Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ ಜಿಲ್ಲಾ ಉಸ್ತುವಾರಿ ಸ್ಥಾನದಿಂದ ಸಚಿವ ಆರ್ ಅಶೋಕ್‌ ಗೆ ಮುಕ್ತಿ !

ಕಂದಾಯ ಸಚಿವ ಆರ್. ಅಶೋಕ್ ರನ್ನು ಮಂಡ್ಯ ಜಿಲ್ಲಾ ಉಸ್ತುವಾರಿಯ ಜವಾಬ್ಧಾರಿಯಿಂದ  ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ ಸಿ.ಎಂ. ಬಸವರಾಜ್ ಬೊಮ್ಮಾಯಿ. ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ‌ ಕಂದಾಯ ಸಚಿವ ಆರ್.  ಅಶೋಕ್‌ ಮಂಡ್ಯ ಜಿಲ್ಲಾ ಉಸ್ತುವಾರಿ ಜವಾಬ್ಧಾರಿಯಿಂದ ವಿಮುಖರನ್ನಾಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ಸಿ.ಎಂ. ಬಸರಾಜ್ ಬೊಮ್ಮಾಯಿಯವರು ಬೆಂಗಳೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಚಿವ  ಆರ್. ಅಶೋಕ್ ಪತ್ರದ ಸಾರಾಂಶ ಹೀಗಿದೆ

“26ನೇ ಜನವರಿ 2023ರ ಗಣರಾಜ್ಯೋತ್ಸವ ದಿನಾಚರಣೆ ದಿನದಂದು ಮಂಡ್ಯ ಜಿಲ್ಲಾ ಕೇಂದ್ರದಲ್ಲಿ ಧ್ವಜಾರೋಹಣ ಮಾಡಲು ನನ್ನನ್ನು ನೇಮಿಸಿದ್ದು, ಅದೇ ಸಂದರ್ಭದಲ್ಲಿ ನನ್ನನ್ನು ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿತ್ತು. ತಾವು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ನನಗೆ ಯಾವುದೇ ಜಿಲ್ಲೆಯ ಉಸ್ತುವಾರಿ ನೀಡದಂತೆ ತಮ್ಮಲ್ಲಿ ಮನವಿ ಮಾಡಿದ್ದೆ. ಆದಾಗ್ಯೂ, ತಾವು ನನ್ನ ಮೇಲೆ ವಿಶ್ವಾಸವಿಟ್ಟು ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವನನ್ನಾಗಿ ನೇಮಿಸಿರುವುದಕ್ಕೆ ನಾನು ಆಭಾರಿಯಾಗಿರುತ್ತೇನೆ.”

“ಆದರೆ ನನ್ನ ಇಲಾಖೆಯ ಅಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಇನ್ನಷ್ಟು ಫಲಪ್ರದವನ್ನಾಗಿಸಬೇಕಾದ ಜವಾಬ್ಧಾರಿಯೂ ನನ್ನ ಮೇಲಿದೆ. ಆ ನಿಟ್ಟಿನಲ್ಲಿ ಈಗಾಗಲೇ ಹಲವು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಅವುಗಳ ಅನುಷ್ಠಾನಕ್ಕೆ ಕಾಯುತ್ತಿದೇನೆ. ಇದರ ಜೊತೆಗೆ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಂಘಟನಾ ಸಮಿತಿಗೆ ನನ್ನನ್ನು ಅಧ್ಯಕ್ಷನನ್ನಾಗಿ ನೇಮಿಸಿದ್ದು, ಮಾರ್ಚ್ 23ರಿಂದ ಮಾರ್ಚ್ 30 ರವರೆಗೆ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಯಶಸ್ವಿಯಾಗಿ ನಡೆಸಬೇಕಾಗಿರುತ್ತದೆ. ಹೀಗಾಗಿ ನನ್ನ ಜವಾಬ್ಧಾರಿಗಳಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ, ಈ ಕಾರ್ಯಕ್ರಮಗಳತ್ತ ನಾನು ಹೆಚ್ಚು ತೊಡಗಿಸಿಕೊಳ್ಳಲು ಸಮಯ ವಿನಿಯೋಗಿಸಬೇಕಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವರ ಜವಾಬ್ದಾರಿಯಿಂದ ನನ್ನನ್ನು ವಿಮುಕ್ತಿಗೊಳಿಸಬೇಕೆಂದು ಕೋರುತ್ತೇನೆ” ಎಂದು ಅಶೋಕ್ ಸಿಎಂಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

