Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯನಗರಕ್ಕೆ 33 ಸಾವಿರ ಕಸದ ಡಬ್ಬಗಳ ವಿತರಣೆ

ಮಂಡ್ಯ ನಗರದ 35 ವಾರ್ಡುಗಳಿಗೆ ಒಟ್ಟು 33 ಸಾವಿರ ಕಸದ ಡಬ್ಬ(ಡಸ್ಟ್ ಬಿನ್‌)ಗಳನ್ನು ವಿತರಿಸಲು ನಗರಸಭೆ ಆಡಳಿತ ವತಿಯಿಂದ ತೀರ್ಮಾನ ಮಾಡಲಾಗಿದೆ ಎಂದು ಶಾಸಕ ಎಂ.ಶ್ರೀನಿವಾಸ್ ಹೇಳಿದರು.

ಮಂಡ್ಯ ನಗರಸಭೆ ವತಿಯಿಂದ ಹೊಸಹಳ್ಳಿಯ 20ನೇ ವಾರ್ಡಿನಲ್ಲಿ ಹಸಿ ಕಸ ಮತ್ತು ಒಣ ಕಸ ಸಂಗ್ರಹಿಸುವ ಕಸದ ಡಬ್ಬಗಳನ್ನು ಮನೆ ಮನೆಗೆ ತೆರಳಿ ವಿತರಿಸಿ ಅವರು ಮಾತನಾಡಿದರು.

ಸಾರ್ವಜನಿಕರು ಹಸಿ ಕಸ ಮತ್ತು ಒಣ ಕಸವನ್ನು ಬೇರೆ ಬೇರೆ ವಿಂಗಡಿಸಿ ನಗರಸಭಾ ವತಿಯಿಂದ ಬರುವ ಕಸ ಸಂಗ್ರಹಣೆ ವಾಹನಗಳಿಗೆ ಕೊಡಬೇಕು. ಸಾರ್ವಜನಿಕವಾಗಿ ಯಾರು ರಸ್ತೆಯ ಇಕ್ಕೆಲಗಳಲ್ಲಿ ಕಸ ಚೆಲ್ಲಬಾರದು. ಕಸ ಚೆಲ್ಲಿದರೆ ರೋಗ-ರುಜಿನಗಳು ಬರುತ್ತವೆ. ಆದ್ದರಿಂದ ಎಚ್ಚರಿಕೆ ವಹಿಸಬೇಕೆಂದು ಹೇಳಿದರು.

ನಗರಸಭಾ ಅಧ್ಯಕ್ಷ ಎಚ್.ಎಸ್. ಮಂಜು ಮಾತನಾಡಿ, ಈಗಾಗಲೇ ಚಳಿಗಾಲ ಪ್ರಾರಂಭವಾಗಿದ್ದು, ರಸ್ತೆಯಲ್ಲಿ ಕಸ ಹಾಕಿದರೆ, ಅದಕ್ಕೆ ಬೆಂಕಿ ಹಾಕಿ ಪರಿಸರ ಮಾಲಿನ್ಯ ಮಾಡುತ್ತಾರೆ. ಆದ್ದರಿಂದ ಯಾರೂ ಕೂಡ ಕಸವನ್ನು ರಸ್ತೆಗೆ ಹಾಕುವುದಾಗಲಿ, ಪ್ಲಾಸ್ಟಿಕ್ ಕವರಲ್ಲಿ ಕಟ್ಟಿ ಎಸೆಯುವುದಾಗಲಿ ಮಾಡಬಾರದು. ನಗರ ಸಭೆಯಿಂದ ನೀಡಲಾಗಿರುವ ಡಬ್ಬಿಗಳಲ್ಲಿ, ವಿಂಗಡಣೆ ಮಾಡಿ ಕೊಡುವಂತೆ ಕೋರಿದರು.

ಇದೇ ಸಂದರ್ಭದಲ್ಲಿ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಶಾಸಕ ಎಂ.ಶ್ರೀನಿವಾಸ್ ಅವರು, ಶೌಚಾಲಯದ ಕಾಮಗಾರಿ ಹಾಗೂ ನೆಲಹಾಸುಗಳ ಟೈಲ್ಸ್ ಗಳನ್ನು ವೀಕ್ಷಿಸಿ, ಇದು ಖಾಸಗಿ ಶಾಲೆಯಂತೆ ಕಂಗೊಳಿಸಲು ನನ್ನ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ನಗರದ ನಾಲ್ಕು ಮೂಲೆಯಲ್ಲೂ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೇಕೆಂಬುದು ನನ್ನ ಆಸೆ. ಈಗಾಗಲೇ ಸರ್ಕಾರಿ ಕಾಲೇಜಿನಲ್ಲಿ ಮಾಡಲಾಗಿದೆ. ಉಳಿದ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಮಂಜೂರು ಮಾಡಲು ಪ್ರಯತ್ನ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಇಷ್ರತ್ ಫಾತಿಮಾ, ಸದಸ್ಯೆ ಮೀನಾಕ್ಷಿ ಪುಟ್ಟಸ್ವಾಮಿ, ಆಯುಕ್ತ ಮಂಜುನಾಥ್, ಗಿರೀಶ್, ಸಂಜನಾ, ರುದ್ರೇಗೌಡ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!