Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಕೆ.ವಿ.ಶಂಕರಗೌಡರ ಕುಟುಂಬ ಬೀದಿಪಾಲು ಮಾಡಿದ್ದು ಇಬ್ಬರು ಮೇರು ನಾಯಕರು

ನನ್ನನ್ನು, ನನ್ನ ಕುಟುಂಬವನ್ನು ಬೀದಿ ಪಾಲು ಮಾಡಿದ್ದು ಇಬ್ಬರು ಮೇರು ನಾಯಕರು ಎಂದು ಸ್ವಾಭಿಮಾನಿ ಪಡೆಯ ಪಕ್ಷೇತರ ಅಭ್ಯರ್ಥಿ ಕೆ.ಎಸ್. ವಿಜಯ್ ಆನಂದ್ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯ ನಗರದ ಕಲಾಮಂದಿರದ ಹಿಂಭಾಗದಲ್ಲಿರುವ ಆವರಣದಲ್ಲಿ ಸ್ವಾಭಿಮಾನಿ ಪಡೆ ಏರ್ಪಡಿಸಿದ್ದ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನನಗೆ ಜೆಡಿಎಸ್ ಟಿಕೆಟ್ ತಪ್ಪಿಸಿದ್ದು ಇಬ್ಬರು ಮೇರು ನಾಯಕರು.ಒಬ್ಬರು ಗಣಿ ಧಣಿ ಹಾಗೂ ಇನ್ನೊಬ್ಬರು ಮಂಡ್ಯದ ಜೈಲುಖಾನೆ ಬಳಿ ಇರುವ ಮಹಾನ್ ನಾಯಕ. ಇಬ್ಬರು ಸೇರಿ ನನ್ನನ್ನು, ನಮ್ಮ ಕುಟುಂಬವನ್ನು ಬೀದಿಗೆ ತಂದು ಹಾಳು ಮಾಡಿದರು ಎಂದು ಶಾಸಕ ಸಿ‌.ಎಸ್. ಪುಟ್ಟರಾಜು ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇಶ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಅನ್ಯಾಯ ಮಾಡಿದ್ರು
ಗಣಿಧಣಿ ತನ್ನ ಕ್ಷೇತ್ರವನ್ನು ಸೇಫ್ ಮಾಡಿಕೊಳ್ಳಲು ಆತನ ಆಪ್ತನನ್ನು ಮಂಡ್ಯ ಕ್ಷೇತ್ರಕ್ಕೆ ತಂದು ಟಿಕೆಟ್ ಕೊಡಿಸಿ ನಿಲ್ಲಿಸುವ ಮೂಲಕ ನನ್ನನ್ನು, ನಮ್ಮ ಕುಟುಂಬವನ್ನು ಬೀದಿ ಪಾಲು ಮಾಡಿದ್ದಾರೆ.ಇಡೀ ಜಿಲ್ಲೆಯಲ್ಲಿ ನೀವೇ ಅಧಿಪತಿ ಆಗಬೇಕಾ? ನಮ್ಮಂತ ಬಡಪಾಯಿಗಳು ಯಾರು ಉಳಿಯಬಾರದಾ? ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ನಡೆದ ಸಭೆಯಲ್ಲಿ ನನ್ನ ಮೇಲೆ ಏಕೆ ದ್ವೇಷ ಎಂದು ಕೇಳಿದಾಗ,ಗಣಿಧಣಿ ಅವರು ಕೈಯಲ್ಲಿ ನೀರಿನ ಬಾಟಲಿ ಹಿಡಿದುಕೊಂಡು ನಿಜವಾಗಿಯೂ ನಾನು ನಿನ್ನ ಪರವಾಗಿ ಇದ್ದೇನೆ ಎಂದು ಹೇಳಿದ್ದರು. ಆದರೆ ಶಂಕರಗೌಡರ ಕುಟುಂಬಕ್ಕೆ ಅನ್ಯಾಯ ಮಾಡಿದರು. ಶಂಕರಗೌಡರು ಹಣ,ಆಸ್ತಿ ಮಾಡಿಲ್ಲ. ಆದರೆ ಜನರ ಪ್ರೀತಿ ಸಂಪಾದಿಸಿದ್ದಾರೆ. ನೀವು ದುಡ್ಡು ಕೊಟ್ಟು ಜನರನ್ನು ಕರೆ ತರಬೇಕು. ಆದರೆ ನಮಗೆ ದುಡ್ಡು ಕೊಡದೆ ಬರುವ ಜನರಿದ್ದಾರೆ. ನಮ್ಮ ಕುಟುಂಬಕ್ಕೆ ಅನ್ಯಾಯವಾಗಿದೆ. ನಿಮ್ಮ ಕ್ಷೇತ್ರದಲ್ಲೂ ನಮ್ಮ ತಾತ ಶಂಕರಗೌಡರ ಅಭಿಮಾನಿಗಳಿದ್ದಾರೆ. ಅವರೇ ನನಗಾದ ಅನ್ಯಾಯದ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದರು.

