Thursday, September 19, 2024

ಪ್ರಾಯೋಗಿಕ ಆವೃತ್ತಿ

ರವಿಕಾಂತೇಗೌಡ ತೇಜೋವಧೆ: ಕಿಡಿಗೇಡಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಕೇಂದ್ರ ವಲಯ ಬೆಂಗಳೂರು ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಅವರ ಬಗ್ಗೆ ವ್ಯವಸ್ಥಿತ ತೇಜೋವಧೆ ಮಾಡುತ್ತಿರುವ ಸಮಾಜಘಾತುಕ ವ್ಯಕ್ತಿಗಳ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಮಂಡ್ಯ ಜಿಲ್ಲಾ ಸ್ವಾಭಿಮಾನಿ ಪಡೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿದರು.

ಮಂಡ್ಯ ನಗರದ ರೈತರ ಸೊಸೈಟಿ ಆವರಣದಲ್ಲಿ ಜಮಾವಣೆಗೊಂಡ ವಿವಿಧ ಸಂಘಟನೆಗಳ ನೂರಾರು ಮಂದಿ, ರಾಷ್ಟ್ರಕವಿ ಕುವೆಂಪು ಹಾಗೂ ನಿತ್ಯ ಸಚಿವ ಕೆ.ವಿ. ಶಂಕರಗೌಡ ಅವರ ಪ್ರತಿಮೆಗಳಿಗ ಮಾಲಾರ್ಪಣೆ ಮಾಡಿ, ಬಳಿಕ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ದಕ್ಷ ಅಧಿಕಾರಿ ಬಿ.ಆರ್. ರವಿಕಾಂತೇಗೌಡ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿರುವ ಸಮಾಜಘಾತಕ ವ್ಯಕ್ತಿಗಳಾದ ಕೆ.ಜೆ.ಕೃಷ್ಣ ಹಾಗೂ ರಾಕೇಶ್ ಶೆಟ್ಟಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ರವಿಕಾಂತೇಗೌಡ ಅವರು ತಮ್ಮ ಸೇವಾ ಅವಧಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಸಂದರ್ಭಗಳಲ್ಲಿ ಹಾಗೂ ಈಗಾಗಲೇ ರಾಷ್ಟçಪತಿ, ಮುಖ್ಯಮಂತ್ರಿ ಪದಕ ಪಡೆದು ಉತ್ತಮ ಕರ್ತವ್ಯನಿರ್ವಹಿಸುತ್ತಿರುವ ಹಲವು ಉದಾಹರಣೆಗಳಿದ್ದರೂ ಕೆಲ ವ್ಯಕ್ತಿಗಳು ಇವರನ್ನು ತೇಜೋವಧೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಖಾಸಗಿ ವಾಹಿನಿಯ ಎಂಡಿ ರಾಕೇಶ್ ಶೆಟ್ಟಿ ಹಾಗೂ ಭೂಗಳ್ಳ, ಸಮಾಜಘಾತಕ ಕೆ.ಜೆ. ಕೃಷ್ಣ ಅವರು ಹುನ್ನಾರ ನಡೆಸಿ, ಜತೆಗೆ ವ್ಯವಸ್ಥಿತ ಸಂಚು ನಡೆಸಿ ಸುಳ್ಳು ಸುದ್ದಿಯನ್ನು ಬಿತ್ತರಿಸುವ ಮೂಲಕ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.

ಕೆ.ಜೆ.ಕೃಷ್ಣ ಭೂ ವ್ಯವಹಾರದಲ್ಲಿ ಅಮಾಯಕರಿಗೆ ವಂಚನೆ ಮಾಡಿರುವ ಬಗ್ಗೆ ವಿವಿಧ ನ್ಯಾಯಾಲಯಗಳಲ್ಲಿ ಸುಮಾರು 10 ಪ್ರಕರಣಗಳು ದಾಖಲಾಗಿದ್ದು, ವಿವಿಧ ಜಿಲ್ಲೆಗಳಲ್ಲಿ ಈತನಿಂದ ಬಹಳಷ್ಟು ಜನರಿಗೆ ವಂಚನೆ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಜತೆಗೆ ರಾಕೇಶ್ ಶೆಟ್ಟಿ ವಿರುದ್ಧ ವಂಚನೆ ಮಾಡಿರುವ ಬಗ್ಗೆ ಸುಮಾರು 18 ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದರೂ ಅಮಾಯಕ ಜನರನ್ನು ವಂಚಿಸಿ ತೇಜೋವಧೆ ಮಾಡುವ ಮೂಲಕ ಇಂತಹ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ದೂರಿದರು.

ಸರ್ಕಾರ ಕೂಡಲೇ ಸಮಾಜಘಾತಕ ವ್ಯಕ್ತಿಗಳ ಬಗ್ಗೆ ತನಿಖೆ ನಡೆಸಿ ಇಂತಹ ವ್ಯಕ್ತಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು. ದಕ್ಷ ಪ್ರಾಮಾಣಿಕ ಅಧಿಕಾರಿಗಳಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡುವ ಜತೆಗೆ ಅವರ ಬೆನ್ನೆಲುಬಾಗಿ ನಿಲ್ಲಬೇಕೆಂದು ಒತ್ತಾಯಿಸಿದರು.

ರಾಜ್ಯದಲ್ಲಿ ದಕ್ಷ ಹಾಗೂ ಪ್ರಾಮಾಣಿಕವಾಗಿ ಕರ್ತವ್ಯನಿರ್ವಹಿಸುವ ಅಧಿಕಾರಿಗಳ ಮೇಲೆ ಕೆಲ ವ್ಯಕ್ತಿಗಳು ಇಲ್ಲಸಲ್ಲದ ಆರೋಪ ಮಾಡಿ ಹಣ ಗಳಿಕೆಗೆ ಮುಂದಾಗುತ್ತಿದ್ದು, ಸರ್ಕಾರ ಕೂಡಲೇ ಇಂತಹವರನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸುವ ಜತೆಗೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಹೆಚ್ಚಿನ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಡಾ. ಎಚ್.ಎಸ್. ಮುದ್ದೇಗೌಡ, ಪ್ರೊ. ಜಿ.ಟಿ. ವೀರಪ್ಪ, ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ರಮೇಶ್, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯ ಉಪಾಧ್ಯಕ್ಷ ಕೃಷ್ಣ, ಜಿಲ್ಲಾ ಅಧ್ಯಕ್ಷ ಕೆ.ಸಿ.ರವೀಂದ್ರ, ಬೋರ್‌ವೆಲ್ ನಾರಾಯಣ, ಸುಜಾತ ಕೃಷ್ಣ, ಮನ್‌ಮುಲ್ ಮಾಜಿ ನಿರ್ದೇಶಕಿ ಸುಜಾತ, ಯುವ ಪ್ರಶಸ್ತಿ ಪುರಸ್ಕೃತರಾದ ಕಾರಸವಾಡಿ ಮಹದೇವು, ಮಂಗಲ ಲಂಕೇಶ್ ಸೇರಿದಂತೆ ಒಕ್ಕಲಿಗರ ಸಂಘ, ದಸಂಸ, ಕೂಲಿ ಕಾರ್ಮಿಕರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!