Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯಕ್ಕೆ ನಾಡಪ್ರಭು ಕೆಂಪೇಗೌಡ ರಥಯಾತ್ರೆ

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಬೃಹತ್ ಕಂಚಿನ ಪ್ರತಿಮೆ ಅನಾವರಣ ಸಮಾರಂಭದ ಅಂಗವಾಗಿ ಮಂಡ್ಯ ಜಿಲ್ಲೆಯಲ್ಲಿ ನಾಡಪ್ರಭು ಕೆಂಪೇಗೌಡ ರಥಯಾತ್ರೆ ನಡೆಯಲಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ವಿಮಾನ ನಿಲ್ದಾಣದ ಬಳಿ 23 ಎಕರೆಯ ವಿಶಾಲ ಪ್ರದೇಶದಲ್ಲಿ ಕೆಂಪೇಗೌಡ ಉದ್ಯಾನವನ (ಥೀಮ್ ಪಾರ್ಕ್)ನ ನಿರ್ಮಾಣವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ IIರಂದು ಉದ್ಘಾಟನೆ ಮಾಡಲಿದ್ದಾರೆ ಎಂದರು.

ಪೂಜಾ ಶಾಮಿಯಾನದ ಮಾಲೀಕ ರಮೇಶ್ ಮಾತನಾಡಿ, ರಥಯಾತ್ರೆ ಅಭಿಯಾನದ ಅಂಗವಾಗಿ ಪ್ರತೀ ಜಿಲ್ಲೆಯ ಉದ್ದಗಲಕ್ಕೂ ಅ.21ರಿಂದ ನ. 17ರ ವರೆಗೆ ಆಗಮಿಸುತ್ತಿರುವ ಮಣ್ಣು ಸಂಗ್ರಹಿಸುವ ರಥಗಳು (ವಾಹನಗಳು) ಆಯಾ ಪ್ರದೇಶ, ಇಲ್ಲವೇ ಜಿಲ್ಲೆಗಳನ್ನು ಪ್ರವೇಶಿಸಿದಾಗ ಪೂರ್ಣಕುಂಭ ಸ್ವಾಗತದೊಂದಿಗೆ  ಬರಮಾಡಿಕೊಳ್ಳಲಾಗುವುದು ಎಂದರು.

ಮಂಡ್ಯನಗರದ ರೈತ ಸಂಭಾಗಣದ ಆವರಣದಲ್ಲಿರುವ ರಾಷ್ಟ್ರಕವಿ ಕುವೆಂಪು ಅವರ ಪುತ್ಥಳಿ ಹಾಗೂ ನಿತ್ಯ ಸಚಿವ ಶಂಕರೇಗೌಡರ ಪ್ರತಿಮೆ ಬಳಿಯಿಂದ ಪವಿತ್ರ ಮಣ್ಣನ್ನು ಸಂಗ್ರಹಿಸಲಾಗುವುದು ಎಂದು ಹೇಳಿದರು.

ಮಂಡ್ಯ ಅಭಿವೃದ್ಧಿಯ ಉದ್ದೇಶದಿಂದ ಮಂಡ್ಯ ಮುನ್ನಡೆ ಎಂಬ ಸಂಘಟನೆಯನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಈಗಾಗಲೇ 2 ಸಭೆಗಳನ್ನು ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳ ಪ್ರಮುಖ ಸಭೆ ನಡೆಸಿ ಅಭಿವೃದ್ದಿಗೆ ಬೇಕಾದ ಸಲಹೆ ಸೂಚನೆಗಳನ್ನು ಪಡೆಯಲಾಗುವುದು ಎಂದರು.

ಮಳೆ ನಿಂತ ನಂತರ ರಸ್ತೆ ದುರಸ್ತಿ

ಪ್ರಸ್ತುತ ಮಂಡ್ಯದಲ್ಲಿ ನಿತ್ಯ ಮಳೆ ಸುರಿಸುತ್ತಿದ್ದು, ಮಳೆ ನಿಂತ ನಂತರ ನಗರದ ರಸ್ತೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ನಗರಸಭಾಧ್ಯಕ್ಷ ಹೆಚ್.ಸಿ.ಮಂಜು ತಿಳಿಸಿದರು.

ಸುದ್ದಿಗಾರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಹುತೇಕ ಎಲ್ಲಾ ರಸ್ತೆಗಳು ಹದಗೆಟ್ಟಿವೆ, ಮಳೆ ನಿಂತ ತಕ್ಷಣ ಕಾಮಗಾರಿ ಪ್ರಾರಂಭಿಸಲು ಉದ್ಧೇಶಿಸಲಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಒಕ್ಕಲಿಗ ಮುಖಂಡರಾದ ಬಾಣಸವಾಡಿ ನಾಗಣ್ಣ, ನಗರಸಭೆ ಮಾಜಿ ಅಧ್ಯಕ್ಷೆ ಕೆ.ಸಿ.ನಾಗಮ್ಮ, ಕರವೇ ನಗರ ಘಟಕದ ಅಧ್ಯಕ್ಷೆ ಸುಜಾತ ಕೃಷ್ಣ, ಆರ್.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ಬೇಲೂರು ಸೋಮಶೇಖರ್, ಜಿಲ್ಲಾ ಒಕ್ಕಲಿಗರ ಸಂಘದ ಗೌಡಯ್ಯದೊಡ್ಡಿ ತಿಮ್ಮೇಗೌಡ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಹೊಸಹಳ್ಳಿ ನಾಗೇಶ್, ಮುಖಂಡ ಬೋರೇಗೌಡ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!