ ಮತ್ತು ಅವು ಸುಳ್ಳೂ ಆಗಿರಬಹುದು, ನಿಜವೂ ಆಗಿರಬಹುದು, ಗಾಳಿ ಸುದ್ದಿಯಾಗಿರಬಹುದು, ಊಹೆಯಾಗಿರಬಹುದು, ಬಾಯಿ ಚಪಲವು, ಕೆಟ್ಟ ಚಾಳಿಯು ಆಗಿರಬಹುದು, ಪ್ರಸಿದ್ದರ ಬಗೆಗಿನ ಕುತೂಹಲವೂ ಆಗಿರಬಹುದು……

ಇಷ್ಟೆಲ್ಲದರ ನಡುವೆ ಇದರಿಂದ ಸಾರ್ವಜನಿಕರಿಗೆ ಆಗಬಹುದಾದ ಲಾಭವೇನು ಇಲ್ಲ ಅಥವಾ ಕಲಿಯಬೇಕಾದದ್ದು ಇಲ್ಲ ಅಥವಾ ಸ್ಪಷ್ಟತೆಯೇ ಇಲ್ಲದ ಖಾಸಗಿ ವಿಷಯದಿಂದ ಯಾವ ಪರಿಣಾಮವೂ ಆಗುವುದಿಲ್ಲ…..

ಸುಮಾರು 48 ಚಿತ್ರಗಳಲ್ಲಿ ಒಟ್ಟಿಗೆ ಅಭಿನಯಿಸಿದ ಇಬ್ಬರು ಗಂಡು ಹೆಣ್ಣು ಪಾತ್ರದಾರಿಗಳಲ್ಲಿ ಪ್ರೀತಿ ಪ್ರೇಮ ಪ್ರಣಯ ಆಕರ್ಷಣೆ ಆಗಿರಲೂಬಹುದು, ಆಗಿಲ್ಲದೆಯೂ ಇರಬಹುದು, ಗಂಡಿನಿಂದ ಸಣ್ಣ ವಂಚನೆಯೂ ಆಗಿರಬಹುದು, ಹೆಣ್ಣು ಮೋಹಪಾಶಕ್ಕೆ ಒಳಗಾಗಿರಲೂಬಹುದು, ಪ್ರಾರಂಭದಲ್ಲಿ ಉತ್ತಮವಾಗಿದ್ದ ಸಂಬಂಧ ಸ್ವಲ್ಪ ಸಮಯದ ನಂತರ ಹಳಸಿರಲೂಬಹುದು ಅಥವಾ ಇತರೆ ವ್ಯಕ್ತಿಯ ಮಧ್ಯ ಪ್ರವೇಶದಿಂದ ಘರ್ಷಣೆಯಾಗಿ ಹಾಗೇ ಮುಚ್ಚಿ ಹೋಗಿರಬಹುದು,
ಹೀಗೆ ಹಲವಾರು ಸಾಧ್ಯತೆಗಳು ಇರುತ್ತದೆ….

ಆದ್ದರಿಂದ ಅದರ ಬಗ್ಗೆ ಹೆಚ್ಚು ಕುತೂಹಲ ಹೊಂದದೆ ನಮ್ಮ ಜೀವನಾನುಭವದ ಗ್ರಹಿಕೆಯಿಂದ ಆ ವಿಷಯದಲ್ಲಿ ಎಷ್ಟು ಬೇಕೋ ಅಷ್ಟು ಅಭಿಪ್ರಾಯ ರೂಪಿಸಿಕೊಂಡು ಇತರ ಒಳ್ಳೆಯ ವಿಷಯಗಳ ಬಗ್ಗೆ ಮಾತನಾಡುವುದು ಉತ್ತಮ. ಏಕೆಂದರೆ ಈ ರೀತಿಯ ವಿಷಯಗಳು ಏಕಕಾಲದಲ್ಲಿ ನಮ್ಮ ನಡುವೆಯೂ ಮತ್ತು ಸಮಾಜದಲ್ಲಿ ನೈತಿಕ ಮತ್ತು ಅನೈತಿಕ ಎರಡು ಆಗಬಹುದಾದ ಸಾಧ್ಯತೆ ಇದೆ. ಕೆಲವೊಮ್ಮೆ ಗಂಡು ಕೆಲವೊಮ್ಮೆ ಹೆಣ್ಣು ಹಾದಿ ತಪ್ಪಿರುವ ಸಾಧ್ಯತೆಯೂ ಇರುತ್ತದೆ. ಇದು ತೀರಾ ತೀರಾ ಖಾಸಗಿ ವಿಷಯ. ನಮ್ಮ ಕುಟುಂಬಗಳು ಅಥವಾ ಪರಿಚಿತರ ನಡುವೆಯೂ ಹೀಗೆ ಆಗಿರಬಹುದು……

ತಲೆ ಕೆಡಿಸಿಕೊಳ್ಳಲು, ನಮ್ಮ ಕರ್ತವ್ಯ ನಿರ್ವಹಿಸಲು, ವೈಯಕ್ತಿಕ ಮತ್ತು ಸಮಾಜದ ಅನೇಕ ಸಮಸ್ಯೆಗಳನ್ನು ಬಗೆಹರಿಸಲು ತಕ್ಷಣವೇ ಮಾಡಬೇಕಾದ ಅನೇಕ ವಿಷಯಗಳು ಇನ್ನೂ ಸಾಕಷ್ಟು ಬಾಕಿ ಇದೆ. ಇದರಲ್ಲಿ ಭಾಗಿಯಾದವರು ನಮ್ಮಿಂದ ದೂರ ಸಾಗಿದ್ದಾರೆ. ಆದ್ದರಿಂದ ಇದಕ್ಕಿಂತ ಉತ್ತಮ ವಿಷಯಗಳ ಬಗ್ಗೆ ಯೋಚಿಸಿ ಎಂದು ಮನವಿ ಮಾಡಿಕೊಳ್ಳುತ್ತಾ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!