Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾವೇರಿಗಾಗಿ ಸಕ್ಕರೆನಗರ ಸ್ತಬ್ಧ: ಮಂಡ್ಯ ಬಂದ್ ಸಂಪೂರ್ಣ ಯಶಸ್ವಿ

ತಮಿಳುನಾಡಿಗೆ ನೀರು ಬಿಡಬೇಕೆಂಬ ಸರ್ವೋಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಜಿಲ್ಲಾ ರೈತ ಹಿತರಕ್ಷಣ ಸಮಿತಿ ಕರೆ ನೀಡಿದ್ದ ಮಂಡ್ಯ ಬಂದ್ ಗೆ ನಗರದ ವರ್ತಕರು, ಅಂಗಡಿ ಮುಂಗಟ್ಟುಗಳ ಮಾಲೀಕರು ಒಕ್ಕೊರಲ ಬೆಂಬಲ ವ್ಯಕ್ತಪಡಿಸಿದ್ದರಿಂದ ಶನಿವಾರ ಇಡೀ ಮಂಡ್ಯನಗರ ಸ್ತಬ್ದವಾಗಿತ್ತು.

ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿಗಳ ಬಾಗಿಲು ಮುಚ್ಚಿ ಬಂದ್ ಬೆಂಬಲಿಸಿದರು, ಬೆಳಿಗ್ಗೆ ತೆರೆದಿದ್ದ ಹೋಟೆಲ್ ಗಳು ಬಂದ್ ಕಾವೇರುತ್ತಿದ್ದಂತೆ ಬಾಗಿಲು ಮುಚ್ಚಿದವು,ಚಿತ್ರ ಮಂದಿರಗಳು ಬೆಳಗಿನ ಮತ್ತು ಮಧ್ಯಾಹ್ನದ ಚಿತ್ರ ಪ್ರದರ್ಶನವನ್ನು ರದ್ದು ಮಾಡಿದ್ದವು, ಸರ್ಕಾರಿ ಮತ್ತು ಖಾಸಗಿ ಬಸ್, ಟೆಂಪೋ ಸೇರಿ ಖಾಸಗಿ ವಾಹನ ಸಂಚಾರ ಸ್ಥಗಿತವಾಗಿತ್ತು, ಇದರಿಂದ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿತ್ತು,ಆಟೋ ಸಂಚಾರ ವಿರಳವಾಗಿತ್ತು, ಕೆಲವು ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು, ಕೆಲವು ಶಾಲೆಗಳಷ್ಟೆ ಬಾಗಿಲು ತೆರೆದಿದ್ದವು, ವಿದ್ಯಾರ್ಧಿಗಳ ಸಂಖ್ಯೆ ವಿರಳವಾಗಿತ್ತು.

ಬಿಕೋ ಎಂದ ರಸ್ತೆಗಳು

ಬಂದ್ ಹಿನ್ನೆಲೆಯಲ್ಲಿ ರಸ್ತೆಗಳು ಬಿಕೋ ಎನ್ನುತ್ತಿದ್ದರೆ ಸಾರ್ವಜನಿಕರ ಓಡಾಟ ಕಡಿಮೆಯಾಗಿತ್ತು, ಬೈಕ್ ಜಾಥಾ ಮೂಲಕ ಮಂಡ್ಯ ನಗರ ಸುತ್ತಿದ ಪ್ರತಿಭಟನಾಕಾರರು ಕೆಲವು ಪ್ರದೇಶಗಳಲ್ಲಿ ತೆರೆದಿದ್ದ ಅಂಗಡಿಗಳ ಬಾಗಿಲು ಮುಚ್ಚಿಸಿದರು. ಪ್ರಮುಖ ಪ್ರದೇಶವಾದ ಪೇಟೆಬೀದಿ, ಬೆಂಗಳೂರು -ಮೈಸೂರು ಹೆದ್ದಾರಿ, ವಿ.ವಿ ರಸ್ತೆ, ಗುತ್ತಲು ರಸ್ತೆ, ಡಾ.ಬಿ. ಆರ್ ಅಂಬೇಡ್ಕರ್ ರಸ್ತೆ,ಆರ್‌, ಪಿ ರಸ್ತೆ, ವಿನೋಬಾ ರಸ್ತೆ, ಕೆ ಆರ್ ರಸ್ತೆ, ವಿವೇಕಾನಂದ ರಸ್ತೆ ಗಳಲ್ಲಿ ವ್ಯಾಪಾರಿಗಳು ಸಂಪೂರ್ಣ ಬಂದ್ ಮಾಡಿದ್ದರು.

nudikarnataka.com

ಕೊನೆಯ ಶನಿವಾರ ನಿಮಿತ್ತ ಕೇಂದ್ರ, ರಾಜ್ಯ ಸರ್ಕಾರಿ ಕಚೇರಿ, ಬ್ಯಾಂಕ್ ಗಳಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳು ಹೆಚ್ಚಿರುವ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಸಾರ್ವಜನಿಕರ ಸಂಖ್ಯೆ ಕಡಿಮೆ ಪ್ರಮಾಣದಲ್ಲಿದ್ದರೆ, ಪ್ರತಿಭಟನಾಕಾರರು ಸಹ ಅತ್ತ ಸುಳಿಯಲಿಲ್ಲ, ಕಾವೇರಿ ಹೋರಾಟದ ಮಂಡ್ಯ ಬಂದ್ ಗೆ ಜನಸಾಮಾನ್ಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಎಲ್ಲಡೆ ಬಿಗಿ ಬಂದೋಬಸ್ತ್ 

ಮಂಡ್ಯ ಬಂದ್ ಹಿನ್ನೆಲೆಯಲ್ಲಿ ನಗರದಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪ್ರಮುಖ ಆಯಾ ಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಸಂಜಯ ವೃತ್ತ, ಮಹಾವೀರ ವೃತ್ತ, ಪ್ಯಾಕ್ಟರಿ ಸರ್ಕಲ್, ಕರ್ನಾಟಕ ಬಾರ್ ಸರ್ಕಲ್, ಹೊಳಲು ಸರ್ಕಲ್ ಮುಂದಾದೆಡೆ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!