Thursday, September 19, 2024

ಪ್ರಾಯೋಗಿಕ ಆವೃತ್ತಿ

ಜನಸಾಗರದ ನಡುವೆ ಮದ್ದೂರಮ್ಮ ಕೊಂಡೋತ್ಸವ

ಪ್ರಭು ವಿ.ಎಸ್. ಮದ್ದೂರು

ಇಂದು ಮದ್ದೂರು ಪಟ್ಟಣ ಸಹಸ್ರಾರು ಭಕ್ತರಿಂದ ತುಂಬಿತ್ತು. ಎಲ್ಲಿ ನೋಡಿದರೂ ಜನಜಂಗುಳಿ… ಅದರಲ್ಲೂ ಮದ್ದೂರಮ್ಮ ದೇವಾಲಯದ ಮುಂದೆ ಕಾಲಿಡಲು ಆಗದಷ್ಟು ಜನರು ಸಾಗರದಂತೆ ಸೇರಿದ್ದರು. ಇಂತಹ ಸಹಸ್ರಾರು ಭಕ್ತರ ಉದ್ಘೋಷದ ನಡುವೆ ಇಂದು ಮುಂಜಾನೆ ಮದ್ದೂರಮ್ಮ ಕೊಂಡೋತ್ಸವ ಅದ್ದೂರಿಯಾಗಿ ಜರುಗಿತು.

ಪಟ್ಟಣದ ಈ ದೇವಿಯ ದೇವಾಲಯದ ಆವರಣದಲ್ಲಿ ಕೊಂಡೋತ್ಸವಕ್ಕೂ ಮುನ್ನ ಮುಂಜಾನೆ 5 ಗಂಟೆಗೆ ಹೋಮ ಹವನ, ಚಂದ್ರ ಬಂಡಾರ ಸೇವೆ , ಕೊಂಡಬಂಡಿ ಉತ್ಸವ ನಡೆಯಿತು.

ಪಟ್ಟಣದ ಅಧಿದೇವತೆ ಮದ್ದೂರಮ್ಮನಿಗೆ ಕ್ಷೀರ ಅಭಿಷೇಕ ಮತ್ತು ಪಂಚಾಮೃತಾಭಿಷೇಕ. ನಡೆಸಲಾಯಿತು.ಕೊಂಡೋತ್ಸವದ ಹಿನ್ನಲೆಯಲ್ಲಿ ಮದ್ದೂರಮ್ಮ ದೇವಿಗೆ ಬಗೆ ಬಗೆಯ ಹೂವುಗಳಿಂದ ವಿಶೇಷವಾದ ಅಲಂಕಾರ ಮಾಡಲಾಗಿತ್ತು.

ಇಂದು ಬೆಳಗ್ಗೆ, ಹಳೇ ಒಕ್ಕಲಿಗರ ಬೀದಿಯಲ್ಲಿರುವ ಮಟ್ಟ ಮನೆಯಿಂದ ಆರು ಗಂಟೆಗೆ ಹೊರಟ ಮದ್ದೂರಮ್ಮ ದೇವಿಗೆ ದಾರಿ ಉದ್ದಕ್ಕೂ ಜನರು ತಂಬಿಟ್ಟಿನ ಆರತಿ ಬೆಳಗಿದರು.ಹಳೇ ಒಕ್ಕಲಿಗರು ಬೀದಿಯಿಂದ ಶುರುವಾದ ದೇವಿಯ ಮೆರವಣಿಗೆ ಕೊಂಡೋತ್ಸವ ನೆರವೇರುವ ದೇವಾಲಯ ಬಳಿ ಬಂದಾಗ ಜನರು ಭಕ್ತಿಭಾವದಿಂದ ಹರ್ಷೋದ್ಘಾರ ಮಾಡಿದರು.

ಎಂಟು ಗಂಟೆಗೆ ಸರಿಯಾಗಿ ಅರ್ಚಕ ಶಿವಣ್ಣ ಅವರ ನೇತೃತ್ವದಲ್ಲಿ ಕೊಂಡೋತ್ಸವ ಸಹಸ್ರಾರು ಭಕ್ತರ ಜೈಕಾರರ ನಡುವೆ ಯಾವುದೇ ಅಡಚಣೆ ಇಲ್ಲದೆ ಸುಗಮವಾಗಿ ನೆರವೇರಿತು.

