Friday, June 14, 2024

ಪ್ರಾಯೋಗಿಕ ಆವೃತ್ತಿ

ಕೊಡಗಿನಿಂದ ಬಂದ ಶಕ್ತಿದೇವತೆ ಮದ್ದೂರಮ್ಮನ ಕೊಂಡೋತ್ಸವ: ಸಿಡಿ- ಜಾತ್ರೆ ಭಕ್ತಿಭಾವಗಳ ಸಂಗಮ

ನ.ಲಿ.ಕೃಷ್ಣ. ಕೃಷಿಕರು, ಸಾಮಾಜಿಕ ಕಾರ್ಯಕರ್ತರು.

ಯುಗಾದಿ ನಂತರ ನಡೆಯುವ ಜಾತ್ರೆಗಳಲ್ಲಿ ಮದ್ದೂರಮ್ಮನವರ ಕೊಂಡೋತ್ಸವವು ಪ್ರಧಾನವಾದದ್ದು.
ಕೊಂಡೋತ್ಸವ, ಸಿಡಿ ,ಜಾತ್ರೆ, ಓಕುಳಿ, ದನಗಳ ಜಾತ್ರೆ ಜೊತೆಗೆ ಉಗ್ರನರಸಿಂಹ ಸ್ವಾಮಿಯವರ ರಥೋತ್ಸವ ಹೀಗೆ ಸರಣಿ ರೂಪದಿ ನಡೆಯುವ ಈ ಹಬ್ಬ ಮದ್ದೂರು ಹಾಗೂ ಸುತ್ತಲಿನ ಹತ್ತು ಹಳ್ಳಿಗಳ ಜನರ ಭಕ್ತಿ ಭಾವದ ಸಂಗಮವಾಗಿಸಲಿದೆ.

ಇದಕ್ಕಾಗಿ ತಿಂಗಳುಗಳ ಕಾಲದ ಸಿದ್ದತೆ ನಡೆಯುತ್ತದೆ. ಇಲ್ಲಿನ ಅರ್ಚಕರು ಹಬ್ಬದ ಸಂಕಲ್ಪ ದಿನದಿಂದ ಹಬ್ಬ ಮುಗಿಯುವರೆಗೆ ತಮ್ಮ ವಾಸದ ಮನೆ ತೊರೆದು ಮದ್ದೂರಮ್ಮನವರ ಮಠ-ಮನೆಯಲ್ಲೆ ಉಳಿದು ಶ್ರದ್ಧಾ ಭಕ್ತಿಯಿಂದ ಹಬ್ಬದ ಸಿದ್ದತೆ ನಡೆಸುತ್ತಾರೆ.

ಏಪ್ರಿಲ್ 19 ಸಂಜೆ ಕೊಂಡೋತ್ಸವಕ್ಕೆ ಸಿದ್ದತೆ ನಡೆದು ಏಪ್ರಿಲ್ 20ರ ಮುಂಜಾನೆ ಕೊಂಡೋತ್ಸವ ನಡೆಯಲಿದೆ. ಮರುದಿನ ಸಿಡಿ, ಮತ್ತೆ ಮರುದಿನ ತಿಂಗಳಿಡಿ ಹಬ್ಬದ ಸಿದ್ದತೆ ನಡೆಸಿ ಹಬ್ಬ ಯಶಸ್ವಿಗೊಂಡ ಸಂಭ್ರಮದ ಸಂಕೇತವಾಗಿ ಓಕುಳಿ ಆಚರಣೆ ನಡೆಯಲಿದೆ. ಸಮುದಾಯದ ಸಹಭಾಗಿತ್ವ ಮತ್ತು ಸಾಮರಸ್ಯದ ಭಾಗವಾಗಿ ಎಲ್ಲಾವರ್ಗದ ಜನರು ಈ ಜಾತ್ರೆಯಲ್ಲಿ ತಮ್ಮ ತಮ್ಮ ಪಾಲಿನ ಕಾಯಕವನ್ನ ಶ್ರದ್ದೆಯಿಂದ ನೆರವೆರಿಸುತ್ತಾರೆ.