nudikarnataka.com

ಇದೇ ವೇಳೆ ತಾವು ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬೈಕ್ ಜಾಥಾ ಮೂಲಕ ಸ್ವಾಗತಿಸಿದ, ಜಿಲ್ಲೆಯ ಜನರ ಪ್ರೀತಿಗೆ ನಾನು ಚಿರಋಣಿ ಎಂದಿರುವ ಅಶೋಕ್, ಮಂಡ್ಯ ಜಿಲ್ಲೆಯ ಎಲ್ಲಾ ನಾಗರಿಕ ಬಂಧುಗಳಿಗೆ ಸಾಷ್ಟಾಂಗ ನಮಸ್ಕಾರಗಳನ್ನು ತಿಳಿಸಿ ಪತ್ರ ಮುಕ್ತಾಯಗೊಳಿಸಿದ್ದಾರೆ.

ಬಿಜೆಪಿ ಪಕ್ಷವು ಕಂದಾಯ ಸಚಿವ ಆರ್.ಅಶೋಕ್ ಮೂಲಕ ಮಂಡ್ಯದಲ್ಲಿ ಪಕ್ಷ ಸಂಘಟನೆ ಮಾಡಬೇಕೆಂದು ಪ್ಲಾನ್ ಮಾಡಿಕೊಂಡಿತು. ಸಚಿವ ಆರ್. ಅಶೋಕ್ ನೇಮಕಕ್ಕೆ ಜಿಲ್ಲೆಯಲ್ಲಿ ಭಿನ್ನಮತ ಸೃಷ್ಟಿಯಾಗಿತ್ತು.  ಸ್ವಪಕ್ಷದ ಕಾರ್ಯಕರ್ತರಿಂದಲೇ ಸಚಿವ ಆರ್.ಅಶೋಕ್ ವಿರುದ್ದ ಗೋ ಬ್ಯಾಕ್ ಚಳುವಳಿ ಮಾಡಿದ್ದರಿಂದ, ಬಿಜೆಪಿ ಪಕ್ಷವು ತೀವ್ರ ಮುಜಗರಕ್ಕೆ ಒಳಗಾಗಿತ್ತು. ಸಚಿವ ಆರ್ ಅಶೋಕ್ ರವರು ಜಿಲ್ಲೆಯ ಉಸ್ತುವಾರಿಯನ್ನು  ವಹಿಸಿಕೊಳ್ಳುವ ಮುಂಚೆಯೇ ಬದಲಾವಣೆಯಾಗಿದ್ದಾರೆ.

ಮಂಡ್ಯ ಜಿಲ್ಲೆಯ ಜವಾಬ್ದಾರಿಯನ್ನು ಯಾರು ಹೊತ್ತುಕೊಳ್ಳುತ್ತಾರೆ ಎಂಬುದು ಈಗ ಪ್ರಶ್ನೆಯಾಗಿದೆ. ಮತ್ತೆ ಸಚಿವ ಕೆ.ಸಿ. ನಾರಾಯಣಗೌಡ ಅಥವಾ  ಸಚಿವ ಕೆ.ಗೋಪಾಲಯ್ಯ  ಮಂಡ್ಯ ಜಿಲ್ಲೆಯ ಉಸ್ತುವಾರಿಯ ಜವಾಬ್ದಾರಿ  ಹೊತ್ತುಕೊಳ್ಳುತ್ತಾರಾ ಎನ್ನುವುದು ನೋಡಬೇಕಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