Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ನಾನೂ ಕೂಡ ಆಕಾಂಕ್ಷಿ

ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ನಾನೂ ಕೂಡ ಆಕಾಂಕ್ಷಿಯಾಗಿದ್ದೇನೆ. ಆದರೆ ಮಂಡ್ಯದಲ್ಲಿ ಜೆಡಿಎಸ್ ಪಕ್ಷ ಸಂಘಟನೆಗೆ ಮೊದಲ ಆದ್ಯತೆ ನೀಡುವುದಾಗಿ ಶ್ರೀ ಶಂಭು ಸೇವಾ ಟ್ರಸ್ಟ್ ಹಾಗೂ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಬಿ.ಆರ್.ರಾಮಚಂದ್ರು ತಿಳಿಸಿದರು.

ಮಂಡ್ಯ ನಗರದ 18 ನೇ ವಾರ್ಡಿನ ಗಾಂಧಿನಗರದಲ್ಲಿ ಶ್ರೀ ಶಂಭು ಸೇವಾ ಟ್ರಸ್ಟ್ ಆಯೋಜಿಸಿದ್ದ ಧರ್ಮಸ್ಥಳ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಾ.ದಳ‌ ವರಿಷ್ಠರಾದ ದೇವೆಗೌಡರು,  ಕುಮಾರಸ್ವಾಮಿಯವರು ಯಾರಿಗೆ ಅವಕಾಶ ಕೊಡುತ್ತಾರೋ ಅವರ ಪರವಾಗಿ ಕೆಲಸ ಮಾಡುತ್ತೇನೆ. ನಾನು ವರಿಷ್ಠರ ಬಳಿ ಬಿ.ಫಾರಂಗಾಗಿ ನಿಯೋಗದೊಂದಿಗೆ ತೆರಳುವುದಿಲ್ಲ.

ಜನರ ಮಧ್ಯೆ ಇದ್ದು, ಮೊದಲು ಪಕ್ಷ ಕಟ್ಟುತ್ತೇನೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಯಾರಿಗೆ ಟಿಕೆಟ್ ಕೊಡುತ್ತಾರೋ ಅವರ ಪರವಾಗಿ ಕೆಲಸ ಮಾಡುತ್ತೇನೆ. ಮುಂಬರುವ ಚುನಾವಣೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲು ಪಕ್ಷ ಸಂಘಟನೆ ಮಾಡುವುದಾಗಿ ತಿಳಿಸಿದರು.

ಶಂಭು ಸೇವಾ ಟ್ರಸ್ಟ್ ವತಿಯಿಂದ ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿಯ ದರ್ಶನ ಮಾಡಿಸಬೇಕೆನ್ನುವುದು ನನ್ನ ಬಯಕೆಯಾಗಿದ್ದು, ಇದಕ್ಕೆ ನಮ್ಮ ತಾಯಿಯವರೇ ಪ್ರೇರಣೆ.

ನಾನು 17 ವರ್ಷ ವಯಸ್ಸಿನಲ್ಲಿದ್ದಾಗ ಧರ್ಮಸ್ಥಳಕ್ಕೆ ಹೋಗಬೇಕೆಂದು ಹೇಳಿದಾಗ ಕೃಷಿ ಕುಟುಂಬದ ಕೆಲಸದಲ್ಲಿಯೇ ನಿರತರಾಗುತ್ತಿದ್ದ ನನ್ನ ತಂದೆ- ತಾಯಿ ಧರ್ಮಸ್ಥಳಕ್ಕೆ ಕರೆದೊಯ್ಯಲು ಹಲವು ವರ್ಷಗಳೇ ಬೇಕಾಯಿತು. ಈ ಹಿನ್ನೆಲೆಯಲ್ಲಿ ಮಂಡ್ಯ ಕ್ಷೇತ್ರದ ತಾಯಂದಿರು, ಅಕ್ಕ-ತಂಗಿಯರಿಗೆ ಶ್ರೀ ಮಂಜುನಾಥ ಸ್ವಾಮಿ ದರ್ಶನ ಮಾಡಿಸಲು ಮುಂದಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಈಗಾಗಲೇ ಕ್ಷೇತ್ರದ ವಿವಿಧ ಗ್ರಾಮದಿಂದ 7 ರಿಂದ 8 ಬಸ್‌ಗಳಲ್ಲಿ ಜನರನ್ನು ಕರೆದೊಯ್ದು ಮಂಜುನಾಥ ಸ್ವಾಮಿಯ ದರ್ಶನ ಮಾಡಿಸಿದ್ದೇನೆ. ಇಂದು ಗಾಂಧಿನಗರದಿಂದ 18ನೇ ವಾರ್ಡಿನಿಂದ 55ಕ್ಕೂ ಹೆಚ್ಚು ಮಂದಿ ಧರ್ಮಸ್ಥಳಕ್ಕೆ ತೆರಳುತ್ತಿದ್ದಾರೆ.

