Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ರಸಕ್ತ ಅಧಿವೇಶನದಲ್ಲೇ ಕನ್ನಡಿಗರ ಉದ್ಯೋಗ ವಿಧೇಯಕ ಮಂಡನೆಯಾಗಲಿ: ನಾರಾಯಣ್

ಕನ್ನಡಿಗರಿಗೆ ಅರ್ಹತೆ ಇದ್ದರೂ ಉದ್ಯೋಗಾವಕಾಶಗಳಿಂದ ವಂಚಿತರಾಗಿ ಹತಾಶೆಗೊಳಗಾಗಿದ್ದ ಗ್ರಾಮೀಣ ಭಾಗದ ಲಕ್ಷಾಂತರ ನಿರುದ್ಯೋಗಿಗಳಿಗೆ ಭರವಸೆಯ ಬೆಳಕು ಮೂಡಿಸಿದ್ದ ಕನ್ನಡಿಗರ ಉದ್ಯೋಗ ಮೀಸಲಾತಿಯ ವಿಧೇಯಕ ಪ್ರಸಕ್ತ ಅಧಿವೇಶನದಲ್ಲೇ ಸರ್ಕಾರ ಮಂಡಿಸಲೇಬೇಕು, ಇಲ್ಲವೇ ಕನ್ನಡಿಗರ ಆಕ್ರೋಶ ಎದುರಿಸಲು ಸಿದ್ದವಾಗಬೇಕು ಎಂದು ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್.ನಾರಾಯಣ್ ಎಚ್ಚರಿಸಿದ್ದಾರೆ.

ವಿಧೇಯಕದ ಕುರಿತು ಮಾಧ್ಯಮಗಳಲ್ಲಿ ಹೆಮ್ಮೆಯಿಂದ ಬೀಗಿದ್ದ ಸಚಿವರು, ಕೆಲವೇ ಸಮಯದ ಅಂತರದಲ್ಲಿ ಐತಿಹಾಸಿಕ ವಿಧೇಯಕ ಹಿಂತೆಗೆದುಕೊಂಡ ಬಗ್ಗೆ ಸಮಸ್ತ ಕನ್ನಡ ಜನತೆಯ ಮುಂದೆ ತಲೆ ಎತ್ತಿ ಮಾತನಾಡುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

ಮುಖ್ಯಮಂತ್ರಿಗಳು ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಮೂರು ಬಾರಿ `ಯೂ ಟರ್ನ್ ಹೊಡೆದು’ ಕೊನೆಗೂ ವಿಧೇಯಕ ಸದ್ಯಕ್ಕೆ ಮಂಡಿಸುತ್ತಿಲ್ಲ ಎನ್ನುವ ಅಂಜುಬುರುಕತನದ ನಿರ್ಧಾರ ಕೈಗೊಂಡಿರುವುದರ ಹಿಂದೆ ನಾಡಿನ ಆತ್ಮ ಗೌರವ, ಕನ್ನಡಿಗರ ಸ್ವಾಭಿಮಾನ ಹಾಗೂ ಕನ್ನಡತನವನ್ನು ಹಿಮ್ಮೆಟ್ಟಿಸುವ ಕರ್ನಾಟಕ ವಿರೋಧಿ ಶಕ್ತಿಗಳ ಲಾಬಿ ಮೇಲುಗೈ ಸಾಧಿಸಿರುವಂತಿದೆ ಎಂದು ಕಿಡಿಕಾರಿದ್ದಾರೆ.

ಈ ನೆಲದಲ್ಲಿ ಬದುಕು ಮಾಡುತ್ತ ಕನ್ನಡ ಕಲಿತವರೆಲ್ಲ ಕನ್ನಡಿಗರೇ ಎಂದು ಪರಿಗಣಿಸಿ ಈ ನೆಲದ ಮಕ್ಕಳ ಉದ್ಯೋಗದ ಹಕ್ಕನ್ನು ರಕ್ಷಿಸುವ ನಿಟ್ಟಿನಲ್ಲಿ ಕನ್ನಡಪರ ಹೋರಾಟಗಾರರ ಬಹುದಿನಗಳ ಹೋರಾಟದ ಬೇಡಿಕೆಗೆ ನಿನ್ನೆಯಷ್ಟೇ `ಅಸ್ತು’ ಎಂದು ದಿಟ್ಟ ಹೆಜ್ಜೆ ಇಟ್ಟಿದ್ದ ಸರ್ಕಾರ ದಿನ ಕಳೆಯುವುದರೊಳಗೇ `ಸುಸ್ತು’ ಹೊಡೆದಿರುವುದೇಕೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಪ್ರಸಕ್ತ ಅಧಿವೇಶನದಲ್ಲೇ ವಿದೇಯಕ ಮಂಡಿಸಲಿ ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!