Friday, October 18, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು | ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿ : ಸುಮಲತಾ ಅಂಬರೀಷ್

ವರದಿ : ಪ್ರಭು ವಿ.ಎಸ್.

ಪ್ರಸಕ್ತ ನಡೆಯುತ್ತಿರುವ ವಿಧಾನಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು ಮತದಾರರು ಬಿಜೆಪಿ ಪಕ್ಷದ ಅಭ್ಯರ್ಥಿಗೆ ಮತನೀಡುವ ಮೂಲಕ ತಮ್ಮ ಕೈ ಬಲಪಡಿಸಬೇಕೆಂದು ಸಂಸದೆ ಸುಮಲತಾ ಅಂಬರೀಷ್ ಮನವಿ ಮಾಡಿದರು.

ಮದ್ದೂರು ತಾಲೂಕಿನ ಬೆಸಗರಹಳ್ಳಿ ಬಸ್‌ನಿಲ್ದಾಣದ ಆವರಣದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಪಿ. ಸ್ವಾಮಿ ಪರ ಮತಪ್ರಚಾರ ಕೈಗೊಂಡು ಮಾತನಾಡಿದ ಅವರು ಪ್ರತಿಸಲ ಚುನಾವಣೆ ಬಂದಾಗಲೂ ಹಿಂದಿನ ಚುನಾವಣೆಯಲ್ಲಿ ಹೇಳಿದ ರೈತರ ಸಾಲ ಮನ್ನಾ, ಸ್ತ್ರೀ ಸಂಘಗಳ ಸಾಲಮನ್ನಾ ಇನ್ನಿತರೆ ಯೋಜನೆಗಳನ್ನೇ ಹೇಳಿಕೊಂಡು ಜಿಲ್ಲೆಯ ಜನರಿಗೆ ಅನ್ಯಾಯವೆಸಗುತ್ತಿದ್ದಾರೆಂದು ಪರೋಕ್ಷವಾಗಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ಧಾಳಿ ನಡೆಸಿದರು.

ರೈತರ ಮಕ್ಕಳೆಂದು ಹೆಸರೇಳುವ ಕುಮಾರಸ್ವಾಮಿ ಅವರು ಕೋಟ್ಯಾಂತರ ರೂ.ಗಳನ್ನು ಸಂಪಾದಿಸಿರುವ ಪರಿ ಹೇಗೆಂದು ಪ್ರಶ್ನಿಸಿದರಲ್ಲದೇ ಪ್ರತಿಸಲವೂ ರೈತರಿಗೆ ಅನ್ಯಾಯ ಮಾಡುತ್ತಿದ್ದು ಹಾಲಿಗೆ ನೀರು ಪ್ರಕರಣ ಬಯಲಿಗೆ ಬಂದ ವೇಳೆ ಜಿಲ್ಲೆಯ ಯಾವೊಬ್ಬ ಶಾಸಕರೂ ಚಕಾರ ಎತ್ತದಿರುವ ಬಗ್ಗೆ ಪ್ರಶ್ನಿಸಿದರಲ್ಲದೇ ಇದಕ್ಕೆಲ್ಲ ಸೂತ್ರದಾರಿಗಳೂ ಅವರೇ ಎಂದು ಪರೋಕ್ಷವಾಗಿ ಕುಟುಕಿದರು.

ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಕೆಆರ್‌ಎಸ್ ಅಣೆಕಟ್ಟೆಗೆ ಅಡ್ಡಡ್ಡ ಮಲಗಿಸುವಂತೆ ಹೇಳಿಕೆ ನೀಡುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದು ತಮ್ಮ ಕುಟುಂಬ ರಾಜಕಾರಣಕ್ಕೆ ಮಣೆ ಹಾಕುತ್ತಿರುವ ಕಾರ್ಯಕರ್ತರ ಗತಿ ಏನೆಂದರು.

ಕಳೆದ ಮೂರು ಬಾರಿ ಸ್ಥಳೀಯ ಶಾಸಕರಿಗೆ ಅವಕಾಶ ಕಲ್ಪಿಸಿದ್ದು ಈಗಾಗಲೇ 80 ವರ್ಷ ದಾಟಿರುವ ಶಾಸಕರಿಗೆ ನಿವೃತ್ತಿ ಅನ್ನುವುದೇ ಇಲ್ಲವೇ ಯುವಕರಿಗೆ ಅವಕಾಶ ಕಲ್ಪಿಸುವ ಜತೆಗೆ ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಆಡುವಂತೆ ಮನವಿ ಮಾಡಿದರಲ್ಲದೇ ವಿಧಾನಸಭೆ ಚುನಾವಣೆ ನನ್ನ ಪ್ರತಿಷ್ಟೆಯ ಕಣವಾಗಿದ್ದು ಮತದಾರರನ್ನು ನಂಬಿ ತಾವು ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿದ್ದು ತಮ್ಮನ್ನು ಕೈಬಿಡುವುದಿಲ್ಲವೆಂದು ಬಾವುಕರಾದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಜನಪರ ಕೆಲಸಗಳನ್ನು ಕೈಗೊಂಡಿದ್ದು ಜತೆಗೆ ಬಿಜೆಪಿ ಅಭ್ಯರ್ಥಿ ಎಸ್.ಪಿ. ಸ್ವಾಮಿ ಅವರು ಸರಳ ಸಜ್ಜನಿಕೆಯ ಪ್ರಾಮಾಣಿಕ ವ್ಯಕ್ತಿಯಾಗಿದ್ದು ಅವರನ್ನು ಗೆಲ್ಲಿಸುವ ಮೂಲಕ ತಮ್ಮ ಜತೆ ಶಕ್ತಿಯಾಗಿ ನಿಲ್ಲಲು ಅವಕಾಶ ಕಲ್ಪಿಸಬೇಕೆಂದರು.

ಈ ವೇಳೆ ಅಭ್ಯರ್ಥಿ ಎಸ್.ಪಿ. ಸ್ವಾಮಿ, ಜಿ.ಪಂ. ಮಾಜಿ ಸದಸ್ಯ ಮರಿಹೆಗಡೆ, ಮುಖಂಡರಾದ ಮನುಕುಮಾರ್, ನಾಗೇಶ್, ಬೆಸಗರಹಳ್ಳಿ ಬಾಲು, ಮಹೇಂದ್ರ, ಸಿದ್ದಲಿಂಗಸ್ವಾಮಿ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!