Thursday, September 19, 2024

ಪ್ರಾಯೋಗಿಕ ಆವೃತ್ತಿ

ನಿವೇಶನ ಗುರುತಿಸಿ ಹಕ್ಕುಪತ್ರ ನೀಡಲು ಆಗ್ರಹಿಸಿ ಪ್ರತಿಭಟನೆ

ಮಂಡ್ಯ ತಾಲ್ಲೂಕಿನ ಸಂಪಹಳ್ಳಿ ಗ್ರಾಮದ ದಲಿತರಿಗೆ ನಿವೇಶನ ಗುರುತಿಸಿ ಕೂಡಲೇ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಕರ್ನಾಟಕದ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಯಿತು.

ಹಲವು ವರ್ಷಗಳಿಂದ ಜೀವಂತವಾಗಿರುವ ಈ ಸಮಸ್ಯೆಯ ಬಗ್ಗೆ ಅಧಿಕಾರಿಗಳಿಗೆ ಹಲವು ಭಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್ ನೇತೃತ್ವದಲ್ಲಿ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಸರ್ವೆ ನಂ 129ರಲ್ಲಿ ಸಂಪಹಳ್ಳಿ ದಲಿತರಿಗೆ ನಿವೇಶನ ನೀಡಲು 4 ಎಕರೆ 32ಗುಂಟೆ ಜಮೀನನ್ನು ಎಸ್.ಡಬ್ಲ್ಯೂ ಸಿ.ಆರ್.60/82-83ರಲ್ಲಿ ಸ್ವಾಧೀನ ಮಾಡಿಕೊಂಡು ಪರಿಶಿಷ್ಟ ಜಾತಿಯ  40 ಕುಟುಂಬಗಳಿಗೆ ನಿವೇಶನ ಹಕ್ಕುಪತ್ರವನ್ನು 1987 ಜ.3ರಂದು ಹಂಚಿಕೆ ಮಾಡಿತ್ತು, ಈ ಪೈಕಿ 12 ಕುಟುಂಬಗಳಿಗೆ ಮುದ್ರಣ ತಪ್ಪಾಗಿದೆ ಎಂದು ಹಕ್ಕು ಪತ್ರ ವಾಪಸ್ ಪಡೆದಿದೆ, ಆದರೆ ಇವರಿಗೆ ಇನ್ನೂ ಸಹ ಹಕ್ಕುಪತ್ರ ನೀಡಿಲ್ಲ ಎಂದು ದೂರಿದರು.

28 ಕುಟುಂಬಕ್ಕೆ ಹಕ್ಕು ಪತ್ರ ನೀಡಿರುವಂತೆ ಉಳಿದ 12 ಕುಟುಂಬಗಳಿಗೂ ಜಾಗ ಅಳತೆ ಮಾಡಿ ಹದ್ದುಬಸ್ತು ಅಳತೆಮಾಡಿ, ಕ್ರಮ ಸಂಖ್ಯೆಯಂತೆ ಜಾಗ ಗುರುತಿಸಿ ಕೊಟ್ಟಿಲ್ಲ, ಯಾರಿಗೆ ಯಾವ ಜಾಗವೆಂದು ಗೊಂದಲ ಉಂಟಾಗಿದೆ. ಗ್ರಾಮ ಪಂಚಾಯಿತಿಯಿಂದ ಮನೆಕಟ್ಟಲು ಗ್ರಾಂಟ್‌ಗಳು ಮಂಜೂರಾಗುತ್ತಿಲ್ಲ. ಮೂಲಭೂತ ಸೌಲಭ್ಯಗಳಾದ ರಸ್ತೆ, ಚರಂಡಿ ಸೇರಿದಂತೆ ಯಾವ ಸೌಕರ್ಯವನ್ನು ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿರುವ ನಮಗೆ ಗ್ರಾಮ ಪಂಚಾಯಿತಿ ಸೌಲಭ್ಯ ಪಡೆಯಲು ಆಗುತ್ತಿಲ್ಲ. ಹಲವಾರು ಭಾರಿ ಜಿಲ್ಲಾಧಿಕಾರಿ ಹಾಗೂ ತಹಸಿಲ್ದಾರ್ ಅವರಿಗೆ ಅರ್ಜಿ ಸಲ್ಲಿಸಿದರೂ, ಇದುವರೆಗೂ ಜಾಗ ಗುರುತಿಸಿ ಕೊಟ್ಟಿಲ್ಲ ಎಂದು ದೂರಿದರು.

ಪ್ರತಿಭಟನೆಯಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ಆರ್.ಕೃಷ್ಣ, ತಾ.ಸಂಚಾಲಕ ಅಂಬೂಜಿ, ಮದಗಂದೂರು ಶ್ರೀನಿವಾಸ್, ಮುಖಂಡರಾದ ಸುರೇಶ್, ಯಶವಂತ್, ಲೋಕೇಶ್, ಹೆಚ್.ಎಸ್.ಸತೀಶ್ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!