ಇಂದು ಸೌತಡ್ಕ ಗಣಪತಿ ದರ್ಶನ ಮುಗಿಸಿ ಸಂಜೆ ವೇಳೆಗೆ ಧರ್ಮಸ್ಥಳಕ್ಕೆ ತೆರಳಿ ಮಂಜುನಾಥನ ದರ್ಶನ ಪಡೆಯಲಿದ್ದಾರೆ. ನಾಳೆ ಬೆಳಿಗ್ಗೆ ಕುಕ್ಕೆಸುಬ್ರಹ್ಮಣ್ಯ ದೇವರ ದರ್ಶನ ಮಾಡಿಸಿ ನಂತರ ಅವರ ಸ್ವಗ್ರಾಮಕ್ಕೆ ಕರೆತರಲಾಗುವುದು ಎಂದರು.

ಭಕ್ತಾಧಿಗಳಿಗೆ ಊಟ ಹಾಗೂ ವಸತಿಯನ್ನು ಶಂಭು ಸೇವಾ ಟ್ರಸ್ಟ್ ಮೂಲಕ ವ್ಯವಸ್ಥಿತವಾಗಿ ಮಾಡಲಾಗಿದೆ. ನಮ್ಮ ಟ್ರಸ್ಟ್ ಪದಾಧಿಕಾರಿಗಳು, ಹಿತೈಷಿಗಳು ಎಲ್ಲರೂ ಸೇರಿ ಕ್ಷೇತ್ರದ ಜನರಿಗೆ ಮಂಜುನಾಥನ ದರ್ಶನ ಮಾಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಧರ್ಮಸ್ಥಳಕ್ಕೆ ಹೋಗಬೇಕೆನ್ನುವುದು ಮಹಿಳೆಯರ ಇಚ್ಚೆಯಾಗಿರುತ್ತದೆ. ಆದರೆ ಅವರು ಒಬ್ಬೊಬ್ಬರೆ ಹೋಗುವುದಕ್ಕೆ ಆಗುವುದಿಲ್ಲ. ನೆರೆ-ಹೊರೆಯ ಜನರೊಂದಿಗೆ ಹೋಗಿ ಮಂಜುನಾಥನ ಕೃಪೆಗೆ ಪಾತ್ರರಾಗಲಿ ಎಂದು ಶಂಭು ಸೇವಾ ಟ್ರಸ್ಟ್ ಉದ್ದೇಶ ಎಂದರು.

ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಕಾರ್ಯಕ್ರಮ ಆಯೋಜಿಸಿಲ್ಲ. ಇದರಲ್ಲಿ ಬೇರೆ ಯಾವುದೇ ರೀತಿಯ ದುರುದ್ದೇಶವಿಲ್ಲ. ಜನರ ಸೇವೆ ಮಾಡಬೇಕೆಂದು ನನ್ನ ಅಳಿಲು ಸೇವೆಯನ್ನು ಈ ರೀತಿ ಸಲ್ಲಿಸುತ್ತಿದ್ದೇನೆ. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ಮನ್‌ಮುಲ್ ಉಪಾಧ್ಯಕ್ಷ ರಘುನಂದನ್,ಪ್ರಥಮ ದರ್ಜೆ ಗುತ್ತಿಗೆದಾರ ನಟರಾಜ್, ನಗರಸಭೆ ಮಾಜಿ ಸದಸ್ಯ ಎಂ.ಜೆ.ಚಿಕ್ಕಣ್ಣ, ಶಂಭು ಸೇವಾ ಟ್ರಸ್ಟ್ ಕಾರ್ಯದರ್ಶಿ ಬಿ.ಆರ್.ಸುರೇಶ್ ಹಾಗೂ ಮುಖಂಡರಾದ ಹೇಮಂತ್, ಶರತ್, ಅನಿಲ್ ಸೇರಿದಂತೆ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!