ಪಿಂಚಣಿ ಹಣದಲ್ಲಿ ಜೀವನ
ಎಚ್. ಡಿ‌. ಕುಮಾರಸ್ವಾಮಿ ಅವರು ನನಗೆ ಒಂದು ವರ್ಷದ ಹಿಂದೆಯೇ ಕ್ಷೇತ್ರದಲ್ಲಿ ಓಡಾಡು ಎಂದು ಹೇಳಿದ್ದೆ ಎಂದಿದ್ದಾರೆ. ನನಗೆ ಬಣ ರಾಜಕೀಯ ಮಾಡುವುದು ಬೇಡ ಎಂದು ನಾನು ಹೋಗಲಿಲ್ಲ.ಅವರೇ ನನ್ನನ್ನು ನೀನು ಮಗನ ಸಮಾನ ಅಂದರು.ಅವರೇ ನನ್ನನ್ನು ತಬ್ಬಲಿ ಮಾಡಿದರು. ಆದರೆ ನನಗೆ ಅವರ ಮೇಲೆ ಕೋಪವಿಲ್ಲ. ಆದರೆ ಬೇಸರವಿದೆ‌. ನಾನು ಕುಮಾರಸ್ವಾಮಿಯವರಿಗೆ ಎಂದೂ ಮೋಸ ಮಾಡಿಲ್ಲ.ನನ್ನ ಹಣೆ ಬರಹದಲ್ಲಿ ಏನಿದೆಯೋ, ಅದಾಗುತ್ತದೆ.ನನ್ನನ್ನು ಯಾರೂ ಬಲಿಪಶು ಮಾಡಿಲ್ಲ. ನಾನು ಸಾಲ ಮಾಡಿ ಚುನಾವಣೆ ಮಾಡಿಲ್ಲ. ಜನರಾದ ನೀವು ಏನು ಕೊಟ್ಟಿದ್ದೀರೋ ಅದನ್ನು ನಿಮಗೆ ಕೊಡುತ್ತಿದ್ದೇನೆ.

ನಾನು ನನ್ನ ತಾಯಿ ಕಷ್ಟದಲ್ಲಿದ್ದೇವೆ. ನಮಗೆ 28,500 ರೂ. ಪಿಂಚಣಿ ಬರುತ್ತದೆ.ಈ ಪಿಂಚಣಿ ಹಣದಲ್ಲಿ ಮನೆ ಬಾಡಿಗೆ, ದಿನಸಿ ತಂದು ಜೀವನ ಮಾಡುತ್ತಿದ್ದೇವೆ. ಒಂದು ರಾಷ್ಟ್ರೀಯ ಪಕ್ಷ ನಮ್ಮನ್ನು ಕಣದಿಂದ ಹಿಂದೆ ಸರಿಸಲು ಬಂದಿತ್ತು. ಆದರೆ ನಾನು ಅದಕ್ಕೆ ಆಸ್ಪದ ಕೊಡಲಿಲ್ಲ. ನೀವು ಒಂದು ಮತ ಕೊಡಿ ನಾನು ಗೆದ್ದೇ ಗೆಲ್ಲುತ್ತೇನೆ. ಶಂಕರಗೌಡರ ಮನೆಯನ್ನು ಮಂಡ್ಯ ಕ್ಷೇತ್ರದ ಮತದಾರರು ಉಳಿಸುತ್ತಾರೆ ಎಂದು ದುಃಖದಿಂದ ನುಡಿದರು.

ಗಣಿ ಧಣಿಗಳು ನಮ್ಮ ಮನೆ ಹಾಳು ಮಾಡಿದರು. ದುಡ್ಡು ಮಾಡಿದವರಷ್ಟೇ ಮುಖ್ಯ ಅಲ್ಲ,ಜನಸೇವೆಯು ಮುಖ್ಯ. ನಿಮ್ಮ ಬೆಂಬಲಕ್ಕೆ ನಾನು ಚಿರಋಣಿ ಎಂದು ಜನತೆಗೆ ತಿಳಿಸಿದರು.

ಕೆ.ಎಸ್. ವಿಜಯಾನಂದ ಅವರ ತಾಯಿ ಕುಸುಮ ಸಚ್ಚಿದಾನಂದ ಮಾತನಾಡಿ, ನನ್ನ ಮಗ ನಿಜವಾದ ಬೆಲೆ ಕಟ್ಟಲಾಗದ ವಜ್ರ. ಆತನ ತಾಯಿ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಾಗುತ್ತದೆ. ವಿಜಯಾನಂದನನ್ನು ಗೆಲ್ಲಿಸುವುದು ನಿಮ್ಮ ಕೈಯಲ್ಲಿದೆ. ಆತನ ಗೆಲುವು ಕೆ.ವಿ. ಶಂಕರಗೌಡರ ಗೆಲುವಲ್ಲ, ಮಂಡ್ಯದ ಜನರ ಗೆಲುವು.

ದಯವಿಟ್ಟು ನಿಮ್ಮ ಮನೆ ಮಗನನ್ನು ಗೆಲ್ಲಿಸಿ, ಆಶೀರ್ವದಿಸಿ ಎಂದು ಮನವಿ ಮಾಡಿದರು.

ಶಾಸಕ ಎಂ. ಶ್ರೀನಿವಾಸ್, ಮುಖಂಡರಾದ ತಿಮ್ಮೇಗೌಡ, ಹೆಚ್. ಎನ್ ಯೋಗೇಶ್, ಮುದ್ಧನಘಟ್ಟ ಮಹಾಲಿಂಗೇಗೌಡ, ಲೋಕೇಶ್, ವಿಶಾಲ್ ರಘು, ಪುಟ್ಟಸ್ವಾಮಿ, ಪಿಇಟಿ ಟ್ರಸ್ಟ್ ರಾಮಲಿಂಗಯ್ಯ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!