ಮೂಲಗ್ರಾಮದ ಹೆಣ್ಣುಳಿ ಪೈಕಿಯವರು ಮತ್ತು ಗಂಡುಳಿ ಪೈಕಿಯವರು ಸೇರಿ ಎರಡು ಎತ್ತಿನ ಬಂಡಿಯಲ್ಲಿ ತಳಿರು ತೊರಣಗಳೊಂದಿಗೆ ಸಿಂಗರಿಸಿಕ್ಕೊಂಡು ಕೊಂಡಕ್ಕೆ ಸೌದೆ ತರುತ್ತಾರೆ. ಕೊಂಡದ ಮರುದಿನ ಮದ್ದೂರಮ್ಮನವರ ಸಾಕು ಮಗ ಸಿಡಿರಣ್ಣನವರ ಉತ್ಸವ ನಡೆಯಲಿದೆ. ಸಿಡಿಯ ನಂತರ ತೊಟ್ಟಿಲಿನಲ್ಲಿ ಮಕ್ಕಳ ಕೂರಿಸಿ ತಿರುಗಿಸಿ ಭಕ್ತರು ಪುನೀತಭಾವ ಹೊಂದುತ್ತಾರೆ. ಸಿಡಿ ಆಡಿಸುವ ಈ ಕ್ಷಣಕ್ಕೆ ಕಣ್ ತುಂಬಿಕ್ಕೊಳ್ಳಲು ಭಕ್ತರ ದಂಡೆ ನೆರೆದಿರುತ್ತದೆ. ಈ ವೇಳೆ ಭಕ್ತರು ಹಣ್ಣು ದವನ ದೇವರಿಗೆ ಹಾಕಿ (ಎಸೆದು) ಭಕ್ತಿಪ್ರದರ್ಶಿಸುತ್ತಾರೆ.

ಹಿನ್ನಲೆ:

ಕೊಡಗಿನ ವ್ಯಾಪಾರಿ ಗಾಡಿಯಲ್ಲಿ ದಿನ ನಿತ್ಯದ ಸಾಮಾನು ತಂದು, ಮದ್ದೂರು ಪ್ರದೇಶದಲ್ಲಿ ಮಾರಾಟ ಮಾಡುವುದು ವಾಡಿಕೆಯಾಗಿರುತ್ತದೆ. ಹೀಗೆ ವ್ಯಾಪಾರ ಮುಗಿಸಿ, ತೊಪಿನಲ್ಲಿ ಗಾಡಿ ಬಿಟ್ಟು ವಿಶ್ರಮಿಸುವ ವೇಳೆ ಈ ಶೆಟ್ಟರ ಬಂಡಿಯಲ್ಲಿ ಕೊಡಗಿನಿಂದ ಬಂದ ಮದ್ದೂರಮ್ಮ ಸಪ್ತಮಾತೃಕೆಯರೊಂದಿಗೆ ಹೀಗಿನ ದೇವಾಲಯ ಇರುವ ಬನ್ನಿ ವೃಕ್ಷ ಇರುವ ಬಳಿ ನೆಲೆಗೊಳ್ಳಲು ತಿರ್ಮಾನಿಸಿ, ಸ್ಥಳದ ಆದಿ ದೈವ ಉಗ್ರನರಸಿಂಹ ಸ್ವಾಮಿಯ ಅನುಮತಿ ಪಡೆದು ನೆಲೆಸುತ್ತಾಳೆ ಎಂಬುದಾಗಿ ಜನಪದ ಕಥೆ ಚಾಲ್ತಿಯಲ್ಲಿದೆ.