ಈ ದೇವಿಯ ಕೊಂಡೋತ್ಸವ ಕಣ್ತುಂಬಿಕೊಳ್ಳಲು ಹಾಗೂ ದೇವಿಯ ದರ್ಶನ ಪಡೆಯಲು ರಾಜ್ಯ ,ಜಿಲ್ಲೆಯ ವಿವಿಧ ಭಾಗಗಳಿಂದಲ್ಲದೇ ಮದ್ದೂರು ತಾಲ್ಲೂಕಿನ ಹಳ್ಳಿ- ಹಳ್ಳಿಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು.

ಬೆಂಗಳೂರು- ಮೈಸೂರು ಹೆದ್ದಾರಿಯ ಪಕ್ಕದಲ್ಲಿರುವ ಮದ್ದೂರಮ್ಮ ದೇವಾಲಯದಲ್ಲಿ ಸಹಸ್ರಾರು ಜನರು ತುಂಬಿದ್ದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾದರೂ ಮದ್ದೂರು ಪೋಲಿಸರು ಸ್ಥಳದಲ್ಲಿಯೇ ಇದ್ದು ಸಂಚಾರವನ್ನು ಸುಗಮ ಗೊಳಿಸಿದರು.

ಕೊಂಡೋತ್ಸವದಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಿದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಸಂಖ್ಯಾತ ಭಕ್ತರ ಪಾಲಿಗೆ ಆಶಾಕಿರಣವಾಗಿರುವ ಮದ್ದೂರಮ್ಮ ದೇವಿಯ ಮಹಿಮೆ ಅಪಾರ. ಮದ್ದೂರಮ್ಮ ತಾಯಿ ಒಲಿದರೆ ಜೀವನದಲ್ಲಿ ಯಾವುದೇ ಕಷ್ಟ-ಕಾರ್ಪಣ್ಯಗಳು ಬರುವುದಿಲ್ಲ ಎಂಬುದು ಭಕ್ತರ ನಂಬಿಕೆ.https://www.eedina.com/

ಈ ಊರಿನ ಹಬ್ಬದ ಆಚರಣೆಗಾಗಿ ತಿಂಗಳುಗಟ್ಟೆಲೆ ಮನೆಯನ್ನು ಶುದ್ದಮಾಡಲು ಹಬ್ಬ ಆಚರಿಸುವವರು ಮೀಸಲಿಡುತ್ತಾರೆ. ಹಬ್ಬದ ಆಚರಣೆಗಾಗಿ ದೂರದ ಊರಿನಲ್ಲಿ ಸಂಬಂಧಿಕರು ನೆಲಸಿದ್ದರೂ ಸಹ ಈ ಪೂಜೆಯ ಸಂದರ್ಭದಲ್ಲಿ ಹಬ್ಬಕ್ಕೆ ಬಂದು ನೆಂಟರಿಷ್ಟರೆಲ್ಲಾ ಸೇರಿ ಒಟ್ಟಿಗೆ ದೇವರಿಗೆ ನಡೆದುಕೊಳ್ಳುವುದು ವಾಡಿಕೆ.

ಸದಾ ಭಕ್ತಿಯಿಂದ ಪೂಜೆ ಮಾಡಿದರೆ ಕೇಳಿದ್ದನ್ನು ಕರುಣಿಸುವ ಕರುಣಾಮಯಿ. ಮನದಲ್ಲಿ ದೇವಿಯನ್ನು ನೆನೆದರೆ ಜೀವನದಲ್ಲಿ ನೆಮ್ಮದಿ ಸಿಗುತ್ತದೆ .ಭಕ್ತರ ಇಷ್ಟಾರ್ಥಗಳು ನೆರವೇರುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿದೆ.

ಇದನ್ನೂ ಓದಿ : ಕೊಡಗಿನಿಂದ ಬಂದ ಶಕ್ತಿದೇವತೆ ಮದ್ದೂರಮ್ಮನ ಕೊಂಡೋತ್ಸವ: ಸಿಡಿ- ಜಾತ್ರೆ ಭಕ್ತಿಭಾವಗಳ ಸಂಗಮ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!