ಈ ಪೈಕಿ ಮದ್ದೂರಮ್ಮ, ಹಿರಿಯಮ್ಮ ಮದ್ದೂರಲ್ಲೆ ನೆಲೆನಿಂತು ಉಳಿದ ಐದು ಮಂದಿ ಸಹೋದರಿಯರು ಪಕ್ಕದ ಚನ್ನಪಟ್ಟಣ ತಾಲ್ಲೂಕಿನಲ್ಲಿ ನೆಲೆಸಿದ್ದಾರೆ ಎಂಬುದು ಇಲ್ಲಿನ ಭಕ್ತರ ಭಾವನೆ. ಅದರಂತೆ ಲಕ್ಷ್ಮಿದೇವಿ, ಹುಚ್ಚಮ್ಮ ಚನ್ನಪಟ್ಟಣ ತಾಲ್ಲೂಕಿನ ಬಾನಗಹಳ್ಳಿಯಲ್ಲಿಯು ವಿಜಯನಗರದಮ್ಮ, ಅಂಬಾಡ ಹಳ್ಳಿಯಲ್ಲಿಯ
ನಾಚಿರಮ್ಮ, ಕರ್ಲಹಳ್ಳದಲ್ಲಿಯು ನೆಲೆಸಿದ್ದು ಈ ದೇವಿಯವರ ಜಾತ್ರೆ ಹೀಗಾಗಲೆ ಮುಗಿದಿದ್ದು ಇಲ್ಲಿನ ಭಕ್ತರೆಲ್ಲಾ ಮದ್ದೂರಮನ ಜಾತ್ರೆಗೆ ಬರಲಿದ್ದಾರೆ. ಇದಲ್ಲದೆ ವೈದ್ಯನಾಥಪುರ, ಶಿವಪುರ, ಚನ್ನೇಗೌಡನದೊಡ್ಡಿ, ದೇಶಹಳ್ಳಿ ಸೇರಿದಂತೆ ರಾಮನಗರ ಹಾಗು ಮಂಡ್ಯ ಜಿಲ್ಲೆಯ ಹಲವು ಹಳ್ಳಿಗಳು ಸೇರಿದಂತೆ ಮೈಸೂರು ಬೆಂಗಳೂರಿನಿಂದಲು ಭಕ್ತರು ಈ ಜಾತ್ರೆಗೆ ಆಗಮಿಸುತ್ತಾರೆ. ಪಟ್ಟಣದ ಮೂಲ ನಿವಾಸಿಗಳಲ್ಲದೆ, ಪಟ್ಟಣಕ್ಕೆ ಬಂದು ನೆಲೆಸಿರುವ ಪ್ರತಿ ಕುಟುಂಬವು ಈ ಹಬ್ಬದ ಆಚರಣೆಯನ್ನು ಮನೆ ಮನೆಯಲ್ಲಿಯು ಆಚರಿಸುತ್ತಾರೆ.

ಹಬ್ಬದ ದಿನ ಮದ್ದೂರುಪಟ್ಟಣ ತುಂಬೆಲ್ಲಾ ಸಡಗರ ಸಂಭ್ರಮ ಮನೆ ಮಾಡಿರುತ್ತದೆ. ಸುತ್ತಲ ಹಳ್ಳಿಯ ಭಕ್ತರು ಸಿಡಿ ದಿನದಂದು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಸಿಡಿರಣ್ಣನಿಗೆ ಹಣ್ಣು ದವನ ಅರ್ಪಿಸಿ ಧನ್ಯತಾ ಭಾವ ಹೊಂದುತ್ತಾರೆ. ಮೂಲನಿವಾಸಿಗಳು ಹಾಗೂ ಆಸು-ಪಾಸಿನ ಹಳ್ಳಿಗರನ್ನೊಳಗೊಂಡು, ದೊಡ್ಡಹಳ್ಳಿಯಂತಿರುವ ತಾಲ್ಲೂಕು ಕೇಂದ್ರವಾದ ಮದ್ದೂರು ಪಟ್ಟಣವಿಡಿ ಸಿಂಗಾರಗೊಂಡು ಭಕ್ತಿ ಭಾವ ಮೇಳೈಸಿರುತ್ತದೆ.

ಇದನ್ನೂ ಓದಿ : ಮದ್ದೂರಿನಲ್ಲಿ ದನಗಳ ಜಾತ್ರೆ : ಪಟ್ಡಣದಲ್ಲೀಗ ಜೀವಕಳೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!